ಹೊಸದಿಲ್ಲಿ: ಯುಪಿಎ ಸರಕಾರದ ನೀತಿಗ್ರಹಣದಿಂದಾಗಿ ಕೆಲ ಕ್ಷೇತ್ರಗಳು ತೀರಾ ಕುಸಿಯುವ ಭೀತಿಯಲ್ಲಿತ್ತು. ಪ್ರಬಲ ನೆಲಬಾಂಬ್ ಸ್ಫೋಟಿಸಿದರೆ ಯಾವ ರೀತಿಯ ಅನಾಹುತ ಆಗುತ್ತದೆಯೋ, ಅಂಥ ಸ್ಥಿತಿ ಎದುರಾಗಿತ್ತು. ಅಂಥ ಸಂಕಷ್ಟದ ನಡುವೆಯೂ ನಾವು ದೇಶದ ಆರ್ಥಿಕತೆಯನ್ನು ಹಳಿಗೆ ತಂದೆವು ಎಂದು “ಸ್ವರಾಜ್ಯ’ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಿ.ಚಿದಂಬರಂ ಮಂಡಿಸಿದ್ದ ಬಜೆಟ್‌ನಲ್ಲಿ ಉಲ್ಲೇಖವಾಗಿರುವ ಅಂಶಗಳು ಕೂಡ ಸಂಶಯಕ್ಕೆ ಕಾರಣವಾಗಿದ್ದವು ಎಂದು ಪ್ರಧಾನಿ ಹೇಳಿದ್ದಾರೆ. ರಾಜಕೀಯ ಕಾರಣಗಳಿಗಾಗಿ ದೇಶದ ಅರ್ಥ ವ್ಯವಸ್ಥೆಯನ್ನು ಬಲಿಕೊಡುವುದರ ಬದಲು ಪರಿಸ್ಥಿತಿ ಎದುರಿಸುವ ನಿರ್ಧಾರ ಕೈಗೊಂಡೆವು. ಈ ಮೂಲಕ ರಾಜಕೀಯ ಹಿತಾಸಕ್ತಿಯ ಬದಲಾಗಿ ರಾಷ್ಟ್ರಹಿತಕ್ಕೇ ಆದ್ಯತೆ ಕೊಟ್ಟೆವು. ಹೀಗಾಗಿಯೇ ಎಲ್ಲರೂ ನಿರೀಕ್ಷಿಸಿದಂತೆ ಅರ್ಥ ವ್ಯವಸ್ಥೆಯ ಬಗ್ಗೆ ಶ್ವೇತಪತ್ರ ಹೊರಡಿಸುವ ಗೋಜಿಗೆ ಹೋಗಲಿಲ್ಲ ಎಂದಿದ್ದಾರೆ. ಅರ್ಥ ವ್ಯವಸ್ಥೆಯ ಬಗ್ಗೆ ಶ್ವೇತಪತ್ರ ಹೊರಡಿಸುವುದರ ಬದಲು ಕಹಿಯಾಗಿರುವ ಸತ್ಯವನ್ನೇ ಒಪ್ಪಿಕೊಳ್ಳಲು ನಿರ್ಧರಿಸಿದೆವು ಎಂದೂ ಮೋದಿ ಹೇಳಿದ್ದಾರೆ.
ಆರೋಪ ಸುಳ್ಳು: ಅಗತ್ಯಕ್ಕೆ ತಕ್ಕಂತೆ ಉದ್ಯೋಗ ಸೃಷ್ಟಿಯಾಗಿಲ್ಲ ಎಂದು ಪ್ರತಿಪಕ್ಷಗಳು ಮಾಡುವ ಆರೋಪಗಳನ್ನೂ ಮೋದಿ ತಿರಸ್ಕರಿಸಿದ್ದಾರೆ. ರಾಜ್ಯ ಸರಕಾರಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳುತ್ತಿರುವಾಗ ಕೇಂದ್ರ ಸರಕಾರ ಉದ್ಯೋಗ ಸೃಷ್ಟಿಯಾಗದಂತೆ ಹೇಗೆ ಮಾಡಬಹುದು ಎಂದು ಮರು ಪ್ರಶ್ನೆ ಹಾಕಿದ್ದಾರೆ. ಭವಿಷ್ಯ ನಿಧಿ ಮಂಡಳಿ ನಡೆಸಿದ ಅಧ್ಯಯನ ಪ್ರಕಾರ, ಕಳೆದ ವರ್ಷ ಸಾಂಪ್ರದಾಯಿಕ ಕ್ಷೇತ್ರದಲ್ಲಿ 70 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. 2017ರ ಸೆಪ್ಟೆಂಬರ್‌ನಿಂದ 2018ರ ಏಪ್ರಿಲ್‌ವರೆಗೆ ಸಂಘಟಿತ ವಲಯದಲ್ಲಿ 41 ಲಕ್ಷ ಉದ್ಯೋಗ ಸೃಷ್ಟಿಯಾಗಿದೆ. ಅಸಂಘಟಿತ ವಲಯವು ಉದ್ಯೋಗ ಕ್ಷೇತ್ರದ ಒಟ್ಟು ಶೇ.80ರಷ್ಟು ಬೇಡಿಕೆ ಈಡೇರಿಸುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ. “ಕರ್ನಾಟಕ ಸರಕಾರ 53 ಲಕ್ಷ ಉದ್ಯೋಗ ಸೃಷ್ಟಿ ಮಾಡಿದೆ ಎಂದು ಹೇಳಿಕೊಂಡಿದೆ. ಪಶ್ಚಿಮ ಬಂಗಾಳ ಸರಕಾರ 68 ಲಕ್ಷ ಉದ್ಯೋಗ ಸೃಷ್ಟಿ ಮಾಡಿದೆ ಎಂದು ಮಾಹಿತಿ ನೀಡಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಉದ್ಯೋಗ ಸೃಷ್ಟಿಯಾಗಿರುವ ಬಗ್ಗೆ ಸರಿಯಾದ ಮಾಹಿತಿ ಇಲ್ಲ’ ಎಂದರು ಪ್ರಧಾನಿ. ಪ್ರತಿಪಕ್ಷಗಳು ಇದೇ ಅಂಶವನ್ನು ಮುಂದಿಟ್ಟುಕೊಂಡು ಸರಿಯಾದ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಿಲ್ಲ ಎಂದು ಆರೋಪಿಸುತ್ತಿದ್ದಾರೆ ಎಂದರು ಪ್ರಧಾನಿ.
ಪ್ರಾಮಾಣಿಕ ಕ್ರಮ: ಏರ್ ಇಂಡಿಯಾದಿಂದ ಬಂಡವಾಳ ಹಿಂಪಡೆಯುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮುತುವರ್ಜಿಯಿಂದಲೇ ಹಲವು ಕ್ರಮಗಳನ್ನು ಅನುಸರಿಸಿದೆ ಎಂದು ಪ್ರಧಾನಿ ಇದೇ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಸರಕಾರ ಏನು ಮಾಡಬೇಕಿತ್ತೋ, ಅದನ್ನು ಪ್ರಾಮಾಣಿಕವಾಗಿ ಮಾಡಿದೆ ಎಂದಿದ್ದಾರೆ.