Advertisement

ಸರ್ಕಾರಿ ಭೂ ಒತ್ತುವರಿ ತೆರವಿಗೆ ಗ್ರಹಣ

12:12 PM Jul 09, 2018 | |

ಬೆಂಗಳೂರು: ಸರ್ಕಾರಿ ಭೂಮಿ ಅನಧಿಕೃತ ಸಾಗುವಳಿ ಸಕ್ರಮಕ್ಕೆ ಅರ್ಜಿ ಸಲ್ಲಿಕೆ ಅವಧಿ 2019ರ ಮಾ.16ರವರೆಗೆ ವಿಸ್ತರಣೆಯಾಗಿರುವ ಹಿನ್ನೆಲೆಯಲ್ಲಿ 1.77 ಲಕ್ಷ ಎಕರೆ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆಗೆ ಗ್ರಹಣ ಹಿಡಿದಂತಾಗಿದೆ.

Advertisement

ಈ ಹಿಂದೆ 1990ರ ಏ.14ಕ್ಕೂ ಮೊದಲು ಸರ್ಕಾರಿ ಭೂಮಿಯಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡಿದವರಿಗೆ ಸಕ್ರಮೀಕರಣಕ್ಕೆ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸಿತ್ತು. ಬಳಿಕ 2005ರ ಜ. 1ರ ಮೊದಲು ಸಾಗುವಳಿ ಮಾಡಿದವರು ಸಕ್ರಮೀಕರಣಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅದರಂತೆ ಗಡುವು ಅವಧಿ ಮುಕ್ತಾಯವಾಗಿತ್ತು.

ಹಿಂದಿನ ಸರ್ಕಾರ ಕಂದಾಯ ಕಾಯ್ದೆಗೆ ಮತ್ತೂಂದು ತಿದ್ದುಪಡಿ ತಂದು 2018ರ ಮಾರ್ಚ್‌ 17ರಂದು ಹೊರಡಿಸಿದ ಅಧಿಸೂಚನೆಯಲ್ಲಿ ಸಕ್ರಮೀಕರಣಕ್ಕೆ ಅರ್ಜಿ ಸಲ್ಲಿಸಲು ಒಂದು ವರ್ಷ ಕಾಲಾವಕಾಶ ನೀಡಿದೆ. ಇದರಿಂದಾಗಿ ನಿಯಮ 94ಎ ಹಾಗೂ 94ಬಿ ಅಡಿ ಸಲ್ಲಿಸಲು ಇನ್ನೂ ಎಂಟು ತಿಂಗಳಷ್ಟು ಅವಕಾಶವಿದೆ.

1.77 ಲಕ್ಷ ಎಕರೆ ಒತ್ತುವರಿ ತೆರವು ಬಾಕಿ: ರಾಜ್ಯದಲ್ಲಿನ ಒಟ್ಟು 63.84 ಲಕ್ಷ ಎಕರೆ ಸರ್ಕಾರಿ ಭೂಮಿ ಪೈಕಿ 11.75 ಲಕ್ಷ ಎಕರೆ ಒತ್ತುವರಿಯಾಗಿರುವುದು ಪತ್ತೆಯಾಗಿತ್ತು. ಈ ಪೈಕಿ 8152 ಎಕರೆಗೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದು, ಸಾರ್ವಜನಿಕ ಉದ್ದೇಶಕ್ಕೆ 7881 ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದು ಕಂಡುಬಂದಿತ್ತು. ಉಳಿದಂತೆ 7.09 ಲಕ್ಷ ಎಕರೆ ಭೂಮಿ ಒತ್ತುವರಿಯಾಗಿರುವುದು ಬಯಲಾಗಿತ್ತು. ಈವರೆಗೆ 2.71 ಲಕ್ಷ ಎಕರೆ ಭೂಮಿ ಒತ್ತುವರಿ ತೆರವಾಗಿದ್ದು, 1.77 ಲಕ್ಷ ಎಕರೆ ಭೂಮಿ ಒತ್ತುವರಿ ತೆರವು ಬಾಕಿ ಇದೆ.

ತೆರವಿಗೆ ಅಡ್ಡಿ: ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ ಮಾಡಿದ್ದರೂ ನೈಸರ್ಗಿಕ ಕಾಲುವೆ, ನದಿ ಕಣಿವೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸ್ಥಳೀಯ ಪ್ರಾಧಿಕಾರಗಳ ಒಡೆತನಕ್ಕೆ ಸೇರಿದ ಭೂಮಿ, ಹಾಲಿ ಇಲ್ಲವೇ ಉದ್ದೇಶಿತ ರಸ್ತೆ, ವರ್ತುಲ ರಸ್ತೆ, ಹೆದ್ದಾರಿ ನಿರ್ಮಾಣ- ವಿಸ್ತರಣೆಗೆಂದು ಗುರುತಿಸಿದ ಜಾಗ, ಉದ್ಯಾನ, ಆಟದ ಮೈದಾನ, ತೆರೆದ ಪ್ರದೇಶ, ಅಚ್ಚುಕಟ್ಟು ಪ್ರದೇಶ,

Advertisement

ಮಳೆ ನೀರು ಕಾಲುವೆ ಇತರೆ ಭೂಮಿ ಒತ್ತುವರಿಯಾಗಿದ್ದರೆ ಅದರ ಸಕ್ರಮಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಹಾಗೆಂದು ಏಕಾಏಕಿ ತೆರವುಗೊಳಿಸಲು ಸಾಧ್ಯವಿಲ್ಲ. ನಿಗದಿತ ಕಾಲಮಿತಿಯೊಳಗೆ ಒತ್ತುವರಿದಾರರು ಸಕ್ರಮಕ್ಕೆ ಅರ್ಜಿ ಸಲ್ಲಿಸದಿದ್ದರೆ ಆ ಜಾಗವನ್ನು ತೆರವುಗೊಳಿಸಲು ಯಾವುದೇ ಅಡ್ಡಿಯಿಲ್ಲ.

ಆದರೆ ಕಾಲಮಿತಿಯೊಳಗೆ ಸಕ್ರಮಕ್ಕೆ ಅರ್ಜಿ ಸಲ್ಲಿಸಿದರೆ ಅದನ್ನು ಪರಿಶೀಲಿಸಿ ತಾಲೂಕು ಮಟ್ಟದ ಸಕ್ರಮೀಕರಣ ಸಮಿತಿ ಪರಿಶೀಲನೆಗೆ ಒಳಪಡಿಸಿ ಸಕ್ರಮಗೊಳಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಬೇಕು. ಹೀಗಾಗಿ, ಸಕ್ರಮಗೊಳಿಸಲು ಅವಕಾಶವಿಲ್ಲದಂತಹ ಪ್ರಕರಣವಿದ್ದರೂ 2019ರ ಮಾ. 16ರವರೆಗೆ ಒತ್ತುವರಿ ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next