Advertisement

ಲಂಕಾ ಬಳಿಕ ನೇಪಾಲವೂ ದಿವಾಳಿ! ಆರ್ಥಿಕತೆಯ ಅಸಮರ್ಪಕ ನಿರ್ವಹಣೆ, ಆದಾಯ ಕುಸಿತವೇ ಕಾರಣ

10:35 AM Apr 12, 2022 | Team Udayavani |

ಕೊಲಂಬೋ/ ಕಠ್ಮಂಡು: ಭಾರತದ ಮತ್ತೂಂದು ನೆರೆಯ ದೇಶ ನೇಪಾಲ ಕೂಡ, ಶ್ರೀಲಂಕಾದಂತೆಯೇ ಆರ್ಥಿಕ ದುಃಸ್ಥಿತಿಯನ್ನು ನಿಧಾನವಾಗಿ ತಲುಪುತ್ತಿದ್ದು, ಅಲ್ಲಿನ ಜನರಲ್ಲಿ ಹೊಸ ಆತಂಕ ಸೃಷ್ಟಿಸಿದೆ. ರಾಜ ಕೀಯ ಅಸ್ಥಿರತೆ, ಅಸಮರ್ಪಕ ಹಣ ಕಾಸು ನಿರ್ವಹಣೆ, ವಿದೇಶಿ ವಿನಿಮಯ ಕುಸಿತ, ರಫ್ತು- ಆಮದಿನ ನಡುವೆ ದೊಡ್ಡಮಟ್ಟದ ಏರುಪೇರು ಈ ವಿಚಾರಗಳು ಆ ದೇಶವನ್ನು ದಿವಾಳಿಯ ಅಂಚಿಗೆ ತಂದು ನಿಲ್ಲಿಸಿವೆ.

Advertisement

ಕೊರೊನಾ ಸಂಕಷ್ಟದಿಂದಾಗಿ ದೇಶದ ಪ್ರಮುಖ ಆದಾಯ ಮಾರ್ಗಗಳಾದ ಪ್ರವಾಸೋದ್ಯಮ ಹಾಗೂ ರಫ್ತು ವ್ಯವಹಾರದಲ್ಲಿ ತೀವ್ರ ಇಳಿಮುಖ ದಾಖಲಾಯಿತು.

ಜತೆಗೆ 2021ರ ಜುಲೈಯಿಂದಲೇ ಆ ದೇಶದ ವಿದೇಶಿ ವಿನಿಮಯ ಕುಸಿತ ಕಾಣುತ್ತಾ ಸಾಗಿತ್ತು. ಈ ವಿನಿಮಯಕ್ಕೆ ಬರುತ್ತಿದ್ದ ಆದಾಯದಲ್ಲಿ ಸಿಂಹಪಾಲು ಬರುತ್ತಿದ್ದುದು ಸೋಯಾ ಎಣ್ಣೆಯ ರಫ್ತಿನಿಂದ. ಇದು ಬಿಟ್ಟರೆ, ತಾಳೆ ಎಣ್ಣೆ ರಫ್ತಿನಿಂದ. ಈ ವ್ಯವಹಾರವೂ ಸೊರಗಿದ್ದರಿಂದಾಗಿ 89 ಸಾವಿರ ಕೋಟಿ ರೂ. ಗಳಷ್ಟಿದ್ದ ವಿದೇಶಿ ವಿನಿಮಯದ ಆದಾಯ 73 ಸಾವಿರ ಕೋಟಿ ರೂ.ಗಳಿಗೆ ಇಳಿಯಿತು. ಇದೇ ಅವಧಿಯಲ್ಲಿ ರಫ್ತಿನಿಂದ ಬರುವ ಆದಾಯಕ್ಕಿಂತ ಆಮದಿಗಾಗಿ ದೇಶ ವ್ಯಯಿಸುವ ಹಣದ ಪ್ರಮಾಣ ಅಗಾಧವಾಗಿ ಹೆಚ್ಚಾಯಿತು. ಸದ್ಯಕ್ಕೆ, ರಫ್ತಿನಿಂದ ಬರುವ ಆದಾಯ 1.4 ಸಾವಿರ ಕೋಟಿ ರೂ.ಗಳಿದ್ದರೆ, ಆಮದಿಗಾಗಿ ಹೊರ ಹೋಗುತ್ತಿರುವ ಹಣ 1.1 ಲಕ್ಷ ಕೋ. ರೂ.ಗಳಿಷ್ಟಿದೆ. ಈ ಅಜಗಜಾಂತರದಿಂದಾಗಿ ಅಲ್ಲಿನ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಇಳಿಯಲಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

ಲಂಕಾದಲ್ಲಿ ಹೆಚ್ಚು ಸಾವು ಸಂಭವ
ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಶ್ರೀಲಂಕಾದಲ್ಲಿ ಅತ್ಯಗತ್ಯ ಔಷಧಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ಇದರಿಂದಾಗಿ, ಕೊರೊನಾ ಸಂದರ್ಭದಲ್ಲಿ ಉಂಟಾದ ಸಾವಿಗಿಂತ ಹೆಚ್ಚಿನ ಸಾವುಗಳು ಸಂಭವಿಸುವ ಸಾಧ್ಯತೆಗಳಿವೆ ಎಂದು ಅಲ್ಲಿನ ವೈದ್ಯರು, ಸರಕಾರವನ್ನು ಎಚ್ಚರಿಸಿದ್ದಾರೆ. ಪ್ರಸ್ತುತ ಆ ದೇಶ, ವಿದ್ಯುತ್‌ ಉತ್ಪಾದನೆ, ಆಹಾರ, ಇಂಧನ ಕೊರತೆಗಳನ್ನೂ ಎದುರಿಸುತ್ತಿದೆ.

ಮತ್ತೂಂದೆಡೆ ಲಂಕಾದ ಜನತೆ ಹಸಿವಿನಿಂದ ತತ್ತರಿಸುವ ಕಾಲ ಸನ್ನಿಹಿತವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಸರಕಾರಿ ನ್ಯಾಯ ಬೆಲೆ ಅಂಗಡಿಗಳ ಮುಂದೆ ದಿನವಿಡೀ ಸರದಿಯಲ್ಲಿ ಕಾಯುತ್ತಾ ನಿಂತರೂ ಅಗತ್ಯವಿರುವ ದಿನಸಿ ಸಿಗದಂತಾಗಿದೆ. ಖಾಸಗಿ ಮಾಲ್‌ಗ‌ಳಲ್ಲಿ ದಿನಸಿಯ ಬೆಲೆ ಮೂರು- ನಾಲ್ಕು ಪಟ್ಟು ಹೆಚ್ಚಾಗಿದೆ. ಆರ್ಥಿಕವಾಗಿ ಅನುಕೂಲವಿದ್ದವರು ಇವನ್ನು ಹೇರಳವಾಗಿ ಕೊಳ್ಳಲು ಮುಂದೆ ಬರುತ್ತಿದ್ದಾರಾದರೂ ಒಬ್ಬರಿಗೆ ಇಂತಿಷ್ಟೇ ದಿನಸಿ ಎಂದು ಸೀಮಿತಗೊಳಿಸಲಾಗಿದೆ. ಇನ್ನು ದೇಶಾದ್ಯಂತ ಡೀಸೆಲ್‌ ಬರ ಆವರಿಸಿರುವುದರಿಂದ ತರಕಾರಿಗಳ ಬೆಲೆ ಕೂಡ ಗಗನಕ್ಕೇರಿದೆ. ಹಳ್ಳಿಗಳಲ್ಲಿನ ರೈತರು ತಾವು ಬೆಳೆದ ತರಕಾರಿಗಳನ್ನು ಅವುಗಳ ಸಾಗಾಣಿಕೆಗೆ ಬೇರೆ ದಾರಿ ಕಾಣದೇ ತಾವೇ ತಿನ್ನುವಂತಾಗಿದೆ.

Advertisement

ಎಲ್‌ಟಿಟಿಇ ರೀತಿ ಬಿಕ್ಕಟ್ಟು ಅಂತ್ಯ!
ದೇಶವು ಆರ್ಥಿಕ ಬಿಕ್ಕಟ್ಟಿನಲ್ಲಿ ನಲುಗುತ್ತಿರುವ ನಡುವೆಯೇ ಸೋಮವಾರ ದೇಶವನ್ನುದ್ದೇಶಿಸಿ ಮಾತನಾಡಿರುವ ಶ್ರೀಲಂಕಾ ಪ್ರಧಾನಿ ಮಹೀಂದಾ ರಾಜಪಕ್ಸ, “ದೇಶದಲ್ಲಿ ಒಂದು ದಶಕದ ಹಿಂದೆ ಎಲ್‌ಟಿಟಿಇಯನ್ನು ಹೇಗೆ ನಾಶ ಮಾಡಿದೆವೋ ಅದೇ ಮಾದರಿಯಲ್ಲಿ ಈಗಿರುವ ಬಿಕ್ಕಟ್ಟನ್ನೂ ಅಂತ್ಯಗೊಳಿಸುತ್ತೇವೆ’ ಎಂದು ಘೋಷಿಸಿದ್ದಾರೆ. ಹುದ್ದೆ ಕಳೆದುಕೊಳ್ಳುವ ಭೀತಿಯ ನಡುವೆಯೇ ಟಿವಿ ಮೂಲಕ ಮಾತನಾಡಿರುವ ಅವರು, “ನಾವು ನಮ್ಮ ಆರ್ಥಿಕತೆಯನ್ನು ಬಲಪಡಿಸ ಬೇಕು. 30 ವರ್ಷಗಳ ಯುದ್ಧವನ್ನು ಅಂತ್ಯಗೊಳಿಸಿದ ರೀತಿಯಲ್ಲೇ ಈ ಸಮಸ್ಯೆಯನ್ನೂ ಪರಿಹರಿಸುವ ಜವಾಬ್ದಾರಿ ನನ್ನದು’ ಎಂದಿದ್ದಾರೆ. ನಮ್ಮ ಸರಕಾರ ರಸ್ತೆಗಳು, ಬಂದರುಗಳು, ಮೂಲಸೌಕರ್ಯಗಳನ್ನು ನಿರ್ಮಿಸಿವೆ. ಇದನ್ನೆಲ್ಲ ನಿರ್ಮಿಸಿದ್ದು ನನ್ನ ಜನರು ಬೀದಿಗಿಳಿದು ಪ್ರತಿಭಟನೆ ಮಾಡಬೇಕೆಂದು ಅಲ್ಲ ಎಂದೂ ಮಹೀಂದಾ ಹೇಳಿದ್ದಾರೆ.

ಎಲ್‌ಟಿಟಿಇ ಪುನಶ್ಚೇತನ ಯತ್ನ
ಶ್ರೀಲಂಕಾದ ನಿಷೇಧಿತ ಉಗ್ರ ಸಂಘಟನೆ ಎಲ್‌ಟಿಟಿಇಯನ್ನು ಮರುಸ್ಥಾಪಿಸಲು ಯತ್ನಿಸುತ್ತಿರುವ ನಾಲ್ವರು ಭಾರತೀಯರ 3.59 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಈ ನಾಲ್ವರು ಡ್ರಗ್ಸ್‌ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ಭಾಗಿಯಾಗಿ ಸಿಕ್ಕಿಬಿದ್ದಿದ್ದಾರೆ. ಕಳೆದ ವರ್ಷದ ಮಾರ್ಚ್‌ 18ರಂದು ಭಾರತೀಯ ಕರಾವಳಿ ರಕ್ಷಕ ಸಿಬಂದಿಯು ಶ್ರೀಲಂಕಾದ ದೋಣಿಯೊಂದನ್ನು ಜಪ್ತಿ ಮಾಡಿದಾಗ, 300 ಕೆಜಿ ಹೆರಾಯಿನ್‌, ಶಸ್ತ್ರಾಸ್ತ್ರಗಳು ಸಿಕ್ಕಿದ್ದವು. ಅದೇ ಪ್ರಕರಣ ಸಂಬಂಧ ಸುರೇಶ್‌ ರಾಜ್‌, ಸಬೇಶನ್‌, ರಮೇಶ್‌, ಸೌಂದರರಾಜನ್‌ ಎಂಬ ನಾಲ್ವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದೂ ಇ.ಡಿ. ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next