Advertisement

ಪರಿಸರಸಹ್ಯ ನಗರಾಭಿವೃದ್ಧಿ ಸಾಮೂಹಿಕ ಹೊಣೆಗಾರಿಕೆ

01:24 AM Jul 29, 2024 | Team Udayavani |

ದೇಶದ ಬಹುತೇಕ ನಗರಗಳು ಅಭಿವೃದ್ಧಿಯ ನಾಗಾಲೋಟದಲ್ಲಿವೆ. ರಸ್ತೆಗಳಲ್ಲಿ ವಾಹನಗಳ ದಟ್ಟಣೆ ದಿನೇದಿನೆ ಹೆಚ್ಚುತ್ತಿದ್ದರೆ, ಬಹು ಅಂತಸ್ತುಗಳ ಕಟ್ಟಡಗಳು ನಿತ್ಯ ನಿರಂತರವಾಗಿ ತಲೆ ಎತ್ತುತ್ತಿವೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಾಣ ಕಾಮಗಾರಿಗಳು ಕ್ಷಿಪ್ರಗತಿಯಲ್ಲಿ ಸಾಗುತ್ತಿವೆ. ಮೇಲ್ನೋಟಕ್ಕೆ ನಗರಗಳು ಬೆಳೆಯುತ್ತಿವೆ, ವಿಸ್ತಾರಗೊಳ್ಳುತ್ತಿವೆ. ಆದರೆ ನಗರಗಳಲ್ಲಿ ಪ್ರತಿನಿತ್ಯ ಸಂಭವಿಸುತ್ತಿರುವ ಅವಘಡಗಳನ್ನು ಕಂಡಾಗ ಈ ಅಭಿವೃದ್ಧಿಯಿಂದ ಪುರುಷಾರ್ಥವಾದರೂ ಏನು ಎಂಬ ಪ್ರಶ್ನೆಗಳು ಮೂಡುತ್ತವೆ.

Advertisement

ಇದಕ್ಕೊಂದು ತಾಜಾ ಉದಾಹರಣೆ ಎಂದರೆ ಶನಿವಾರ ರಾತ್ರಿ ಪಶ್ಚಿಮ ದಿಲ್ಲಿಯ ಓಲ್ಡ್‌ ರಾಜಿಂದರ್‌ ನಗರ ಪ್ರದೇಶದಲ್ಲಿನ ಕಟ್ಟಡವೊಂದರ ನೆಲಮಾಳಿಗೆಯಲ್ಲಿ ಕಾರ್ಯಾಚರಿಸುತ್ತಿದ್ದ ಯುಪಿಎಸ್‌ಸಿ ಕೋಚಿಂಗ್‌ ಸೆಂಟರ್‌ನ ನೆಲ ಮಹಡಿಗೆ ಮಳೆ ನೀರು ನುಗ್ಗಿ ಮೂರು ಮಂದಿ ಐಎಎಸ್‌ ಆಕಾಂಕ್ಷಿಗಳು ಸಾವನ್ನಪ್ಪಿದ ಘಟನೆ. ಯುಪಿ ಎಸ್‌ಸಿ ಪರೀಕ್ಷೆ ಬರೆದು ಅತ್ಯುನ್ನತ ನಾಗರಿಕ ಸೇವಾ ಹುದ್ದೆಗೇರುವ ಕನಸು ಕಂಡಿದ್ದ ಈ ಯುವ ಪ್ರತಿಭಾವಂತರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವಂತಾದುದು ವಿಧಿಲೀಲೆ ಎಂದು ಹೇಳಿ ನಮ್ಮನ್ನು ನಾವು ಸಮಾಧಾನಿಸಿಕೊಳ್ಳಬಹುದಾದರೂ ಇಂತಹ ದುರಂತಗಳು ನಗರಗಳಲ್ಲಿ ಪ್ರತೀದಿನ ಎಂಬಂತೆ ಸಂಭವಿಸುತ್ತಿದ್ದರೂ ನಮ್ಮನ್ನಾಳುವರಾಗಲಿ, ಅಧಿಕಾರಿ ವರ್ಗವಾಗಲಿ, ಕನಿಷ್ಠ ಸಾರ್ವಜನಿಕರು ಕೂಡ ಎಚ್ಚೆತ್ತುಕೊಳ್ಳದಿರುವುದು ವಿಪರ್ಯಾಸವಲ್ಲದೆ ಮತ್ತೇನಲ್ಲ.

ಸದ್ಯದ ಮಟ್ಟಿಗೆ ದುರ್ಘ‌ಟನೆ ಸಂಭವಿಸಿದ ಕಟ್ಟಡದ ನಿರ್ಮಾಣದಲ್ಲಿನ ಲೋಪ, ನೆಲಮಾಳಿಗೆಯಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದುದು, ಈ ಪರಿಸರದಲ್ಲಿನ ಎಲ್ಲ ಚರಂಡಿ, ಹಳ್ಳಗಳನ್ನು ಒಂದೋ ಅತಿಕ್ರಮಿಸಿ ವಿವಿಧ ನಿರ್ಮಾಣ ಕಾಮಗಾರಿ ನಡೆಸಿರುವುದು ಅಥವಾ ಮತ್ತೆ ಕೆಲವನ್ನು ಸಮರ್ಪಕವಾಗಿ ನಿರ್ವಹಿಸದಿರು ವುದರಿಂದಲೇ ಅಮಾಯಕ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಲು ಕಾರಣ ವಾಗಿದೆ. ಇದು ಕೇವಲ ಈ ಕಟ್ಟಡದ ಸಮಸ್ಯೆ ಮಾತ್ರವಲ್ಲ ಅದು ದಿಲ್ಲಿಯಾಗಲಿ ಅಥವಾ ನಮ್ಮ ರಾಜ್ಯದ ಯಾವುದೇ ಬೆಳೆಯುತ್ತಿರುವ ನಗರದಲ್ಲಿಯೇ ಆಗಲಿ ಸರ್ವೇಸಾಮಾನ್ಯವಾಗಿದೆ. ಎಡೆಬಿಡದೆ ಧಾರಾಕಾರ ಮಳೆ ಸುರಿದರೆ ಸಾಕು ಈ ನಗರಗಳ ರಸ್ತೆಗಳು, ತಗ್ಗು ಪ್ರದೇಶಗಳಲ್ಲಿರುವ ಜನವಸತಿ ಪ್ರದೇಶಗಳು ಜಲಾವೃತ ವಾಗಿ ಸ್ಥಳೀಯ ನಿವಾಸಿಗಳು ಇನ್ನಿಲ್ಲದ ಸಂಕಷ್ಟ ಎದುರಿಸುವಂತಾಗುತ್ತಿದೆ. ಮಾತೆತ್ತಿದರೆ ಇಷ್ಟೊಂದು ಪ್ರಮಾಣದ ಮಳೆ ಈ ನಗರದಲ್ಲಿ ಸುರಿದದ್ದು ಇದೇ ಮೊದಲು. ಹೀಗೆ ದಾಖಲೆ ಪ್ರಮಾಣದಲ್ಲಿ ಮಳೆ ಸುರಿದರೆ ಪ್ರವಾಹ ಬಾರದೆ ಇನ್ನೇನಾಗುತ್ತದೆ ಎಂಬ ಸಿದ್ಧ ಉತ್ತರ ಆಡಳಿತ ಮತ್ತು ಅಧಿಕಾರಿ ವರ್ಗದಿಂದ ಸಿಗುತ್ತದೆ. ಆದರೆ ವಾಸ್ತವಿಕ ಕಾರಣ ಇದಾಗಿರದೆ ನಗರಗಳನ್ನು ಎರ್ರಾಬಿರ್ರಿಯಾಗಿ ವಿಸ್ತರಿಸಿರುವುದು, ರಸ್ತೆ, ಕಟ್ಟಡ ಮತ್ತು ಇನ್ನಿತರ ಮೂಲಸೌಕರ್ಯ ನಿರ್ಮಾಣ ಕಾಮಗಾರಿಗಳನ್ನು ದೂರದೃಷ್ಟಿ ರಹಿತವಾಗಿ ನಡೆಸಿರುವುದೇ ಮೂಲ ಕಾರಣ.

ಹೀಗಿದ್ದರೂ ಆಡಳಿತ ವರ್ಗ ನಗರ ಯೋಜನೆ ರೂಪಣೆ ಸಂದರ್ಭದಲ್ಲಿ ಒಂದು ನಿರ್ದಿಷ್ಟ ಅವಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ನಗರಾಭಿವೃದ್ಧಿಯ ನೀಲನಕಾಶೆ ಯನ್ನು ರೂಪಿಸುತ್ತಿಲ್ಲ. ಇನ್ನು ಸ್ಥಳೀಯಾಡಳಿತ ಸಂಸ್ಥೆಗಳು ರಸ್ತೆ ಸಹಿತ ಮೂಲ ಸೌಕರ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಸಂದರ್ಭದಲ್ಲೂ ಇತ್ತ ತಲೆಕೆಡಿಸಿ ಕೊಳ್ಳುತ್ತಿಲ್ಲ. ಕಟ್ಟಡ ನಿರ್ಮಾಣಕಾರರಂತೂ ಹಾಲಿ ಜಾರಿಯಲ್ಲಿರುವ ನಿಯಮಾವಳಿ ಗಳನ್ನೇ ಗಾಳಿಗೆ ತೂರಿ ಕಟ್ಟಡಗಳನ್ನು ನಿರ್ಮಿಸುತ್ತಿರುವಾಗ ಅವರಿಂದ ದೂರದರ್ಶಿತ್ವ ವನ್ನು ನಿರೀಕ್ಷಿಸುವುದು ಮೂರ್ಖತನವಾದೀತು!. ವಾಣಿಜ್ಯ, ವ್ಯವಹಾರ ನಡೆಸು ವವರಂತೂ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಮುಳುಗಿದ್ದು ಅವರಿಗೆ ತಮ್ಮ ಗ್ರಾಹಕರ ಸುರಕ್ಷೆಯ ಚಿಂತೆ ಕಾಡುವುದೇ ಇಲ್ಲ. ನಮ್ಮನ್ನಾಳುವವರಿಗೂ ಕುರ್ಚಿ ಉಳಿಸಿಕೊಳ್ಳುವುದೇ ಸವಾಲಿನ ಕೆಲಸವಾಗಿದ್ದರೆ ಆಡಳಿತಶಾಹಿಗೆ ಧನದಾಹ. ಇನ್ನು ಸಾರ್ವ ಜನಿಕರದೋ ನಿರ್ಲಿಪ್ತ ಮನೋಭಾವ. ಇನ್ನಾದರೂ ಪರಿಸರಸಹ್ಯ ನಗರಾಭಿವೃದ್ಧಿ ಎನ್ನುವುದು ಸಾಮೂಹಿಕ ಹೊಣೆಗಾರಿಕೆ ಎಂಬುದನ್ನು ಮನಗಾಣಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next