Advertisement

ಪರಿಸರಸ್ನೇಹಿ ದೀಪಾವಳಿ ನಮ್ಮದಾಗಲಿ

08:31 AM Nov 06, 2018 | |

ಉಡುಪಿ : ಹಬ್ಬಗಳನ್ನು ಆಡಂಬರಕ್ಕಿಂತ ಧ್ಯೇಯ ಅರಿತು ಆಚರಿಸುವಂತಾಗಬೇಕು. ಈಗ ನಮ್ಮ ಮುಂದಿರುವುದು ಬೆಳಕಿನ ಹಬ್ಬ ದೀಪಾವಳಿ. ಅದು ಹಂಡೆಗೆ ನೀರು ತುಂಬುವುದರಿಂದ ಹಿಡಿದು ಗೋಪೂಜೆ ದಿನದ ವರೆಗೆ ಹಲವು ಸಣ್ಣ ಸಣ್ಣ ಆಚರಣೆಗಳ ಗುತ್ಛ. 

Advertisement

ಗಂಗಾಮಾತೆಗೆ ಆಹ್ವಾನ
ಹಂಡೆಗೆ ನೀರು ತುಂಬುವಾಗ ಗಂಗೆಯನ್ನೇ ತರುತ್ತಿದ್ದೇವೆಂಬ ಭಾವ ಇರಬೇಕು ಎಂದಿದೆ. ಉಳಿದ ಎಲ್ಲ ನದಿಗಳಿಗಿಂತ ಪರಮಪಾವನ ಎಂದು ನಾವು ಪರಿಭಾವಿಸುವ ಗಂಗೆಯನ್ನು ನೆನೆದ ಮಾತ್ರಕ್ಕೆ ಅದರ ಸನ್ನಿಧಾನ ಅವತರಿಸುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿ ನಮ್ಮ ನಮ್ಮ ಮನೆಗಳಿಗೆ ಗಂಗೆಯನ್ನು ಭಾವನಾತ್ಮಕವಾಗಿ ಕರೆತರುವ ದಿನವಿದು. ನಿತ್ಯ ಸ್ನಾನ ಮಾಡುವಾಗಲೂ ಗಂಗೆಯನ್ನು ನೆನೆದು ಗಂಗಾಸ್ನಾನವನ್ನು ಮಾನಸಿಕವಾಗಿ ಮಾಡುವ ಕ್ರಮವಿದೆ. ಹೀಗೆ ನಿತ್ಯವೂ ಪಾವನ ಗಂಗೆಯನ್ನು ನಮ್ಮ ಮನೆಗೆ ಆಹ್ವಾನಿಸುವ ಅದ್ಭುತ ಕಲ್ಪನೆ ಇಲ್ಲಿದೆ. ಇವೆಲ್ಲದರ ಜತೆಗೆ ನಾವು (ಎಲ್ಲರೊಳಗಿರುವ ನಾವು) ಉಪಯೋಗಿಸುವ ನೀರನ್ನು ಮಲಿನಗೊಳಿಸದಂತೆ ಎಚ್ಚರಿಕೆ ವಹಿಸಬೇಕಾಗಿದೆ.

ವೈಜ್ಞಾನಿಕ ತೈಲಾಭ್ಯಂಜನ
ತೈಲಾಭ್ಯಂಜನಕ್ಕೆ ವೈಜ್ಞಾನಿಕ ಕ್ರಮವಿದೆ. ತಲೆಯ ನೆತ್ತಿಯಿಂದ ಹಿಡಿದು ಪಾದದ ವರೆಗೆ ಎಣ್ಣೆಯನ್ನು ಹಚ್ಚಿ ಬಿಸಿ ನೀರಿನ ಸ್ನಾನ ನಿತ್ಯವೂ ಮಾಡಬೇಕು. ಆದರೆ ಅದೀಗ ವಿವಿಧ “ದಿನಾಚರಣೆ’ಗಳಂತೆಯೇ ಒಂದು ದಿನದ ಸಾಂಕೇತಿಕ ಆಚರಣೆಯ ಮಟ್ಟಕ್ಕೆ ಇಳಿದಿದೆ. ತೈಲಸ್ನಾನದ ಬಗೆಗೆ ಆಯುರ್ವೇದ ವೈದ್ಯರಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು.  

ಪರಿಸರ, ಸ್ವದೇಶೀ ದೀಪಾರಾಧನೆ
ಗದ್ದೆಗೆ ದೀಪ ಇರಿಸಿ ಬಲೀಂದ್ರ ಕರೆಯುವುದು ರೂಢಿ. ಆದರೆ ಗದ್ದೆಗಳು ಈಗ ನಾಪತ್ತೆಯಾಗಿ ಅಪಾರ್ಟ್‌ಮೆಂಟ್‌ಗಳಾಗಿವೆ. ನಮಗೆ ಧಾನ್ಯ ಕೊಡುವ ಗದ್ದೆಗಳಿಗಿಂತ ರಿಯಲ್‌ ಎಸ್ಟೇಟ್‌ ಹಣ ಕೊಡುವ ಗದ್ದೆಗಳು ಮುಖ್ಯವಾಗಿವೆ. ಎಣ್ಣೆಯ ದೀಪಗಳಿಗಿಂತ ವಿದ್ಯುತ್‌ ದೀಪಗಳು ಮುಂಚೂಣಿಗೆ ಬಂದಿವೆ. ಗೂಡುದೀಪಗಳನ್ನು ಮನೆಗಳಲ್ಲಿಯೇ ತಯಾರಿಸುವ ಕ್ರಮ ತಪ್ಪಿ ಮಾರುಕಟ್ಟೆಯಿಂದ ಪ್ಲಾಸ್ಟಿಕ್‌ ಇತ್ಯಾದಿ ಪರಿಸರ ಮಾಲಿನ್ಯಕಾರಕ ವಸ್ತುಗಳಿಂದ ನಿರ್ಮಿತ ವಾದ ಗೂಡುದೀಪ ಖರೀದಿಸುತ್ತೇವೆ. ದೀಪದ ಎಣ್ಣೆಯೂ ಕಲುಷಿತವಾಗಿದೆೆ. ಇದನ್ನು ಸರಳವಾಗಿ ತಿಳಿದುಕೊಳ್ಳಬಹುದು. ಒಂದು ಕೆ.ಜಿ. ಎಳ್ಳಿನ ದರ ಸುಮಾರು 100 ರೂ. ಇದ್ದರೆ ಮೂರು ಕೆ.ಜಿ. ಎಳ್ಳಿನಿಂದ ಒಂದು ಕೆ.ಜಿ. ಎಣ್ಣೆ ಬರುತ್ತದೆ. ಈಗ 120, 130 ರೂ.ಗೂ ಒಂದು ಕೆ.ಜಿ. ಎಳ್ಳೆಣ್ಣೆ ಆಕರ್ಷಕ ಪ್ಯಾಕೆಟ್‌ಗಳಲ್ಲಿ ದೊರಕುತ್ತಿದೆ. ತಾಜಾ ಎಳ್ಳೆಣ್ಣೆ ಈ ದರದಲ್ಲಿ ಸಿಗಲು ಸಾಧ್ಯವೆ? 

ಹೊನ್ನೆಣ್ಣೆಯ ದೀಪ ಕಣ್ಣಿನ ಆರೋಗ್ಯಕ್ಕೂ ಉತ್ತಮ. ಹಿಂದೆ ಹೊನ್ನೆಣ್ಣೆಯ ದೀಪವನ್ನು ಗದ್ದೆಗೆ ಇಡುತ್ತಿದ್ದರು. ಬಳಕೆದಾರರು ಕಡಿಮೆಯಾದ ಕಾರಣ, ಹೊನ್ನೆ ಮರಗಳನ್ನೂ ಕಣ್ಮರೆ ಮಾಡಿದ ಕಾರಣ ಉತ್ಪಾದಕರ ಕೊರತೆ ಇದೆ. ಆದರೂ ಅಪರೂಪದಲ್ಲಿ ಹೊನ್ನೆಣ್ಣೆ ಉತ್ಪಾದಕರು ಇದ್ದಾರೆನ್ನುವುದು ನಮ್ಮ ಸೌಭಾಗ್ಯ. 

Advertisement

ಸಿಡಿಮದ್ದುಗಳ ಅವಾಂತರ ಎಚ್ಚರಿಕೆ
ದೀಪಾವಳಿಯಲ್ಲಿ ಸಿಡಿಮದ್ದು ಸಿಡಿತದಿಂದ ಆಗುವ ಅಡ್ಡ ಪರಿಣಾಮ ಢಾಳಾಗಿ ಕಾಣುತ್ತಿವೆ. 
ಸುಡುಮದ್ದುಗಳಿಂದ ಉಂಟಾಗುವ ಸದ್ದಿನ ಮಿತಿಯನ್ನು 4 ಮೀ. ದೂರದಲ್ಲಿ 125 ಡೆಸಿಬಲ್‌ (ಎಐ=ಆಡಿಬಲ್‌ ಫ್ರೀಕ್ವೆನ್ಸಿ ಇಂಟೆಗ್ರೇಟೆಡ್‌ ವ್ಯಾಲ್ಯೂ=ಕೇಳುವ ಶಬ್ದ ಪ್ರಮಾಣ) ಅಥವಾ 145 ಡೆಸಿಬಲ್‌ (ಸಿ-ಪಿಕೆ= ಕಮ್ಯುನಿಟಿ ನಾಯ್ಸ ಎಟ್‌ ಪೀಕ್‌ ವ್ಯಾಲ್ಯೂ=ಹಲವು ಸಿಡಿಮದ್ದುಗಳು ಸಿಡಿದಾಗ ಗಣಿತ ಲೆಕ್ಕದಲ್ಲಿ ಅಳೆಯುವ ಶಬ್ದ ಪ್ರಮಾಣ) ನಿಯಂತ್ರಿಸಲಾಗಿದೆ. ಆದೇಶ ಉಲ್ಲಂಘನೆ ಕಂಡು ಬಂದಲ್ಲಿ ಮಂಡಳಿ ಪ್ರಾದೇಶಿಕ ಕಚೇರಿಗಳಿಗೆ (ದೂ: ಉಡುಪಿ-0820 2572862, ಮಂಗಳೂರು- 0824 2408420, 2408239) ದೂರು ಸಲ್ಲಿಸಬಹುದು. 

ಸುಡುಮದ್ದು ಸಿಡಿಸುವಾಗ ಜಾಗರೂಕತೆ ಅಗತ್ಯ. ಮಕ್ಕಳಿಗೆ ಇದು ಆಕರ್ಷಕವಾದರೂ ಹಿರಿಯರು ನಿಗಾ ವಹಿಸ ಬೇಕು. ಏನಾದರೂ ತೊಂದರೆಯಾದಲ್ಲಿ ತತ್‌ಕ್ಷಣ ಆ್ಯಂಬುಲೆನ್ಸ್‌(108)ಗೆ ಕರೆ ನೀಡಿ. ಅಗ್ನಿಶಾಮಕ ಠಾಣೆಯ ದೂರವಾಣಿ ಸಂಖ್ಯೆ 101.

ದೇಸೀ ದನಗಳ ಪೂಜೆ


ಗೋಪೂಜೆಯನ್ನು ಗೋವುಗಳೇ ಇಲ್ಲದೆ ನಡೆಸುವ ಸ್ಥಿತಿ ಇದೆ. ಹಿಂದೆ ಮನೆ-ಮನೆಗಳಲ್ಲಿ ಗೋವುಗಳಿದ್ದವು, ಈಗ ಅಪರೂಪವಾಗಿದೆ. ಇರುವ ಗೋವುಗಳೂ ಮಿಶ್ರತಳಿಯವು, ದೇಸೀ ತಳಿಗಳನ್ನು ಹುಡುಕಬೇಕಾಗಿದೆ. ಎಲ್ಲವನ್ನೂ ಕಮರ್ಷಿಯಲ್‌ ಆಗಿ ಚಿಂತನೆ ಮಾಡುವ ಕ್ರಮ ರೂಪಿಸಿದ ಸರಕಾರ ಇಂತಹ ಪ್ರವೃತ್ತಿಯನ್ನು ನಮಗೆ ಗೊತ್ತಿಲ್ಲದೆ ನಮ್ಮ ಜೀವನದಲ್ಲಿ ತುರುಕಿಸಿದೆ. ಮಿಶ್ರತಳಿಯ ದನಗಳಲ್ಲಿ ಹಾಲಿನ ಪ್ರಮಾಣ ಹೆಚ್ಚಿಗೆ ಇದ್ದರೂ ಅವುಗಳಿಗೆ ಕೊಡುವ ಆಹಾರ, ಗರ್ಭಧಾರಣೆಯಿಂದ ಹಿಡಿದು ಎಲ್ಲವನ್ನೂ ಕೃತಕ ಮಾಡಿದ್ದರಿಂದ ಅವುಗಳ ಗುಣಮಟ್ಟವೂ ಕಳಪೆಯಾಗಿರುವುದನ್ನೂ ಈಗಷ್ಟೇ ಪಶುವಿಜ್ಞಾನಿಗಳು ಒಪ್ಪಿಕೊಳ್ಳುತ್ತಿದ್ದಾರೆ. ದೇಸೀತಳಿಗಳು ಉಪಯುಕ್ತ ವೆನ್ನುವುದು ಈಗ ಎಲ್ಲರಿಗೂ ತಿಳಿದ ವಿಷಯ. ಇನ್ನು ಅವುಗಳ ಹಾಲು, ಮೊಸರು, ಬೆಣ್ಣೆ, ತುಪ್ಪದ ಬೆಲೆ ಎಷ್ಟಿರಲಿಕ್ಕಿಲ್ಲ? ಇದ್ಯಾವುದನ್ನೂ ತಿಳಿದುಕೊಳ್ಳದೆ ಪ್ಯಾಕೆಟ್‌ ಹಾಲಿನಂತಹ ತರಹದ ಕೃತಕ ಜೀವನಶೈಲಿಗೆ ಮೊರೆ ಹೋಗಿದ್ದೇವೆ. ಇದರ ಬದಲು ದೇಸೀ ದನಗಳನ್ನು ಆರ್ಥಿಕ ದೃಷ್ಟಿ ಬಿಟ್ಟು ಅದಕ್ಕಿಂತ ಹೆಚ್ಚಿನ ಲಾಭಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಸಾಕುವುದು ಇಂದಿನ ಅಗತ್ಯವಾಗಿದೆ. ದೇಸೀ ತಳಿಗಳನ್ನು ಉಳಿಸುವತ್ತ ನಮ್ಮೆಲ್ಲರ ಕಾಳಜಿ ಇರಲಿ.

ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next