ಹೊಸಪೇಟೆ: ವಿಶ್ವ ಪರಂಪರೆ ತಾಣ ಹಂಪಿಯಲ್ಲಿ ದುಬಾರಿ ಬೆಲೆಯ ಪರಿಸರ ಸ್ನೇಹಿ ವಾಹನಗಳು ಸಂಚಾರ ಆರಂಭವಾಗಲಿದ್ದು ಪ್ರವಾಸಿಗರನ್ನು ತನ್ನತ್ತ ಸೆಳೆಯಲಿವೆ. ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಬೆಂಗಳೂರಿನ ಪ್ರೀವ್ಯಾಲೆನ್ಸ್ ಗ್ರೀನ್ ಸಲ್ಯೂಶನ್ಸ್ ಪ್ರೈವೇಟ್ ಕಂಪನಿ, ಒಂದು ಮೆಟ್ರೋಟ್ರೈನ್ ಮಾದರಿಯ ಮಿನಿ ಬಸ್ (ಡೀಸಲ್ ವಾಹನ) ಹಾಗೂ ಎರಡು ಬ್ಯಾಟರಿಚಾಲಿತ ವಾಹನಗಳ ಪ್ರಾಯೋಗಿಕ ಓಡಾಟಕ್ಕೆ ಅನುಮತಿ ಪಡೆದಿದೆ.
ಪ್ರಾಯೋಗಿಕವಾಗಿ ಹಂಪಿಯಲ್ಲಿ ಸಂಚಾರ ಮಾಡಲಿರುವ ಮೂರು ವಾಹನಗಳು ಈಗಾಗಲೇ ಹಂಪಿಗೆ ಬಂದು ಸೇರಿದ್ದು ವಾಹನಗಳ ನಿರ್ವಹಣೆ, ಇತರೆ ಖರ್ಚುವೆಚ್ಚಗಳನ್ನು ಭರಿಸುವ ಕಂಪನಿ ತನ್ನ ಲಾಭದಲ್ಲಿ ಶೇ. 30ರಷ್ಟು ಆದಾಯವನ್ನು ಪ್ರಾ ಧಿಕಾರಕ್ಕೆ ನೀಡಿ,ಇನ್ನುಳಿದ ಶೇ. 70ರಷ್ಟು ಲಾಭಾಂಶವನ್ನು ಕಂಪನಿ ಉಳಿಸಿಕೊಳ್ಳಲು ಒಪ್ಪಿಕೊಂಡಿದೆ.
ಆಸನ: ಮೆಟ್ರೋಟ್ರೈನ್ ಮಾದರಿಯ ಮಿನಿ ಬಸ್ ಸುಮಾರು 20 ಜನ ಬ್ಯಾಟರಿಚಾಲಿತ ವಾಹನಗಳಲ್ಲಿ 15 ಜನ ಪ್ರವಾಸಿಗರು ಆಸೀನರಾಗಿ ಹಂಪಿ ಪರಿಸರವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಎಲ್ಲೆಲ್ಲಿ: ವಿರೂಪಾಕ್ಷೇಶ್ವರ ಸ್ವಾಮಿ ದೇಗುಲ, ಎದುರು ಬಸವಣ್ಣ, ಸಾಸವಿ ಕಾಳು ಗಣಪತಿ, ಕಡಲೆಕಾಳು ಗಣಪತಿ, ಕೃಷ್ಣ ದೇವಾಸ್ಥಾನ, ಲಕ್ಷ್ಮೀ ನರಸಿಂಹ, ಬಡವಿಲಿಂಗ, ಅಜಾರರಾಮ ದೇವಾಲಯ, ಕಮಲ ಮಹಲ್,ಗಜಶಾಲೆ, ಮಹಾನವಿಮಿ ದಿಬ್ಬ, ರಾಣಿ ಸ್ನಾನ ಗೃಹ ಹಾಗೂ ವಿಜಯ ವಿಠಲ ದೇವಾಲಯದ ಬಳಿ ವಾಹನಗಳು ತಮ್ಮ ಕಾರ್ಯಚರಣೆ ನಡೆಸಲಿವೆ.
ಪ್ಯಾಕೇಜ್: ಇಂಧನ ಚಾಲಿತ ಮಿನಿ ಬಸ್‌ನ್ನು ಪ್ರವಾಸಿಗರು ಇಡೀ ಒಂದು ಎಂಗೇಜ್ ಪಡೆದುಕೊಂಡು ಹಂಪಿ, ಕಮಲಾಪುರ, ಆನೆಗುಂದಿ, ಆಂಜನಾದ್ರಿ, ಅಟಲ್ ಬಿಹಾರಿ ಝೂಲಾಜಿಕಲ್ ಪಾರ್ಕ್, ಕರಡಿಧಾಮ, ಟಿ.ಬಿ. ಡ್ಯಾಂ ಮುಂತಾದ ಸ್ಥಳಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಪ್ರಸ್ತುತ ಹಂಪಿ ವಿಜಯವಿಠಲ ದೇವಾಲಯ ವೀಕ್ಷಣೆಗೆ ಮಾತ್ರ ಹಳೇ ಬ್ಯಾಟರಿ ಚಾಲಿತ ವಾಹನಗಳು ಚಾಲನೆಯಲ್ಲಿವೆ. ಇದರಲ್ಲಿ ಕೆಲ ವಾಹನಗಳು ಕೆಟ್ಟು ಮೂಲೆ ಸೇರಿವೆ. ವಾಹನಗಳ ನಿರ್ವಹಣೆ ಕಿರಿಕಿರಿಯಿಂದ ಹೊರ ಬರಲು ಖಾಸಗಿ ಸಹಭಾಗಿತ್ವದಲ್ಲಿ ಹಂಪಿಯಲ್ಲಿ ವಾಹನಗಳ ಓಡಾಟಕ್ಕೆ ಪ್ರಾಧಿಕಾರ ಹಸಿರು ನಿಶಾನೆ ತೋರಿದೆ.
ಅನುಕೂಲ :
ವಿಜಯವಿಠಲ ದೇವಾಲಯದ ಹತ್ತಿರ ಹೊರತುಪಡಿಸಿ ಇತರೆ ಪ್ರಮುಖ ಸ್ಮಾರಕಗಳಬಳಿ ತೆರಳಲು ಯಾವುದೇ ಬ್ಯಾಟರಿ ಚಾಲಿತ ವಾಹನಗಳ ಓಟಾಟ ಇದ್ದಿಲ್ಲ. ಹೀಗಾಗಿ ಎರಡೂ ಬ್ಯಾಟರಿ ಚಾಲಿತ ವಾಹನಗಳು, ಹಂಪಿ ಪರಿಸರ ಸುತ್ತಾಡಲಿವೆ. ಇದರಿಂದಾಗಿ ಪ್ರವಾಸಿಗರಿಗೆ ಅನುಕೂಲವಾಗಲಿದೆ.
ಬೆಂಗಳೂರಿನ ಪ್ರೀವ್ಯಾಲೆನ್ಸ್ ಗ್ರೀನ್ ಸಲ್ಯೂಶನ್ಸ್ ಪ್ರೈವೇಟ್ ಕಂಪನಿ, 1 ಡೀಸೆಲ್ ವಾಹನ ಹಾಗೂ 2 ಬ್ಯಾಟರಿ ಚಾಲಿತ ವಾಹನಗಳ ಓಡಾಟ ಆರಂಭಿಸಲಿದೆ. ಮಂಗಳವಾರ ಹಂಪಿಗೆ ಬಂದು ಸೇರಲಿವೆ. –
ಸಿದ್ದರಾಮೇಶ್ವರ, ಉಪವಿಭಾಗಾಧಿಕಾರಿ ಹಾಗೂ ಆಯುಕ್ತರು, ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ.
-ಪಿ.ಸತ್ಯನಾರಾಯಣ