Advertisement

Economy; ಆಟೋ, ಫಾರ್ಮಾ, ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಹೊಸ ಉದ್ಯೋಗಗಳು: ಪ್ರಧಾನಿ

05:23 PM Aug 28, 2023 | Team Udayavani |

ಹೊಸದಿಲ್ಲಿ: ಭಾರತದ ಆರ್ಥಿಕತೆಯು ಕ್ಷಿಪ್ರ ಬೆಳವಣಿಗೆಯ ಹಾದಿಯಲ್ಲಿದ್ದು, ಯುವಜನರಿಗೆ ಉದ್ಯೋಗಕ್ಕಾಗಿ ದೊಡ್ಡ ಅವಕಾಶಗಳನ್ನು ಸೃಷ್ಟಿಸಲು ಕಾರಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.

Advertisement

ದೇಶದಾದ್ಯಂತ 45 ಸ್ಥಳಗಳಲ್ಲಿ ಕೇಂದ್ರೀಯ ಅರೆಸೇನಾ ಪಡೆಗಳು, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮತ್ತು ದೆಹಲಿ ಪೋಲೀಸ್‌ಗೆ ಹೊಸದಾಗಿ ನೇಮಕಗೊಂಡಿರುವವರ ನೇಮಕಾತಿ ಪತ್ರಗಳನ್ನು ವಿತರಿಸುವ ರೋಜ್‌ಗಾರ್ ಮೇಳವನ್ನು ಉದ್ದೇಶಿಸಿ ಮೋದಿ ವರ್ಚುವಲ್ ಆಗಿ ಮಾತನಾಡಿದರು.

ಭದ್ರತಾ ಸಂಸ್ಥೆಗಳಿಗೆ 51,000 ನೇಮಕಾತಿ ಪತ್ರಗಳನ್ನು ವಿತರಿಸಿ ಮಾತನಾಡಿ, ಆಟೋಮೊಬೈಲ್, ಫಾರ್ಮಾ, ಪ್ರವಾಸೋದ್ಯಮ ಮತ್ತು ಆಹಾರ ಸಂಸ್ಕರಣಾ ಕ್ಷೇತ್ರಗಳು ತ್ವರಿತ ಗತಿಯಲ್ಲಿ ಬೆಳೆಯುವ ನಿರೀಕ್ಷೆಯಿದೆ ಮತ್ತು ಯುವಕರಿಗೆ ಉದ್ಯೋಗಾವಕಾಶಗಳನ್ನು ತೆರೆಯುವ ನಿರೀಕ್ಷೆಯಿದೆ ಎಂದರು.

ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದೆ ಮತ್ತು ಈ ದಶಕದಲ್ಲಿ ಶೀಘ್ರದಲ್ಲೇ ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ ಮತ್ತು ಸಾಮಾನ್ಯ ಜನರಿಗೆ ಪ್ರಯೋಜನಗಳನ್ನು ತರಲಿದೆ. ಯಾವುದೇ ಆರ್ಥಿಕತೆ ಬೆಳೆಯಲು, ಪ್ರತಿಯೊಂದು ಕ್ಷೇತ್ರವೂ ಅಭಿವೃದ್ಧಿ ಹೊಂದುವುದು ಕಡ್ಡಾಯವಾಗಿದೆ. ಆಹಾರ ಕ್ಷೇತ್ರದಿಂದ ಫಾರ್ಮಾಸ್ಯುಟಿಕಲ್‌ಗಳವರೆಗೆ, ಬಾಹ್ಯಾಕಾಶದಿಂದ ಸ್ಟಾರ್ಟ್‌ಅಪ್‌ಗಳವರೆಗೆ, ಪ್ರತಿಯೊಂದು ಕ್ಷೇತ್ರ ಬೆಳೆದಾಗ ಆರ್ಥಿಕತೆಯು ಮುಂದುವರಿಯುತ್ತದೆ, ”ಎಂದರು.

ಇದೆಲ್ಲ ಗಿಮಿಕ್ ಕಾಂಗ್ರೆಸ್

Advertisement

ರೋಜ್‌ಗಾರ್ ಮೇಳದ ಕುರಿತು ಪ್ರಧಾನಿ ಮೋದಿ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಕಾಂಗ್ರೆಸ್ ಇದೆಲ್ಲ ಗಿಮಿಕ್ ಎಂದಿದೆ. ಉದ್ಯೋಗಾವಕಾಶಗಳ ಕೊರತೆ ಇದ್ದು ಪ್ರಧಾನಿ ಚುನಾವಣಾ ವರ್ಷದ ಬಿಸಿ ಅನುಭವಿಸುತ್ತಿರುವ ಕಾರಣ ಮತ್ತು ತಮ್ಮ ಇಮೇಜ್ ಉಳಿಸಲು ರೋಜ್‌ಗಾರ್ ಮೇಳಗಳನ್ನು ನಡೆಸುತ್ತಿದ್ದಾರೆ ಎಂದಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರೋಜ್‌ಗಾರ್ ಮೇಳವನ್ನು “EMI- ಖಾಲಿ ಕುಶಲ ಕಂತುಗಳು” ಎಂದು ಟೀಕಿಸಿದ್ದಾರೆ.

“ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳ ಭರವಸೆ ನೀಡುವ ಮೂಲಕ ಮೋದಿ ಜಿ ನಮ್ಮ ಯುವಕರಿಗೆ EMI ಗಳ ರೂಪದಲ್ಲಿ ಕೆಲವು ಸಾವಿರ ನೇಮಕಾತಿ ಪತ್ರಗಳನ್ನು ಮಾತ್ರ ವಿತರಿಸುತ್ತಿದ್ದಾರೆ. ಯುವಜನರ ಭವಿಷ್ಯದ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದಿದ್ದರೆ, ನೀವು ಈ PR ಸ್ಟಂಟ್‌ನಲ್ಲಿ ಭಾಗವಹಿಸುವ ಮೂಲಕ ಅವರ ಆಕಾಂಕ್ಷೆಗಳೊಂದಿಗೆ ಆಟವಾಡುತ್ತಿರಲಿಲ್ಲ. ದೇಶದ ಯುವಕರು ಬಿಜೆಪಿಯ ಸುಳ್ಳುಗಳು, ಗಿಮಿಕ್‌ಗಳು ಮತ್ತು ದ್ರೋಹವನ್ನು ಗುರುತಿಸಿದ್ದು, ಅವರು ಖಂಡಿತವಾಗಿಯೂ 2024 ರಲ್ಲಿ ಮೋದಿ ಸರ್ಕಾರಕ್ಕೆ ದಾರಿ ತೋರಿಸುತ್ತಾರೆ ಎಂದು ಎಕ್ಸ್‌ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ರೋಜ್ ಗಾರ್ ಮೇಳಗಳನ್ನು “ದೊಡ್ಡ ಜುಮ್ಲಾಗಳು” ಎಂದು ಕರೆದಿದ್ದು, ಪ್ರತಿ ವರ್ಷ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆಯನ್ನು ಈಡೇರಿಸುವಲ್ಲಿ ಪ್ರಧಾನಿ ವಿಫಲರಾಗಿದ್ದಾರೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next