ನವದೆಹಲಿ: ನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತದ ಆರ್ಥಿಕ ತಜ್ಙ ಅಮರ್ತ್ಯ ಸೇನ್ ನಿಧನರಾಗಿದ್ದಾರೆ ಎಂಬ ಸುದ್ದಿ ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಅಮರ್ತ್ಯ ಸೇನ್ ಅವರ ನಿಧನದ ಸುದ್ದಿಯನ್ನು ಈ ಬಾರಿಯ ನೊಬೆಲ್ ಪ್ರಶಸ್ತಿ ವಿಜೇತೆ ಕ್ಲಾಡಿಯಾ ಗೋಲ್ಡಿನ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ಧರು. ಆದರೆ ಇದು ಸುಳ್ಳು ಸುದ್ದಿ ಎಂದು ಅಮರ್ತ್ಯ ಸೇನ್ ಅವರ ಪುತ್ರಿ ನಂದನಾ ಸೇನ್ ಟ್ವೀಟ್ ಮಾಡಿದ್ದಾರೆ.
ʻಸ್ನೇಹಿತರೇ, ನಿಮ್ಮ ಕಾಳಜಿಗೆ ಧನ್ಯವಾದಗಳು. ಆದರೆ ಇದು ಸುಳ್ಳು ಸುದ್ದಿ. ಬಾಬಾ ಸಂಪೂರ್ಣವಾಗಿ ಚೆನ್ನಾಗಿದ್ದಾರೆ. ಕೇಂಬ್ರಿಡ್ಜ್‌ನಲ್ಲಿ ನಾವು ಕುಟುಂಬದೊಂದಿಗೆ ಅದ್ಭುತವಾದ ವಾರವನ್ನು ಕಳೆದಿದ್ದೇವೆ. ಕಳೆದ ರಾತ್ರಿ ನಾವು ವಿದಾಯ ಹೇಳಿದಾಗ ಅವರ ಅಪ್ಪುಗೆ ಯಾವತ್ತಿನಂತೆ ಪ್ರಬಲವಾಗಿತ್ತು! ಈಗ ಅವರು ಹಾರ್ವರ್ಡ್‌ನಲ್ಲಿ ವಾರಕ್ಕೆ 2 ಕೋರ್ಸ್‌ಗಳನ್ನು ಕಲಿಸುತ್ತಿದ್ದಾರೆ. ಎಂದಿನಂತೆ ಕಾರ್ಯನಿರತರಾಗಿದ್ದಾರೆ!ʼ ಎಂದು ನಂದನಾ ಸೇನ್ ಟ್ವೀಟ್ ಮಾಡಿದ್ದಾರೆ.
89 ವರ್ಷ ವಯಸ್ಸಿನ ಅಮರ್ತ್ಯ ಸೇನ್ ಅವರು 1933 ರ ನವೆಂಬರ್ 3 ರಂದು ಪಶ್ಚಿಮ ಬಂಗಾಳದ ಶಾಂತಿನಿಕೇತನದಲ್ಲಿ ಜನಿಸಿದ್ದರು. 1972 ರಿಂದ ಯುನೈಟೆಡ್ ಕಿಂಗ್‌ಡಮ್ ಮತ್ತು ಅಮೆರಿಕದ ಹಲವು ಪ್ರತಿಷ್ಟಿತ ವಿಶ್ವ ವಿದ್ಯಾಲಯಗಳಲ್ಲಿ ಅವರು ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಅರ್ಥಶಾಸ್ತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಗಳಿಗಾಗಿ ಅವರಿಗೆ 1998 ರಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿತ್ತು. ಭಾರತ ಸರ್ಕಾರವು 1999 ರಲ್ಲಿ ಅವರಿಗೆ ಭಾರತದ ಅತ್ಯುನ್ನತ ʻಭಾರತ ರತ್ನʼ ಪುರಸ್ಕಾರವನ್ನು ನೀಡಿ ಗೌರವಿಸಿದೆ.
ಇದನ್ನೂ ಓದಿ: War; ಗಾಜಾ ಪಟ್ಟಿ ಬಿಕ್ಕಟ್ಟು ಪರಿಹರಿಸಲು ಭಾರತ ಮುಂದಾಗಬೇಕು: ಪ್ಯಾಲೆಸ್ತೀನ್ ರಾಯಭಾರಿ