ಶಿರಹಟ್ಟಿ: ತಾಲೂಕಿನ ಹೊಳೆ-ಇಟಗಿ ಗ್ರಾಮದ ಹತ್ತಿರ 2006ರಲ್ಲಿ ಇಟಗಿ-ಸಾಸರವಾಡ ಏತ ನೀರಾವರಿ ಯೋಜನೆ ಸಮಸ್ಯೆಗಳ ಸುಳಿಗೆ ಸಿಲುಕಿದೆ.
ರೈತರ ಹಿತ ಕಾಯುವುದಕ್ಕಾಗಿ ತಾಲೂಕಿನಲ್ಲಿರುವ ತುಂಗಭದ್ರಾ ನದಿ ನೀರನ್ನು ಸದ್ಬಳಕೆ ಮಾಡಿಕೊಂಡು ನೀರಾವರಿ ಯೋಜನೆ ಅರಂಭಿಸಲಾಗಿತ್ತು. ರೈತರ ಮೊಗದಲ್ಲಿ ಮಂದಹಾಸ ಮೂಡಿಸಬೇಕಾದ ಯೋಜನೆ ಹಳ್ಳ ಹಿಡಿದಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
14 ಗ್ರಾಮಗಳ 4000 ಹೆಕ್ಟೇರ ಪ್ರದೇಶ ನೀರಾವರಿ: ಯೋಜನೆಯಿಂದ ಇಟಗಿ-ಸಾಸರವಾಡ, ತಂಗೋಡ, ಕನಕವಾಡ, ಹೆಬ್ಟಾಳ, ಚೌಡಾಳ, ಬಸ್ಸಾಪುರ, ತೊಳಲಿ, ಕಲ್ಲಾಗನೂರ ಸೇರಿದಂತೆ ಒಟ್ಟು 11 ಗ್ರಾಮಗಳ ರೈತರ ಜಮೀನಿಗೆ ನೀರಾವರಿ ಒದಗಿಸಿ 1984 ಹೆಕ್ಟೇರ್ ನೀರಾವರಿಗೆ ಒಳಪಡಿಸುವ ಸಾಮರ್ಥ್ಯವನ್ನು ಈ ಯೋಜನೆಯಲ್ಲಿ ಅಳವಡಿಸಲಾಗಿದೆ. ಆದರೆ ವಿಪರ್ಯಾಸವೆಂದರೆ ಆರಂಭವಾದಾಗಿನಿಂದಲೂ ಒಂದಿಲ್ಲ ಒಂದು ಸಮಸ್ಯೆಯ ಸುಳಿಯಲ್ಲಿ ಸಿಲುಕುತ್ತಾ ಬಂದಿದೆ. ಆದರೆ ಒಂದು ಹನಿ ನೀರು ರೈತರ ಜಮೀನುಗಳಿಗೆ ತಲುಪಿಲ್ಲ. ರೈತರ ಆಶಾದಾಯಕವಾದ ಈ ಯೋಜನೆಗೆ ಅನುಷ್ಠಾನ ಎಂದು? ಎನ್ನುವ ಪ್ರಶ್ನೆ ಸದಾ ಕಾಡುತ್ತಿದೆ.
ಕಾಲುವೆ ತುಂಬೆಲ್ಲ ಮುಳ್ಳಿನ ಕಂಟೆಗಳು: ತಾಲೂಕಿನ ಇಟಗಿ ಗ್ರಾಮದಲ್ಲಿ ನಿರ್ಮಾಣವಾದಂತಹ ಈ ಯೋಜನೆಯಿಂದ ನಿರ್ಮಾಣವಾದ ಜಾಕ್‌ವೆಲ್ ಮೂಲ ಸ್ಥಿತಿಯಿಂದ ಸಾಕಷ್ಟು ದುರಸ್ತಿಯಲ್ಲಿದೆ. ಅಲ್ಲಿ ಸರಿಯಾದ ನಿರ್ವಹಣೆ ಇಲ್ಲದೇ ಅಲ್ಲಿರುವ ಸಾಮಗ್ರಿಗಳು ಇಲ್ಲದಾಗಿವೆ. ಸಭೆಯಲ್ಲಿ ಹೆಬ್ಟಾಳ ಜಿಪಂ ಸದಸ್ಯ ಈಶ್ವರಣ್ಣ ಹುಲ್ಲಲ್ಲಿ ತುಂಗಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಯೋಜನೆಯಸ್ಥಿತಿಗತಿಗೆ ಛೀಮಾರಿ ಹಾಕಿದರು. ಯೋಜನೆಯ ಅಭಿವೃದ್ಧಿಗಾಗಿ ಮತ್ತು ದುರಸ್ತಿಗಾಗಿ ಸಾಕಷ್ಟು ಅನುದಾನವಿದ್ದರು ಸಹಿತ ಕುಂಟು ನೆಪ ಹೇಳುತ್ತಾ ಬರುತ್ತಿದ್ದಾರೆ. ಹಲವಾರು ಗಡುವುಗಳನ್ನು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಒಡೆದ ಕಾಲುವೆ: ಸತತ ಬರಗಾಲದಿಂದ ತತ್ತರಿಸುತ್ತಿರುವ ರೈತ ಸಮೂಹ ಮಳೆಯಿಲ್ಲದೇ ಬದುಕು ಬರಡಾಗಿದೆ. ನೀರಾವರಿ ಯೋಜನೆ ಆಶ್ರಯ ನೀಡುತ್ತದೆ ಎಂದರೆ ಅದು ಮರೀಚಿಕೆಯಾಗಿದೆ. 10 ಹತ್ತು ವರ್ಷಗಳಿಂದ ಒಂದು ಹನಿ ನೀರು ಬಂದಿಲ್ಲ. ತುಂಗಭದ್ರಾ ನದಿಯನ್ನು ಸಮರ್ಪಕವಾಗಿ ಬಳಕೆ ಮಾಡುವ ಸಾಕಷ್ಟು ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸಲಾಗುತ್ತಿದೆ. ಈ ಭಾರಿ ಮುಂಗಾರು ಮಳೆಯ ಮತ್ತು ಹಿಂಗಾರು ಮಳೆ ರೈತರಿಗೆ ಅನುಕೂಲವಾಗಿದ್ದರೂ ಕೈಯಲ್ಲಿರುವ ಬೆಣ್ಣೆ ಬಿಟ್ಟು ಪಕ್ಕದ ಮನೆಯಲ್ಲಿ ತುಪ್ಪಕ್ಕಾಗಿ ಅಂಗಲಾಚಿದಂತಾಗಿದೆ. ಸದ್ಯ ಕಾಲುವೆ ಒಡೆದು ನೀರು ಪೋಲಾಗಿದೆ. ಆದರೆ ಈವರೆಗೆ ಅಧಿಕಾರಿಗಳು ಗಮನ ಹರಿಸದೇ ಇರುವುದು ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
-ಪ್ರಕಾಶ.ಶಿ.ಮೇಟಿ