ವಿಜಯಪುರ: ನಗರದಲ್ಲಿ ಪರಿಸರ ರಕ್ಷಣೆ ಕಾರ್ಯದಲ್ಲಿ ತೊಡಗಿರುವ ನನ್ನ ಗಿಡ ನನ್ನ ಭೂಮಿ ಸಂಘಟನೆ ಕಾರ್ಯಕರ್ತರು ಈ ಬಾರಿ ಪರಿಸರ ಗಣೇಶ ಆಚರಣೆಗೆ ಮುಂದಾಗಿದ್ದಾರೆ.
ರಸಾಯನಿಕದಿಂದ ತಯಾರಿಸಿದ ಗಣೇಶ ಮೂರ್ತಿಗಳ ಬಳಕೆ-ವಿಸರ್ಜನೆಯಿಂದ ಜಲಮಾಲಿನ್ಯ ತಡೆಗೆ ಮುಂದಾಗಿರುವ ಸಂಘಟನೆಯಿಂದ ಪರಿಸರಸ್ನೇಹಿ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪನೆ ಅಭಿಯಾನ ಆರಂಭಿಸಿದೆ.
ತಮ್ಮ ಸಂಘಟನೆ ಆರಂಭಿಸಿರುವ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ಸ್ಥಾಪನೆ ಅಭಿಯಾನದ ಕುರಿತು ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಸಂಘಟನೆ ಸಂಚಾಲಕ ಬಸವರಾಜ ಬೈಚಬಾಳ, ಕಳೆದಹಲವು ವರ್ಷಗಳಿಂದ ಪರಿಸರ ರಕ್ಷಣೆಗಾಗಿ ಹಲವು ಕಾರ್ಯಕ್ರಮ ಹಮ್ಮಿಕೊಂಡಿರುವ ನಮ್ಮ ಸಂಘಟನೆ, ಕಳೆದ ವರ್ಷದಿಂದ ಪರಿಸರ ಸ್ನೇಹಿ ಗಣೇಶ ಉತ್ಸವ ಜಾಗೃತಿಗೆ ಮುಂದಾಗಿದೆ. ಹಿಂದಿನ ವರ್ಷ ಮಣ್ಣಿನಿಂದ ಮಾಡಿದ್ದ 6 ಸಾವಿರ ಗಣೇಶ ಮೂರ್ತಿ ವಿತರಿಸಿದ್ದು ಈ ಬಾರಿ ವಿವಿಧ ಗಾತ್ರದ 10 ಸಾವಿರ ಮಣ್ಣಿನ ಗಣೇಶ ಮೂರ್ತಿ ವಿತರಣೆಗೆ ಕ್ರಮ ಕೈಗೊಂಡಿದೆ ಎಂದರು. ನಮ್ಮ ಸಂಘಟನೆ ಪರಿಸರ ಸಂರಕ್ಷಣೆ ಭಾಗವಾಗಿಜಲ ಮೂಲಗಳನ್ನು ರಕ್ಷಿಸಲು ಮಣ್ಣಿನ ಗಣೇಶ ಮೂರ್ತಿ ತಯಾರಿಸಿ, ಮಾರಾಟಕ್ಕೆ ಮುಂದಾಗಿದೆ. ಮೂರ್ತಿಗಳನ್ನು ಮಾಡುವಲ್ಲಿ ಶ್ರಮಿಸಿ ಕುಶಲ ಕರ್ಮಿ ಕಾರ್ಮಿಕರ ಕೂಲಿಗೆ ಹೊಂದಿಕೆಯಾದರು ಸಾಕು ಎಂದು ಕನಿಷ್ಠ ದರಕ್ಕೆ ಗಣೇಶ ಮೂರ್ತಿಗಳ ಮಾರಾಟಕ್ಕೆ ಮುಂದಾಗಿದ್ದೇವೆ ಎಂದು ವಿವರಿಸಿದರು.
ಮಣ್ಣಿನ ಗಣಪ ಮೂರ್ತಿ ಮಾರಾಟಕ್ಕೆ ನಗರದ ಎಸ್.ಎಸ್. ರಸ್ತೆಯ ಸಿದ್ದೇಶ್ವರ ಕಲಾಭವನ, ಬಿಎಲ್‌ಡಿಇ ಹತ್ತಿರ ಲಿಂಗದ ಗುಡಿ ರಸ್ತೆಯಲ್ಲಿರುವ ಸಂಗನಬಸವ ಮಂಗಲ ಕಾರ್ಯಾಲಯ, ಜಲನಗರದ ನಿಂಬೆಕ್ಕ ಮಂಗಲ ಕಾರ್ಯಾಲಯ, ಜೋರಾಪುರ ಪೇಠದ ಶಂಕರಲಿಂಗ ದೇವಸ್ಥಾನದಲ್ಲಿ ಕನಿಷ್ಠ ದರಕ್ಕೆ ಮಣ್ಣಿನ ಗಣೇಶ ಮೂರ್ತಿಗಳನ್ನು ಮಾರಾಟದ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಸಂಘಟನೆಯ ಗಿರೀಶ ಪಾಟೀಲ, ಚಿದಾನಂದ ಔರಂಗಬಾದ, ಶರಣಬಸು ಕುಂಬಾರ, ಮಂಜು ಆಸಂಗಿ ಇದ್ದರು.