ಹರಪನಹಳ್ಳಿ: ಪಟ್ಟಣದ ತಾ.ಪಂ ರಾಜೀವ ಗಾಂಧಿ ಸಭಾಂಗಣದಲ್ಲಿ ಬುಧವಾರ ಅಧ್ಯಕ್ಷೆ ಅನ್ನಪೂರ್ಣಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜಿ.ಪಂ ಸಿಇಒ ಮತ್ತು ಡಿಎಸ್ ಪರವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸದಸ್ಯರು ಒತ್ತಾಯಿಸಿದರು.
ಉಪಾಧ್ಯಕ್ಷ ಎಲ್.ಮಂಜ್ಯನಾಯ್ಕ ಮಾತನಾಡಿ, ಜಿ.ಪಂ ಅಧ್ಯಕ್ಷೆ ಕೆ.ಆರ್. ಜಯಶೀಲಾ ಅವರು ಭ್ರಷ್ಟಚಾರದ ಆರೋಪದಡಿ ಜಿ.ಪಂ ಸಿಇಒ-ಡಿಎಸ್ ವಿರುದ್ಧ ಎಸಿಬಿಗೆ ದೂರು ನೀಡಿದ್ದಾರೆ. ಆರೋಪಿ ಅಧಿಕಾರಿಗಳ ಒಲೈಕೆಗೆ ಸ್ಥಳೀಯ ಎಡಿ ಚಂದ್ರನಾಯ್ಕ, ಪಿಡಿಒ ಸಂಗಪ್ಪ ಅವರು ಜಿ.ಪಂ ಅಧ್ಯಕ್ಷರ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಪಿಡಿಒಗಳಿಗೆ ಮೇಸೆಜ್ ಹಾಕಿ ಒತ್ತಾಯಿಸಿದ್ದಾರೆ. ಜನರ ಕೆಲಸ ಮಾಡುವುದನ್ನು ಬಿಟ್ಟು ಪ್ರತಿಭಟನೆಯಲ್ಲಿ ಭಾಗವಹಿಸಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಕರ್ತವ್ಯಕ್ಕೆ ಹಾಜರಾಗದೇ ಇರುವುದರಿಂದ ಅವರ 3 ದಿನದ ಸಂಬಳ ಕಡಿತ ಮಾಡಿ ಅನಾಥಾಶ್ರಮಕ್ಕೆ ಕೊಡಬೇಕು. ಸಿಇಒ ಮತ್ತು ಡಿಎಸ್ ಕೂಡ ಸ್ಥಳೀಯವಾಗಿ ಕೆಲವರನ್ನು ಓಲೈಸಿ ಬೇಕಾಬಿಟ್ಟಿ ಕ್ರಮ ಜರುಗಿಸುತ್ತಿದ್ದಾರೆ. ಕೂಲಿ ಹಣ ಕೊಟ್ಟಿಲ್ಲವೆಂದು ಕೆಲವು ಪಿಡಿಒಗಳಿಗೆ ನೋಟಿಸ್ ಕೊಡುತ್ತಾರೆ. ಆದರೆ ಚಂದ್ರನಾಯ್ಕ ಕರ್ತವ್ಯ ನಿರ್ವಹಿಸುವ ಹಾರಕನಾಳು ಪಂಚಾಯ್ತಿಯಲ್ಲಿ ಒಂದು ವರ್ಷವಾದರೂ ಕೂಲಿ ಕೊಟ್ಟಿಲ್ಲ, ಅದರೂ ಪಿಡಿಒ ವಿರುದ್ಧ ಏಕೆ ಕ್ರಮ ಜರುಗಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಸದಸ್ಯ ಹುಲಿಕಟ್ಟಿ ಚಂದ್ರಪ್ಪ ಮಾತನಾಡಿ, ಜಿ.ಪಂ ವಿಷಯ ನಮಗೆ ಬೇಕಾಗಿಲ್ಲ ಎಂದರೆ, ನಮ್ಮ ತಟ್ಟೆಯಲ್ಲಿ ನೊಣ ಬಿದ್ದಿದೆ. ಅರಣ್ಯ ಇಲಾಖೆ ಅವ್ಯವಹಾರ ಬಗ್ಗೆ ತಾವೇಕೆ ಮೇಲಧಿಕಾರಿಗಳಿಗೆ ದೂರು ನೀಡಿಲ್ಲ ಎಂದು ಅಧ್ಯಕ್ಷರು, ಉಪಾಧ್ಯಕ್ಷರನ್ನು ಸದಸ್ಯ ಪ್ರಕಾಶ್ ಪ್ರಶ್ನಿಸಿದರು. ವಲಯ ಅರಣ್ಯ ಅಧಿಕಾರಿ ಶಂಕರನಾಯ್ಕ ಸಭೆಗೆ ಬರಬೇಕು. ಇಲ್ಲವೇ ಸಭೆ ರದ್ದುಗೊಳಿಸಿ ಎಂದು ಸದಸ್ಯರು ಒತ್ತಾಯಿಸಿದರು. ಅವರು ಮಧ್ಯಾಹ್ನ 2 ಗಂಟೆಗೆ ಸಭೆಗೆ ಆಗಮಿಸುವುದಾಗಿ ತಿಳಿಸಿದ ನಂತರ ಸಭೆ ಮುಂದುವರಿಸಲಾಯಿತು.
ಕುಡಿಯುವ ನೀರಿನ ಘಟಕದ ಎಇಇ ಜಯ್ಯಪ್ಪ ಅವರು, 4.28 ಕೋಟಿ ರೂ. ಕ್ರಿಯಾ ಯೋಜನೆಗೆ ಅನುಮೋದನೆ ಸಿಕ್ಕಿದೆ. ಶಾಸಕರ ಅನುದಾನ 50ಲಕ್ಷ ರೂ., ಜಿಲ್ಲಾಧಿಕಾರಿಗಳ 50 ಲಕ್ಷ ರೂ. ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆಗೆ ಕಳುಹಿಸಲಾಗಿದೆ ಎಂದರು. ಎಲ್ಲಿ ಎಲ್ಲಿ ನೀರಿನ ಸಮಸ್ಯೆ ಇದೆಯೋ ಅದನ್ನು ಪಟ್ಟಿ ಮಾಡಿಕೊಂಡು ಎಇಇ ಜೊತೆಗೆ ತೆರಳಿ ಬಗೆಹರಿಸಲಾಗುವುದು ಎಂದು ಇಒ ಮಮತಾ ಹೊಸಗೌಡರ್ ತಿಳಿಸಿದರು.
ತೆಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಗೆ ಚುಚ್ಚುಮದ್ದು ನೀಡಲು ಲಂಚ ಪಡೆದ ನರ್ಸ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸದಸ್ಯೆ ಸುಮಿತ್ರಾ ಒತ್ತಾಯಿಸಿದಾಗ ನರ್ಸ್‌ಗೆ ನೋಟಿಸ್ ನೀಡುವುದಾಗಿ ತಾಲೂಕು ವೈದ್ಯಾಧಿಕಾರಿ
ಮೆಣಸಿನಕಾಯಿ ಹೇಳಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ವೆಂಕಟೇಶರೆಡ್ಡಿ, ಯೋಜನಾಧಿಕಾರಿ ವಿಜಯಕುಮಾರ್ ಉಪಸ್ಥಿತರಿದ್ದರು.