Advertisement

ಚೇತರಿಕೆಯ ಹಾದಿಯತ್ತ ಆರ್ಥಿಕತೆ

01:41 AM Sep 04, 2021 | Team Udayavani |

ಎಲ್ಲರೂ ಬಹಳ ಕಾತರದಿಂದ ಕಾಯುತ್ತಿದ್ದ 2021-22ರ ಹಣ ಕಾಸು ವರ್ಷದ ಮೊದಲ ತ್ತೈಮಾ ಸಿಕ ಅವಧಿಯ ಜಿಡಿಪಿ(ಒಟ್ಟು ದೇಶೀಯ ಉತ್ಪನ್ನ)ಯ ಮಾಹಿತಿ ಕೊನೆಗೂ ಹೊರಬಿದ್ದಿದೆ. ನಿರೀಕ್ಷೆ ಯಂತೆಯೇ ಭಾರತದ ಆರ್ಥಿ ಕತೆಯು 2020-21ರ ವಿತ್ತ ವರ್ಷದ ಮೊದಲ ತ್ತೈಮಾಸಿಕ ದಲ್ಲಿ ಶೇ.20.1ರ ಪ್ರಗತಿ ದಾಖಲಿಸಿದೆ.

Advertisement

ಕೊರೊನಾ ಎರಡನೇ ಅಲೆ ಉಂಟುಮಾಡಿದ ಬಿಕ್ಕಟ್ಟು, ಜಾಗತಿಕ ಆರ್ಥಿಕತೆಯಲ್ಲಿ ಎದ್ದ ಬಿರುಗಾಳಿ ಮತ್ತಿತರ ಅನೇಕ ಅಂಶಗಳು ಆರ್ಥಿಕತೆಯ ನಿಧಾನಗತಿಯ ಚೇತರಿಕೆಗೆ ಇಂಬು ನೀಡಿದವು. ಇನ್ನು ಸೇವಾ ವಲಯವನ್ನು ವಿಶೇಷವಾಗಿ ಪ್ರಯಾಣ ಮತ್ತು ಆತಿಥ್ಯ ಕ್ಷೇತ್ರವನ್ನು ಈ ಬೆಳವಣಿಗೆಗಳು ಹಿಂಡಿ ಹಿಪ್ಪೆ ಮಾಡಿದವು. ಈ ಎಲ್ಲ ಅಸಾಮಾನ್ಯ ವಿದ್ಯಮಾನಗಳ ನಡುವೆಯೂ ಆರ್ಥಿಕತೆಯು ಹಳಿಗೆ ಮರಳಿರುವುದು ಶ್ಲಾಘನೀಯ. ಮುಂಬರುವ ತ್ತೈಮಾಸಿಕಗಳಲ್ಲೂ ಇದು ಇನ್ನಷ್ಟು ಚೇತರಿಕೆ ಕಾಣುವ ವಿಶ್ವಾಸವನ್ನೂ ಮೂಡಿಸಿದೆ.

ಯಾವುದೇ ಕ್ಷಣದಲ್ಲಾದರೂ ಸೋಂಕಿನ ಮೂರನೇ ಅಲೆಯು ದೇಶವನ್ನು ಅಪ್ಪಳಿಸುವ ಭೀತಿ ಇದೆ. ಹೀಗಿರುವಾಗ ಭಾರತ ಅಥವಾ ಜಾಗತಿಕ ಆರ್ಥಿಕತೆಯ ಸಾಧನೆಯನ್ನು ಊಹಿಸುವುದು ಬಹಳ ಕಷ್ಟ. ಹೀಗಿದ್ದಾಗ್ಯೂ, ಪಿಎಂಐ ಸೂಚ್ಯಂಕ(ಮ್ಯಾನುಫ್ಯಾಕ್ಚರಿಂಗ್‌ ಪರ್ಚೇಸ್‌ ಮ್ಯಾನೇಜರ್ಸ್‌ ಇಂಡೆಕ್ಸ್‌)ವನ್ನು ನೋಡುವುದಾದರೆ ಉತ್ಪಾದನ ವಲಯದ ಪ್ರಗತಿ ಸೂಚ್ಯಂಕ 55.3ಕ್ಕೆ ತಲುಪಿದ್ದರೆ ಸೇವಾ ವಲಯದ ಪಿಎಂಐ 45.4 ಆಗಿದೆ. ಆರ್ಥಿಕತೆಯ ಈ ವಿಭಾಗಗಳು ಮುಂದಿನ ತ್ತೈಮಾಸಿಕದ ಕುರಿತು ಸಕಾರಾತ್ಮಕ ಭಾವನೆ ಮೂಡಿಸಿದೆ ಎಂದು ಹೇಳಬಹುದು. ಇನ್ನು, ಪ್ರಸಕ್ತ ವರ್ಷ ವಾಡಿಕೆ ಮಳೆಯ ನಿರೀಕ್ಷೆಯಿರುವ ಕಾರಣ ಆರ್ಥಿಕತೆಯ ಮೂರನೇ ವಿಭಾಗವಾದ ಕೃಷಿ ಕೂಡ ಉತ್ತಮ ಪ್ರಗತಿ ಸಾಧಿಸುವ ಮುನ್ಸೂಚನೆ ನೀಡಿದೆ.

“ಗ್ರಾಹಕರು ಮಾಡುವ ವೆಚ್ಚ’ವನ್ನು ಆರ್ಥಿಕತೆಯ ಚಾಲಕ ಶಕ್ತಿ ಎಂದು ಕರೆಯಲಾಗುತ್ತದೆ. ಕೊರೊನಾ ಸೋಂಕಿನ ಹಾವಳಿ ಉತ್ತುಂಗದಲ್ಲಿದ್ದಾಗ ಆದಾಯವು ಕಡಿಮೆಯಿದ್ದಾಗ ಅನುಭವಿಸಿದ ಸಂಕಷ್ಟಗಳು ಹಾಗೂ ಕ್ಲೇಶಗಳು ಇನ್ನೂ ಜನಮಾನಸದಿಂದ ದೂರವಾಗಿಲ್ಲ. ಹೀಗಾಗಿ ಈಗಷ್ಟೇ ಗ್ರಾಹಕರು ನಿಧಾನವಾಗಿ ಹಾಗೂ ಎಚ್ಚರಿಕೆಯಿಂದ ಹಣವನ್ನು ವೆಚ್ಚ ಮಾಡತೊಡಗಿದ್ದಾರೆ.

ಇನ್ನೊಂದು ಪ್ರಮುಖ ವಿಚಾರವೆಂದರೆ, ಲಸಿಕೆ ವಿತರ ಣೆಯ ವೇಗ. ದೇಶಾದ್ಯಂತ ಲಸಿಕೆ ವಿತರಣೆ ಪ್ರಕ್ರಿಯೆಯು ವೇಗ ಪಡೆದುಕೊಂಡಿದ್ದು, ಸರಕಾರವು ಪ್ರತಿನಿತ್ಯ ಹೊಸ ಹೊಸ ಮೈಲುಗಲ್ಲುಗಳನ್ನು ಸಾಧಿಸುತ್ತಿದೆ. ಈ ಬದ್ಧತೆ ಹಾಗೂ ವೇಗವು, ಕೊರೊನಾ ಸೋಂಕಿನ ಸಂಭಾವ್ಯ ಮೂರನೇ ಅಲೆಯ ಭೀಕರತೆಯನ್ನು ಖಂಡಿತಾ ತಗ್ಗಿಸುವ ವಿಶ್ವಾಸವಿದೆ.

Advertisement

ಆರ್ಥಿಕತೆಯ ಮಾಪಕ ಎಂದೇ ಪರಿಗಣಿಸಲಾದ ಷೇರು ಮಾರುಕಟ್ಟೆ ಕೂಡ ಪ್ರತೀ ದಿನ ಏರುಮುಖವಾಗಿ ಸಾಗುತ್ತಿದೆ. ವಿದೇಶಿ ಸಾಂಸ್ಥಿಕ ಹೂಡಿಕೆ ಹಾಗೂ ವಿದೇಶಿ ನೇರ ಬಂಡವಾಳ ಹೂಡಿಕೆಗಳೂ ಹೆಚ್ಚುತ್ತಿದ್ದು, ಹೂಡಿಕೆದಾರರು ಭಾರತದ ಆರ್ಥಿಕತೆಯ ಮೇಲೆ ಭಾರೀ ವಿಶ್ವಾಸವಿಟ್ಟಿರುವುದಕ್ಕೆ ಸಾಕ್ಷಿ. ವಿದೇಶಿ ವಿನಿಮಯ ಮೀಸಲು ಕೂಡ ಸಾರ್ವಕಾಲಿಕ ದಾಖಲೆ ಬರೆದಿದೆ.

ರೂಪಾಯಿ ಮೌಲ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಅದನ್ನು ತೀವ್ರ ಕುಸಿತದಿಂದ ರಕ್ಷಿಸಲೋಸುಗ ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಎಲ್ಲ ರೀತಿಯ ಪ್ರಯತ್ನಗಳನ್ನೂ ನಡೆಸುತ್ತಿದೆ. ಕೇಂದ್ರ ಸರಕಾರ ಕೂಡ ವೆಚ್ಚದಲ್ಲಿ ಹೆಚ್ಚಳ ಮಾಡುತ್ತಿದ್ದು, “ಸಂಪತ್ತು ಕ್ರೋಡೀಕರಣ ಯೋಜನೆ’ಯು ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಿ, ದೇಶವನ್ನು ಅಭಿವೃದ್ಧಿಯ ಪಥದತ್ತ ಸಾಗಲು ನೆರವಾಗಲಿದೆ.

ನಿರ್ಮಾಣ ಕ್ಷೇತ್ರ, ಪ್ರಯಾಣ-ಪ್ರವಾಸೋದ್ಯಮ ವಲಯ, ಆಹಾರ ಮತ್ತು ಕ್ಯುಎಸ್‌ಆರ್‌ ವಲಯಗಳೆಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದ್ದು, ಈ ಪೈಕಿ ಕೆಲವೊಂದು ಕ್ಷೇತ್ರಗಳು ಕೊರೊನಾಪೂರ್ವ ಸ್ಥಿತಿಗೆ ತಲುಪಿವೆ.

ಈಗ ಹೊರಬಂದಿರುವ ಪ್ರಗತಿಯ ದತ್ತಾಂಶಗಳು ಕೇವಲ ದೇಶದ ಆರ್ಥಿಕತೆಯ ದಿಕ್ಕನ್ನು ಸೂಚಿಸುವಂಥವು.
ಒಟ್ಟಿನಲ್ಲಿ ಈ “ಚೇತರಿಕೆಯ ಸುದ್ದಿ’ಯು ನಾವು “ವಿ-ಶೇಪ್‌ ರಿಕವರಿಯ ಹಂತದಲ್ಲಿದ್ದೇವೆ’ ಎಂಬುದನ್ನು ಸುಲಭವಾಗಿ ತೋರಿಸುತ್ತದೆ. ಹಾಗೆಂದು ನಮ್ಮ ಹಿಂದೆ “ಕೆಟ್ಟ ದಿನ’ಗಳೂ ಇರಬಹುದು ಎಂಬ ಎಚ್ಚರಿಕೆಯನ್ನು ಮರೆಯುವಂತಿಲ್ಲ. ಏಕೆಂದರೆ, ಕೊರೊನಾ ಸೋಂಕು ಎಂಬ ಮಹಾಮಾರಿ ಇನ್ನೂ ಮಾಯವಾಗಿಲ್ಲ.

– ಡಿ.ಮುರಳೀಧರ್‌

Advertisement

Udayavani is now on Telegram. Click here to join our channel and stay updated with the latest news.

Next