Advertisement

ಪರಿಸರ ಸ್ನೇಹಿ ಪಬ್ಲಿಕ್‌ ಟಾಯ್ಲೆಟ್‌

01:10 AM Sep 26, 2019 | Lakshmi GovindaRaju |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ನಾಲ್ಕು ವಿಭಿನ್ನ ಮಾದರಿಯ ಶೌಚಾಲಯಗಳನ್ನು ನಿರ್ಮಿಸಲು ಬಿಬಿಎಂಪಿ ನಿರ್ಧರಿಸಿದೆ. ಇದರಿಂದ ನಗರದಲ್ಲಿ ಶೌಚಾಲಯ ಸಮಸ್ಯೆಗಳಿಗೆ ಪರಿಹಾರ ಸಿಗುವ ನಿರೀಕ್ಷೆ ಮೂಡಿದೆ. ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ 416 ಸಾರ್ವಜನಿಕ ಶೌಚಾಲಯಗಳು ಮತ್ತು 46 ಸಮುದಾಯ ಶೌಚಾಲಯಗಳನ್ನು ನಿರ್ಮಿಸುವ ಪ್ರಸ್ತಾವನೆ ಇದೆ.

Advertisement

ಸಾರ್ವಜನಿಕ ಪ್ರದೇಶಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಹಾಗೂ ಸ್ಥಳಾವಕಾಶ ನೋಡಿಕೊಂಡು ಶೌಚಾಲಯ ನಿರ್ಮಿಸಲು ಬಿಬಿಎಂಪಿ ನಿರ್ಧರಿಸಿದೆ. ವಿಶೇಷವೆಂದರೆ ಈ ಶೌಚಾಲಯಗಳ ನಿರ್ಮಾಣದಲ್ಲಿ ಹಲವು ಪರಿಸರ ಸ್ನೇಹಿ ಕ್ರಮಗಳನ್ನು ಪಾಲಿಕೆ ಅಳವಡಿಸಿಕೊಳ್ಳುತ್ತಿದೆ. ಕೇಂದ್ರ ಸರ್ಕಾರದ ಸ್ವತ್ಛ ಭಾರತ ಯೋಜನೆಯಡಿ ಈ ಶೌಚಾಲಯಗಳನ್ನು ನಿರ್ಮಿಸುತ್ತಿದ್ದು, ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಯ ಸಹಭಾಗಿತ್ವವೂ ಇದೆ.

ಯೋಜನೆಗೆ ಅಂದಾಜು 8 ಲಕ್ಷದಿಂದ 19.3 ಲಕ್ಷ ರೂ. ವೆಚ್ಚವಾಗಲಿದ್ದು, ಟಾಯ್ಲೆಟ್‌ಗಳಿಗೆ ಆಧುನಿಕ ಸ್ಪರ್ಶ ಸಿಗಲಿದೆ. ವಾಣಿಜ್ಯ ಪ್ರದೇಶಗಳಲ್ಲಿ ಪ್ರತಿ ಒಂದು ಕಿ.ಮೀಗೆ ಒಂದು ಶೌಚಾಲಯ ಹಾಗೂ ವಸತಿ ಪ್ರದೇಶಗಳಲ್ಲಿ ಪ್ರತಿ 500 ಮೀಟರ್‌ಗೆ ಒಂದು ಶೌಚಾಲಯ ಇರಬೇಕು ಎಂಬ ನಿಯಮವಿದೆ. ಈ ನಿಯಮದಂತೆ ಶೌಚಾಲಯಗಳನ್ನು ನಿರ್ಮಿಸಲು ಬಿಬಿಎಂಪಿ ಯೋಜನೆ ರೂಪಿಸುತ್ತಿದೆ. ಹೊಸ ಮಾದರಿಯ ಶೌಚಾಲಯಗಳ ನಿರ್ವಹಣೆಗೂ ಒತ್ತು ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಸೌರಶಕ್ತಿ ವ್ಯವಸ್ಥೆ: ಪರಿಸರ ಸ್ನೇಹಿ ಹಾಗೂ ದಿವ್ಯಾಂಗರು ಬಳಸಲು ಸುಲಭವಾಗಿರುವ ಶೌಚಾಲಯಗಳನ್ನು ನಿರ್ಮಿಸಲು ಪಾಲಿಕೆ ನಿರ್ಧರಿಸಿದೆ. ಉದ್ದೇಶಿತ ನಾಲ್ಕೂ ಮಾದರಿಯ ಶೌಚಾಲಯಗಳಲ್ಲಿ ಸೌರಶಕ್ತಿ ಬಳಕೆ, ಗಾಳಿ ಮತ್ತು ಬೆಳಕು ಬರುವುದಕ್ಕೆ ಮುಕ್ತ ಅವಕಾಶವಿರುವಂತೆ ಕಟ್ಟಲಾಗುತ್ತದೆ. ಹೀಗಾಗಿ ಹೊಸ ವಿಧದ ಶೌಚಾಲಯಗಳು ನಗರದಲ್ಲಿ ತಲೆಎತ್ತಲಿವೆ.

ನಾಲ್ಕು ಮಾದರಿ: ಬಿಎಂಪಿ ವ್ಯಾಪ್ತಿಯಲ್ಲಿ ನಾಲ್ಕು ಮಾದರಿಯ ಶೌಚಾಲಯಗಳನ್ನು ನಿರ್ಮಿಸಲು ಬಿಬಿಎಂಪಿ ನೀಲಿ ನಕ್ಷೆ ತಯಾರಿಸಿದ್ದು, ಎಂಟು ವಲಯಗಳಲ್ಲಿ ಅಲ್ಲಿನ ಸಾರ್ವಜನಿಕರ ಬೇಡಿಕೆ ಹಾಗೂ ಸ್ಥಳಾವಕಾಶಕ್ಕೆ ಅನುಗುಣವಾಗಿ ನಾಲ್ಕು ಮಾದರಿಗಳ ಪೈಕಿ, ಆಯಾ ಪ್ರದೇಶಕ್ಕೆ ಸರಿಹೊಂದುವಂತಹ ಒಂದು ಮಾದರಿಯ ಶೌಚಾಲಯ ನಿರ್ಮಾಣ ಮಾಡಲಿದೆ. ಮಳೆ ಬಂದರೆ ಸಾರ್ವಜನಿಕರು ನಿಲ್ಲುವುದಕ್ಕೂ ಸ್ಥಳಾವಕಾಶವಿರುವ ರೀತಿಯ ವಿನ್ಯಾಸಕ್ಕೆ ಆಗ್ಯತೆ ನೀಡಿದ್ದು, ದೂರದಿಂದ ನೋಡಿದರೆ ಶೌಚಾಲಯ ಎಂದು ಸುಲಭವಾಗಿ ಗುರುತಿಸಬಹುದಾದ ವಿನ್ಯಾಸ ಇರಲಿದೆ. ಇದಕ್ಕೆ ನಿರ್ದಿಷ್ಟ ಚಿಹ್ನೆ ಬಳಸುವ ಬಗ್ಗೆಯೂ ಬಿಬಿಎಂಪಿ ಚಿಂತನೆ ನಡೆಸಿದೆ.

Advertisement

ದಸ್ಥಳಾವಕಾಶ ಕಡಿಮೆ ಇರುವ ಪ್ರದೇಶಗಳಲ್ಲಿ ಮೊದಲ ಮಾದರಿ ಮತ್ತು ವಿಶಾಲ ಪ್ರದೇಶ ಇರುವಲ್ಲಿ ಎರಡನೇ ಮಾದರಿ ಶೌಚಾಲಯ ನಿರ್ಮಾಣವಾಗಲಿದೆ. ಇದನ್ನು ಸಾರ್ವಜನಿಕರು ಹೆಚ್ಚು ನಡೆದಾಡುವ ಪ್ರದೇಶಗಳಲ್ಲಿ ಅಥವಾ ರಸ್ತೆ ಬದಿಯಲ್ಲಿನ ಜಾಗಕ್ಕೆ ಅನುಗುಣವಾಗಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಮೂರನೇ ಮಾದರಿ ಶೌಚಾಲಯಗಳು ಜನನಿಬಿಡ ಪ್ರದೇಶದಲ್ಲಿ ಇರಲಿವೆ. ಇದರಲ್ಲಿ ವಿಶಾಲವಾದ ಸ್ನಾನಗೃಹವೂ ಇರಲಿದೆ.

ಹೊರ ರಾಜ್ಯದ ಮತ್ತು ವಿದೇಶಿ ಪ್ರವಾಸಿಗರಿಗೆ ನಗರದ ಬಗ್ಗೆ ಇರುವ ಕೆಟ್ಟ ಅಭಿಪ್ರಾಯ ಹೋಗಲಾಡಿಸಲು ವಿಮಾನ ನಿಲ್ದಾಣಗಳಲ್ಲಿ ಇರುವ ಮಾದರಿಯ ಶೌಚಾಲಯಗಳನ್ನು ನಿರ್ಮಿಸಲಾಗುತ್ತದೆ. ಇದುವೇ ನಾಲ್ಕನೇ ಮಾದರಿ. ನೀರಿನ ಮಿತ ಬಳಕೆ ಇಲ್ಲಿನ ಹೈಲೈಟ್‌. ನಗರದ ಸಾರ್ವಜನಿಕರು ಪ್ರಯಾಣಿಸುವ ಕೇಂದ್ರ ಭಾಗಗಳಲ್ಲೂ ಈ ಮಾದರಿಯ ಶೌಚಾಲಯ ನಿರ್ಮಾಣವಾಗಲಿದೆ.

ನಗರದಲ್ಲಿ ಈಗಿರುವ ಶೌಚಾಲಯಗಳ ಸಂಖ್ಯೆ
ಶೌಚಾಲಯ ಮಾದರಿ ಸಂಖ್ಯೆ
ಸಾರ್ವಜನಿಕ ಶೌಚಾಲಯ 289
ಸಮುದಾಯ ಶೌಚಾಲಯ 32
ಸುಲಭ ಶೌಚಾಲಯ 35
ಮಾಲ್‌, ಶಾಪಿಂಗ್‌ ಕಾಂಪ್ಲೆಕ್ಸ್‌, ಮಾರ್ಕೆಟ್‌ 18
ಪೆಟ್ರೋಲ್‌ ಬಂಕ್‌ 174
ರೈಲ್ವೆ ಮತ್ತು ಬಸ್‌ನಿಲ್ದಾಣ 19
ಪಾರ್ಕ್‌ ಮತ್ತು ಕೆರೆ 21
ಸರ್ಕಾರಿ ಆಸ್ಪತ್ರೆ 25
ಒಟ್ಟು 613

ವಲಯ ಶೌಚಾಲಯಗಳು
ಯಲಹಂಕ 59
ಮಹದೇವಪುರ 37
ದಾಸರಹಳ್ಳಿ 23
ರಾಜರಾಜೇಶ್ವರಿನಗರ 78
ಪಶ್ಚಿಮ 114
ದಕ್ಷಿಣ 198
ಪೂರ್ವ 57
ಬೊಮ್ಮನಹಳ್ಳಿ 47
ಒಟ್ಟು 613

ಪ್ರಸ್ತಾವಿತ ಶೌಚಾಲಯಗಳು ಸಂಖ್ಯೆ
ವಲಯ ಸಾರ್ವಜನಿಕ ಶೌಚಾಲಯ ಸಮುದಾಯ ಶೌಚಾಲಯ
ಯಲಹಂಕ 25 6
ಮಹದೇವಪುರ 51 0
ದಾಸರಹಳ್ಳಿ 21 5
ರಾಜರಾಜೇಶ್ವರಿ ನಗರ 57 6
ಪಶ್ಚಿಮ 70 10
ದಕ್ಷಿಣ 48 4
ಪೂರ್ವ 104 15
ಬೊಮ್ಮನಹಳ್ಳಿ 40 0
ಒಟ್ಟು 416 46

ನಾಲ್ಕು ಮಾದರಿಯ ಶೌಚಾಲಯಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದು, ಗ್ರಾನೈಟ್‌ ಮತ್ತು ಟೈಪ್‌ ಡಿಸೈನ್‌ ಮಾದರಿ ಬಳಸಲಾಗುತ್ತಿದೆ. ಜಲ ಮಂಡಳಿಯಿಂದ ಶುದ್ಧೀಕರಿಸಿದ ನೀರನ್ನು ಈ ಶೌಚಾಲಯಗಳಲ್ಲಿ ಬಳಸಲಿದ್ದೇವೆ. ಇದರಿಂದ ನೀರಿನ ಮಿತ ಬಳಕೆ ಆಗಲಿದೆ.
-ರಂದೀಪ್‌, ವಿಶೇಷ ಆಯುಕ್ತ (ಘನತ್ಯಾಜ್ಯ)

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next