ಕಾರ್ಕಳ: ಭಾರತೀಯ ಕಿಸಾನ್ ಸಂಘ ರೈತರ ಸಂಘಟನೆಯಾಗಿ ವಿವಿಧ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಪರಿಸರ ಸ್ನೇಹಿ ಕೃಷಿ ಜಾಗೃತಿ ಅಭಿಯಾನ ನ್ನು ನಡೆಸಲು ಚಿಂತನೆ ನಡೆಸುತ್ತಿದೆ ಎಂದು ಭಾಕಿಸಂನ ತಾಲೂಕು ಸಮಿತಿ ಅಧ್ಯಕ್ಷ ಗೋವಿಂದರಾಜ್ ಭಟ್ ಕಡ್ತಲ ಹೇಳಿದರು.
ಕಾರ್ಕಳ ತಾ| ಭಾರತೀಯ ಕಿಸಾನ್ ಸಂಘದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಜ್ಞ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನ, ತರಬೇತಿ, ಪ್ರಾತ್ಯಕ್ಷಿಕೆ ಹಾಗೂ ಕ್ಷೇತ್ರ ವೀಕ್ಷಣೆ ಮೂಲಕ ಮಕ್ಕಳನ್ನು ಜಾಗೃತಿಗೊಳಿಸಿ ಮುಂದೆ ಅವರನ್ನು ಕುಟುಂಬ, ಸಮಾಜ ದಲ್ಲಿ ಜಾಗೃತಿ ಮುಟ್ಟಿಸುವ ರಾಯಭಾರಿಯಾಗಿಸುವ ಪ್ರಯತ್ನ ನಡೆಸಲಾಗುವುದು ಎಂದರು.
ಮಣ್ಣು, ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರ ಎಲ್ಲವೂ ವಿಷಮಯವಾಗುತ್ತಿದೆ. ಈ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ನಮ್ಮ ಮತ್ತು ಮುಂದಿನ ಪೀಳಿಗೆಯ ಜೀವನ ದುರಂತಮಯವಾಗಲಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಜಾಗೃತರಾಗುವ ಜತೆಗೆ ಮಕ್ಕಳಿಗೂ ಜಾಗೃತಿಯ ಪಾಠ ಕಲಿಸಬೇಕಾಗಿದೆ ಎಂದರು.
ಜಿಲ್ಲಾಧ್ಯಕ್ಷ ನವೀನಚಂದ್ರ ಜೈನ್ ಮಾತನಾಡಿ, ರೈತರ ಹತ್ತು ಹಲವು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಜಿಲ್ಲೆಯ ಶಾಸಕರು, ಸಚಿವರು, ಸಂಬಂಧಿಸಿದ ಎಲ್ಲ ಇಲಾಖಾಧಿಕಾರಿಗಳ ಉಪಸ್ಥಿತಿಯಲ್ಲಿ ಜಿಲ್ಲಾಮಟ್ಟದ ರೈತರ ಕುಂದುಕೊರತೆ ಸಭೆ ನಡೆಸುವ ಬಗ್ಗೆ ಚಿಂತಿಸಲಾಗಿದೆ. ಸಚಿವ ವಿ. ಸುನಿಲ್ ಕುಮಾರ್ ಅವರ ಗಮನಕ್ಕೆ ತರಲಾಗಿದ್ದು, ಶೀಘ್ರ ಸಭೆ ನಡೆಸುವಂತೆ ಮತ್ತೂಮ್ಮೆ ಒತ್ತಾಯಿಸುತ್ತೇವೆ ಎಂದರು.
ಭಾ.ಕಿ.ಸಂ.ನ ಪ್ರಾಂತ ಸಮ್ಮೇಳನ ಎ. 16, 17ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಸಮ್ಮೇಳನದಲ್ಲಿ ತಾ|ನ ರೈತ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವಿನಂತಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷರಾದ ಸುಂದರ ಶೆಟ್ಟಿ ಮುನಿಯಾಲು, ಕೆ. ಪಿ. ಭಂಡಾರಿ ಕೆದಿಂಜೆ, ಶೇಖರ್ ಶೆಟ್ಟಿ ನೀರೆ, ತಾ| ಸಮಿತಿ ಮತ್ತು ಗ್ರಾಮ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರ. ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಇನ್ನಾ ನಿರೂಪಿಸಿ, ವಂದಿಸಿದರು.
ಪ್ರಮುಖ ನಿರ್ಣಯಗಳು
ಜಿಲ್ಲೆಯ ವ್ಯವಸಾಯ ಸೇವಾ ಸಹಕಾರ ಸಂಘ ಗಳು ಸದಸ್ಯ ರೈತರಿಗೆ ಕೃಷಿ ಸಾಲದೊಂದಿಗೆ ವಿವಿಧ ಸೇವೆಗಳನ್ನು ಒದಗಿಸಬೇಕು. ಉಳುಮೆ, ನಾಟಿ ಮತ್ತು ಕೊಯ್ಲು ಸಂದರ್ಭದಲ್ಲಿ ಅಗತ್ಯ ಯಂತ್ರೋ ಪಕರಣಗಳನ್ನು ಹೊರ ಜಿಲ್ಲೆ, ಹೊರರಾಜ್ಯ ಗಳಿಂದ ತರಿಸಿ ನ್ಯಾಯೋಚಿತ ಬಾಡಿಗೆ ದರ ನಿಗದಿ ಪಡಿಸಬೇಕು. ಮಧ್ಯವರ್ತಿಗಳ ಸಮಸ್ಯೆ ಇಲ್ಲದೆ ನೇರವಾಗಿ ರೈತರಿಗೆ ಅನುಕೂಲ ಕಲ್ಪಿಸುವಂತೆ ರೈತರ ಸಹಕಾರ ಸಂಘಗಳನ್ನು ಒತ್ತಾಯಿಸಲು ತೀರ್ಮಾನಿಸಲಾಯಿತು.