Advertisement

ಪೊಲೀಸ್‌ ಸ್ಟೇಷನ್‌ನಲ್ಲಿ ಪರಿಸರ ಸ್ನೇಹಿ ಮೋದಕಪ್ರಿಯ

12:50 AM Aug 23, 2019 | Sriram |

ರಾಯಚೂರು: ಗಣೇಶ ಹಬ್ಬ ಸಮೀಪಿಸುತ್ತಿದ್ದಂತೆ ಎಲ್ಲೆಲ್ಲೂ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಗಣೇಶಗಳದ್ದೇ ಅಬ್ಬರ ಕಾಣಿಸುತ್ತದೆ. ಅಂಥದ್ದರ ಮಧ್ಯೆ ಸದ್ದಿಲ್ಲದೇ ಪರಿಸರ ಸ್ನೇಹಿ ಗಣೇಶನ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ವಿಭಿನ್ನ ಹೆಜ್ಜೆ ಇಟ್ಟಿದೆ ಜಿಲ್ಲಾ ಪೊಲೀಸ್‌ ಇಲಾಖೆ.

Advertisement

ಈಚೆಗೆ ಜಿಲ್ಲೆಗೆ ಆಗಮಿಸಿದ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಸಿ.ಬಿ.ವೇದಮೂರ್ತಿ ತಮ್ಮ ವಿನೂತನ ಕಾರ್ಯಕ್ರಮಗಳ ಮೂಲಕ ಪರಿಸರ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಈಗ 100 ಪರಿಸರ ಸ್ನೇಹಿ ಗಣೇಶಗಳನ್ನು ಕಲಾವಿದರಿಂದ ಮಾಡಿಸಿ ಕಚೇರಿಯಲ್ಲಿ ಅವುಗಳನ್ನು ವಿತರಿಸುವ ಮೂಲಕ ಮತ್ತೂಂದು ಪರಿಸರ ಜಾಗೃತಿ ಅಭಿಯಾನ ಶುರು ಮಾಡಿರುವುದು ವಿಶೇಷ.

ಏನು ವಿಶೇಷ: ಈ ಬಾರಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಉದ್ದೇಶದಿಂದ ಎಸ್‌ಪಿ ಈ ಕಾರ್ಯಕ್ರಮ ಜಾರಿಗೊಳಿಸಿದ್ದಾರೆ. ನಗರದ ಕಲಾವಿದ ಬಲರಾಮ್‌ ಸಿಂಗ್‌ ಎಂಬುವವರಿಂದ ಜೇಡಿಮಣ್ಣಿನಿಂದ 100 ಗಣೇಶ ಮೂರ್ತಿಗಳನ್ನು ತಯಾರಿಸಿದ್ದಾರೆ. ಜೇಡಿಮಣ್ಣಿಗೆ ತುಳಸಿ, ಹಿರೇಕಾಯಿ, ಬೆಂಡೆಕಾಯಿ, ಹಾಗಲಕಾಯಿ ಬೀಜಗಳನ್ನು ಹಾಕಿ ಮೂರ್ತಿಗಳನ್ನು ತಯಾರಿಸಲಾಗಿದೆ. ಇದರಿಂದ ಪೂಜೆ ಬಳಿಕ ಇವುಗಳನ್ನು ಮನೆ ಮುಂದೆ ಇಟ್ಟು ನೀರು ಹಾಕಿದರೆ ಅವುಗಳಿಂದ ಸಸಿ ಬೆಳೆಯಲಿವೆ. ಪರಿಸರಕ್ಕೂ ಯಾವುದೇ ರೀತಿಯ ಹಾನಿಯಾಗುವುದಿಲ್ಲ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ಬಂದು ಗಣೇಶನನ್ನು ಪಡೆಯಬಹುದು. ಮೂರ್ತಿ ತೆಗೆದುಕೊಂಡು ಹೋಗಿ ಪ್ರತಿಷ್ಠಾಪಿಸುವುದು ಮಾತ್ರವಲ್ಲ ಅವರು ಕರೆದರೆ ನಾನೂ ಹೋಗಿ ಭೇಟಿ ಕೊಟ್ಟು ಬರುವೆ ಎಂದು ತಿಳಿಸುತ್ತಾರೆ ಅವರು.

ನಮ್ಮ ಮನೆಯಲ್ಲಿ ಕಳೆದ 30 ವರ್ಷ ಗಳಿಂದ ಪರಿಸರ ಸ್ನೇಹಿ ಗಣೇಶನನ್ನೇ ಕೂರಿಸಲಾಗುತ್ತಿದೆ. ಪರಿಸರ ಸ್ನೇಹಿ ಗಣೇಶನನ್ನು ಕೂಡಿಸುವುದರಿಂದ ಮಾಲಿನ್ಯ ನಿಯಂತ್ರಿಸಬಹುದು. ನಮ್ಮ ಬಳಿ ಇನ್ನೂ 99 ಗಣೇಶ ಮೂರ್ತಿ ಉಳಿದಿವೆ. ಯಾರು ಬೇಕಾದರೂ ಬಂದು ಖರೀದಿಸಬಹುದು.
-ಡಾ| ಸಿ.ಬಿ.ವೇದಮೂರ್ತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಸಾರ್ವಜನಿಕರಿಗೆ ಮನವಿ

ಗಣೇಶ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುವುದರ ಜತೆಗೆ ಪರಿಸರ ಸ್ನೇಹಿಯಾಗಿ ಆಚರಿಸುವುದು ಉತ್ತಮ. ಇದಕ್ಕೆ ಎಲ್ಲ ಯುವಕ ಮಂಡಳಿಗಳ ಪಾತ್ರ ಮುಖ್ಯ. ಈ ಬಾರಿ ಪಿಒಪಿ ಗಣೇಶ ಮೂರ್ತಿ ನಿಷೇಧಕ್ಕೆ ಸಾಕಷ್ಟು ಒತ್ತು ನೀಡಲಾಗುತ್ತಿದೆ. ಅದರ ಜತೆಗೆ ಅಗತ್ಯಕ್ಕಿಂತ ಹೆಚ್ಚು ಶಬ್ದ ಮಾಡುವ ಡಿಜೆಗಳನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಶಾಂತಿ, ಸೌಹಾರ್ದದಿಂದ ಗಣೇಶೋತ್ಸವ ಆಚರಿಸಬೇಕು ಎಂದು ಎಸ್ಪಿ ಡಾ| ಸಿ.ಬಿ. ವೇದಮೂರ್ತಿ ಕೋರಿದ್ದಾರೆ.
-ಸಿದ್ಧಯ್ಯಸ್ವಾಮಿ ಕುಕನೂರ
Advertisement

Udayavani is now on Telegram. Click here to join our channel and stay updated with the latest news.

Next