ಕಾಸರಗೋಡು: ಜಾನುವಾರು ಮತ್ತಿತರ ಜೀವಿಗಳಿಂದ ಹರಡುತ್ತಿರುವ ಸಾಂಕ್ರಾಮಿಕ ರೋಗಗಳಿಂದ ಜನರ ಆರೋಗ್ಯದ ಮೇಲಷ್ಟೇ ಅಲ್ಲ, ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಭಿಪ್ರಾಯ ಪಟ್ಟರು.
ಇಲ್ಲಿನ ಸರಕಾರಿ ಕಾಲೇಜಿನಲ್ಲಿ ಶುಕ್ರವಾರ ಆರಂಭಗೊಂಡ 36ನೇ ಕೇರಳ ವಿಜ್ಞಾನ ಕಾಂಗ್ರೆಸ್ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಹೊಸ ಸವಾಲಿಗೆ ಪರಿಹಾರ ಕಂಡುಕೊಳ್ಳುವ ಯೋಜನೆಯನ್ನು 2021ರಲ್ಲೇ ರೂಪಿಸಲಾಗಿದ್ದು ಪ್ರಾಥಮಿಕ ಹಂತದಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಐಸಿಸಿಎಸ್ ತಯಾರಿಸಿದ ಕ್ಲೈಮೆಟ್ ಸ್ಟೇಟ್‌ಮೆಂಟ್ 2023 ಅನ್ನು ಸಿಎಂ ಬಿಡುಗಡೆಗೊಳಿಸಿದರು.
ಮುಖ್ಯಮಂತ್ರಿಯವರ ಚಿನ್ನದ ಪದಕ ಮತ್ತು 50 ಸಾವಿರ ರೂ. ನಗದನ್ನು ಅತ್ಯುತ್ತಮ ಯುವ ವಿಜ್ಞಾನಿಗಳಿಗೆ ವಿತರಿಸಲಾಯಿತು.
ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಮಾತನಾಡಿದರು. ಶಾಸಕ ಎನ್.ಎ. ನೆಲ್ಲಿಕುನ್ನು, ಜಿಲ್ಲಾಧಿಕಾರಿ ಇಂಬ ಶೇಖರ್, ನೊಬೆಲ್ ಪುರಸ್ಕೃತ ಮೋರ್ಟನ್ ಪಿ. ಮೆಲ್ಡನ್ ಸಹಿತ ಹಲವರು ಭಾಗವಹಿಸಿದ್ದರು. 424 ಯುವ ವಿಜ್ಞಾನಿಗಳು ಈ ವಿಜ್ಞಾನೋತ್ಸವವಲ್ಲಿ ಭಾಗವಹಿಸಿದ್ದಾರೆ. ಫೆ. 11ರಂದು ಸಮಾರೋಪ ಸಮಾರಂಭ ನಡೆಯಲಿದೆ.