Advertisement

ಚೌತಿಗೆ ಬರುವನು ಪರಿಸರ ಸ್ನೇಹಿ ಗಣೇಶ

11:51 AM Aug 22, 2017 | |

ಬೀದರ: ಚಿತ್ರಕಲಾ ಪಠ್ಯ ಚಟುವಟಿಕೆಗಳ ಜತೆಗೆ ಇಲ್ಲಿನ ಚಿತ್ರಕಲಾ ಮಹಾವಿದ್ಯಾಲಯವೊಂದು ಮೂರು ದಶಕಗಳಿಂದ ಮಣ್ಣಿನ ಗಣೇಶ ವಿಗ್ರಹ ತಯಾರಿಸುವ ಮೂಲಕ ಸದ್ದಿಲ್ಲದೇ ಪರಿಸರ ಸ್ನೇಹಿ ಗಣೇಶ ಉತ್ಸವ ಆಚರಣೆಗೆ ಅರಿವು ಮತ್ತು
ಜಾಗೃತಿ ಮೂಡಿಸುತ್ತಿದೆ. ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಭರಾಟೆ ನಡುವೆ ಅಲ್ಲಲ್ಲಿ ಮಣ್ಣಿನ ಗಣಪನನ್ನು ಪ್ರತಿಷ್ಠಾಪಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ವರ್ಣಂಜಿತ ಗಣಪತಿಯ ಬಗ್ಗೆ ಆಸಕ್ತಿಯಿಂದಾಗಿ ಮಣ್ಣಿನ ಮೂರ್ತಿಗಳತ್ತ ಜನರ ನಿರಾಸಕ್ತಿ ಹೆಚ್ಚುತ್ತಿದೆ. ಚತುರ್ಥಿ ಹತ್ತಿರವಾಗುತ್ತಿದ್ದಂತೆ ಎಲ್ಲೆಡೆ ವರ್ಣರಂಜಿತ ವಿನಾಯಕನ ಮೂರ್ತಿಗಳು ರಾರಾಜಿಸುತ್ತವೆ. ಇದರಿಂದ ಪರಿಸರ ಸ್ನೇಹಿ ಮೂರ್ತಿಗಳು ಕಾಣಿಸಿಗುವುದೇ ಅಪರೂಪ. ಈ ಮಧ್ಯದಲ್ಲೂ ನಗರದ ಯೋಗೀಶ ಚಿತ್ರಕಲಾ ಕಾಲೇಜಿನ 13 ಜನ ವಿದ್ಯಾರ್ಥಿಗಳ ತಂಡ ಪ್ರತಿ ವರ್ಷ ಪರಿಸರ ಸ್ನೇಹಿ ಗಣಪನನ್ನು ತಯಾರಿಸುವ ಮೂಲಕ ಸೈ ಎನಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಜಲಚರಗಳ ಸಾವಿಗೆ ಕಾರಣವಾಗುವ ಬಣ್ಣದ ವಿಗ್ರಹಗಳ ಬಳಕೆ ಬೇಡ ಎನ್ನುವ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಗಣೇಶ ಅಪ್ಪಟ ಪರಿಸರದ ಪ್ರತೀಕನಾಗಿರುವ ಹಿನ್ನೆಲೆಯಲ್ಲಿ ಮಣ್ಣಿನಿಂದ ಕೂಡಿದ ವಿಗ್ರಹಗಳನ್ನಿಟ್ಟು ಪೂಜಿಸುವುದೇ ನಿಜವಾದ ಸಂಪ್ರದಾಯ. ಆದರೆ, ಬಣ್ಣಗಳ ಅಲಂಕಾರಿಕ ಗಣೇಶ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಂತೆ ಪರಿಸರ ಸ್ನೇಹಿ ಗಣಪ ಸೊರಗುತ್ತಿದ್ದಾನೆ. ಈ ಮಧ್ಯದಲ್ಲೂ ಕಾಲೇಜು ಪಾಠದೊಂದಿಗೆ ವಿದ್ಯಾರ್ಥಿಗಳು ಜೇಡಿ ಮಣ್ಣಿನಿಂದ ಮೂರ್ತಿಗಳನ್ನು ತಯಾರಿಸಿ ಪರಿಸರ ಕಾಳಜಿ ತೋರುತ್ತಿದ್ದಾರೆ. ಚತುರ್ಥಿ ಬರುತ್ತಿದ್ದಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಸ್ನೇಹಿ ಗಣೇಶ ಹಬ್ಬ
ಆಚರಿಸುವಂತೆ ಕೇವಲ ಪತ್ರಿಕೆ ಜಾಹೀರಾತು ನೀಡಿ ಕೈ ತೊಳೆದುಕೊಳ್ಳುತ್ತಿದೆ. ಮಂಡಳಿ ಮಾಲಿನ್ಯದ ಪ್ರಮಾಣ ಪರೀಕ್ಷಿಸುತ್ತಿದೆ ಹೊರತು ಬಣ್ಣದ ಮೂರ್ತಿಗಳಿಂದ ಪರಿಸರದ ಮೇಲಾಗುವ ಪರಿಣಾಮಗಳ ಬಗ್ಗೆ ಮಾರಾಟಗಾರರಲ್ಲಿ
ತಿಳಿವಳಿಕೆ ಮೂಡಿಸುವುದಾಗಲಿ, ಜನರಲ್ಲಿ ಜಾಗೃತಿಯನ್ನುಂಟು ಮಾಡುವಲ್ಲಿ ನಿರಾಸಕ್ತಿ ತೋರುತ್ತಿದೆ. ಈ ನಡುವೆಯೂ ಇಲ್ಲಿನ ಯೋಗೀಶ ಚಿತ್ರಕಲಾ ಕಾಲೇಜಿನಲ್ಲಿ ಮೂರು ದಶಕಗಳಿಂದ ವಿದ್ಯಾರ್ಥಿಗಳೇ ಮಣ್ಣಿನಿಂದ ಬೃಹತ್‌
ಗಣಪನನ್ನು ತಯಾರಿಸಿ ಪ್ರತಿಷ್ಠಾಪಿಸುತ್ತ ಬರುತ್ತಿದ್ದಾರೆ. ನಾಲ್ಕೈದು ವರ್ಷಗಳಿಂದ ಪರಿಸರ ಪ್ರೇಮಿಗಳಿಂದ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಈ ಬಾರಿ 150 ವಿಗ್ರಹಗಳನ್ನು ತಯಾರಿಸುವ ಗುರಿ ಹೊಂದಿದ್ದಾರೆ. ಬೆಂಗಳೂರಿನಿಂದ ವಿಶೇಷವಾಗಿ ತಂದಿರುವ “ಬಾಂಬೆ ಕ್ಲೇ’ದಿಂದ ವಿಗ್ರಹಗಳನ್ನು ತಯಾರಿಸುತ್ತಿದ್ದಾರೆ. ಮಣ್ಣಿನಲ್ಲಿ ಅಪರೂಪದ ಮೂರ್ತಿಗಳನ್ನು ತಯಾರಿಸುವುದು ಸುಲಭದ ಮಾತಲ್ಲ. ಕಲಾ ನೈಪುಣ್ಯತೆ ಹೊಂದಿದವರಿಂದ ಮಾತ್ರ ಇದು ಸಾಧ್ಯ. ಇಲ್ಲಿ 1ರಿಂದ 7 ಅಡಿ ಎತ್ತರದ ವಿಗ್ರಹಗಳನ್ನು ಸಿದ್ದಪಡಿಸಲಾಗಿದೆ. ಚೀನಾ ವಸ್ತುಗಳ ಮಾರಾಟ ನಿಷೇಧ ಕುರಿತು, ಸಂಗೀತ ನುಡಿಸುವ ರೂಪದ ವಿಗ್ರಹಗಳು, ಆಮೆ ಮೇಲೆ, ಇಲಿ ಮತ್ತು ಸರ್ಪದ ಮೇಲೆ ಆಸಿನನಾದ ಗಣಪನ ಮೂರ್ತಿಗಳು ಸಿದ್ಧಗೊಳ್ಳುದ್ದು, ಅಂತಿಮ ರೂಪ ಕೊಡಲಾಗುತ್ತಿದೆ. ರಂಗು ರಂಗಿನ ವಿಗ್ರಹಗಳ ಮಾರಾಟದ ಮಧ್ಯದಲ್ಲಿ ಮರೆಯಾಗುತ್ತಿರುವ ಪರಿಸರ ಸ್ನೇಹಿ ಗಣಪನನ್ನು ಖರೀದಿಸುವ ಮೂಲಕ ಮಣ್ಣಿನ ವಿಗ್ರಹಗಳಿಗೆ ಜೀವ ತುಂಬುತ್ತಿರುವ ಕಲಾ ವಿದ್ಯಾರ್ಥಿಗಳ ಬೆನ್ನು ತಟ್ಟಬೇಕಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next