Advertisement

ಕಲ್ಚೆರ್ಪೆ: ಪರಿಸರ ಸ್ನೇಹಿ ಬರ್ನಿಂಗ್‌ ಮೆಷಿನ್‌ ಪ್ರಾಯೋಗಿಕ ಚಾಲನೆ

08:36 PM Oct 01, 2021 | Team Udayavani |

ಸುಳ್ಯ: ದಶಕಗಳಿಂದ ಸುಳ್ಯವನ್ನು ಕಾಡುತ್ತಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪರಿಸರ ಸ್ನೇಹಿ ಪ್ರಯತ್ನ ಪ್ರಾರಂಭಗೊಂಡಿದ್ದು ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ.

Advertisement

ನಗರದ ಕಸ ಸಂಗ್ರಹಿಸುವ ಕಲ್ಚೆರ್ಪೆ ಡಂಪಿಂಗ್‌ ಯಾರ್ಡ್‌ನಲ್ಲಿ ಆಧುನಿಕ ತಂತ್ರಜ್ಞಾನ ಬಳಸಿರುವ ಬರ್ನಿಂಗ್‌ ಮೆಷಿನ್‌ ಚಾಲನೆಯ ಪ್ರಥಮ ಪ್ರಯತ್ನ ಯಶಸ್ವಿಯಾಗಿದೆ. ಇಲ್ಲಿ ಗ್ಯಾಸಿಫಿಕೇಶನ್‌ ಯಂತ್ರದ ಮೂಲಕ ಕಸವನ್ನು ಉರಿಸಿ ತ್ಯಾಜ್ಯ ನಾಶ ಮಾಡಲಾಗುತ್ತದೆ. ಪರಿಸರ ಸ್ನೇಹಿಯಾದ ಈ ಯಂತ್ರದಲ್ಲಿ ಕಸವನ್ನು ವಿಲೇವಾರಿ ಮಾಡಿದಾಗ ಗ್ಯಾಸ್‌ ಮತ್ತು ಬೂದಿ ದೊರೆಯಲಿದ್ದು ಇದನ್ನು ಮರು ಬಳಕೆ ಮಾಡಲು ಸಾಧ್ಯವಿದೆ.

40 ಲಕ್ಷ ರೂ.ವೆಚ್ಚ
ನಗರದಲ್ಲಿ ಪ್ರತೀ ದಿನ ಸಂಗ್ರಹವಾಗುವ ಕಸ ಮತ್ತು ಈಗಾಗಲೇ ಕಲ್ಚೆರ್ಪೆ ಹಾಗು ನಗರ ಪಂಚಾಯತ್‌ ಮುಂಭಾಗದಲ್ಲಿ ಶೇಖರಿಸಲಾಗಿರುವ ಕಸವನ್ನು ಯಂತ್ರದ ಮೂಲಕ ವಿಲೇವಾರಿ ಮಾಡಿ ಬರ್ನ್ ಮಾಡಲು ಉದ್ದೇಶಿಸಲಾಗಿದೆ.

ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಅಳವಡಿಸಲಾದ ಬರ್ನಿಂಗ್‌ ಯಂತ್ರದಲ್ಲಿ ಒಂದು ಗಂಟೆಯಲ್ಲಿ 150 ಕೆಜಿ ತ್ಯಾಜ್ಯವನ್ನು ಉರಿಸಬಹುದು. ಪ್ರಾರಂಭದಲ್ಲಿ ಸಂಗ್ರಹ ಕಸ ಬರ್ನ್ ಮಾಡಲಾಗುತ್ತದೆ. ಅನಂತರ ದಿನಂಪ್ರತಿ ಸಂಗ್ರಹಿಸುವ ಕಸವನ್ನು ಪೂರ್ವದಲ್ಲಿ ವಿಂಗಡಿಸಿ ಅಗತ್ಯವಿರುವ ತ್ಯಾಜ್ಯಗಳನ್ನು ಬರ್ನ್ ಮಾಡಲಾಗುತ್ತದೆ.

ಇದನ್ನೂ ಓದಿ:ಸಿಂದಗಿ ಉಪ ಚುನಾವಣೆ : ನಾಜಿಯಾ ಶಕೀಲಾ ಅಂಗಡಿ ಜೆಡಿಎಸ್ ಅಭ್ಯರ್ಥಿ

Advertisement

ಏನಿದು ಕಸ ಸಮಸ್ಯೆ
ದಶಕಗಳಿಂದ ಕಾಡುವ ದೊಡ್ಡ ಸಮಸ್ಯೆ ಕಸ ವಿಲೇವಾರಿ. ಕಸ ಸಂಗ್ರಹಕ್ಕೆ ಮತ್ತು ವಿಲೇವಾರಿಗೆಂದು ಲಕ್ಷಾಂತರ ರೂ. ಖರ್ಚು ಮಾಡಲಾಗಿದೆ. ತ್ಯಾಜ್ಯ ವಿಲೇವಾರಿ ಘಟಕದ ಸ್ಥಳದ ವಿಚಾರದಲ್ಲಿ ಭಾರೀ ವಿರೋಧ ವ್ಯಕ್ತವಾಗಿ ಕೊನೆಗೂ ಪ್ರಾರಂಭಗೊಂಡಿತು. ಆದರೆ ಅಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡದ ಕಾರಣ ಕಸ ತುಂಬಿ ತುಳುಕಿತ್ತು. ಬೇರೆ ಹಲವು ಕಡೆಗಳಲ್ಲಿ ಜಾಗ ಹುಡುಕಿದರೂ ವಿರೋಧಗಳು ಮತ್ತು ತಾಂತ್ರಿಕ ಅಡಚಣೆಗಳಿಂದ ಸೂಕ್ತ ಜಾಗ ಸಿಕ್ಕಿರಲಿಲ್ಲ. ಕಲ್ಚೆರ್ಪೆ ಯಲ್ಲಿ ಕಸ ಹಾಕಲು ಸಾಧ್ಯವಾಗದ ಕಾರಣ ನಗರದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಕಳೆದ ಮೂರು ವರ್ಷಗಳಿಂದ ನಗರ ಪಂಚಾಯತ್‌ ಮುಂಭಾಗದ ಕಟ್ಟಡದಲ್ಲಿಯೇ ರಾಶಿ ಹಾಕಲಾಗಿತ್ತು. ಕಸದ ಸಮಸ್ಯೆ ಬಗ್ಗೆ ಸಚಿವರಾದಿಯಾಗಿ ವಿವಿಧ ಹಂತಗಳಲ್ಲಿ ಸಭೆ ನಡೆದಿತ್ತು.

ಎಂಟು ಗಂಟೆ ಸಾಕು
ದಿನ ನಿತ್ಯ ಸುಳ್ಯ ನಗರದಲ್ಲಿ ಒಂದು ಟನ್‌ಗಿಂತಲೂ ಹೆಚ್ಚು ಕಸ ಸಂಗ್ರಹ ಆಗುತ್ತದೆ. ಇಷ್ಟು ತ್ಯಾಜ್ಯವನ್ನು ಎಂಟು ಗಂಟೆಗಳಲ್ಲಿ ಬರ್ನ್ ಮಾಡಲು ಸಾಧ್ಯ. ಉರಿದಾಗ ನೀರು ಮಿಶ್ರಿತ ಬೂದಿ ಮತ್ತು ಗ್ಯಾಸ್‌ ದೊರೆಯುತ್ತದೆ. 150 ಕೆಜಿ ಕಸದಿಂದ 8ರಿಂದ 10 ಕೆಜಿ ಬೂದಿ ಉತ್ಪತ್ತಿ ಆಗುತ್ತದೆ. ಉತ್ಪತ್ತಿಯಾದ ಗ್ಯಾಸ್‌ ಅನ್ನು ಸಂಗ್ರಹಿಸಿ ಬಳಕೆ ಮಾಡಬಹುದು. ಅದೇ ರೀತಿ ಬೂದಿಯನ್ನು ಬೇರ್ಪಡಿಸಿ ಇಟ್ಟಿಗೆ ನಿರ್ಮಾಣ ಮತ್ತಿತರ ಅಗತ್ಯಗಳಿಗೆ ಬಳಸಬಹುದು. ಇಲ್ಲಿ ದೊರೆಯುವ ಗ್ಯಾಸ್‌ ಮತ್ತು ಬೂದಿಯನ್ನು ಪರಿಣಾಮಕಾರಿಯಾಗಿ ಮರು ಬಳಕೆ ಮಾಡುವ ಯೋಜನೆ ನಗರ ಆಡಳಿತದ್ದು. ಪ್ರಸ್ತುತ ಸುಮಾರು 2,500 ಟನ್‌ ಗೂ ಮಿಕ್ಕಿ ಕಸ ಕಲ್ಚಪೆìಯಲ್ಲಿ ರಾಶಿ ಬಿದ್ದಿದೆ. ಇದನ್ನು ಬರ್ನ್ ಮಾಡಿ ವಿಲೇವಾರಿ ಮಾಡುವ ಕಾರ್ಯ ಪ್ರಾರಂಭಿಸಲಾಗಿದೆ.

ಕಾರ್ಯಾರಂಭ
ಬರ್ನಿಂಗ್‌ ಯಂತ್ರ ಬಳಕೆ ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಯಶಸ್ವಿಯಾಗಿದ್ದು ಪೂರ್ಣ ಪ್ರಮಾಣದಲ್ಲಿ ಯಂತ್ರ ಕಾರ್ಯಾಚರಿಸಲು ಕೆಲವೊಂದು ಪರಿಕರಗಳನ್ನು ಅಳವಡಿಸಬೇಕಿದೆ. ಅವೆಲ್ಲವೂ ಪೂರ್ಣಗೊಂಡ ಬಳಿಕ ಇನ್ನೊಂದು ಹಂತದ ಪ್ರಾಯೋಗಿಕ ಪರೀಕ್ಷೆ ನಡೆಸಿ ಅಕ್ಟೋಬರ್‌ 10 ರ ಮೊದಲು ನಿರಂತರ ಕಾರ್ಯಾರಂಭ ಮಾಡುವ ಚಿಂತನೆ ಮಾಡಲಾಗಿದೆ.
-ವಿನಯ ಕುಮಾರ್‌ ಕಂದಡ್ಕ,
ಅಧ್ಯಕ್ಷ, ನಗರ ಪಂಚಾಯತ್‌, ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next