ಚೆನ್ನೈ : ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ನಿಧನದಿಂದ ತೆರವಾಗಿರುವ ಆರ್ ಕೆ ನಗರ ಕ್ಷೇತ್ರದ ಉಪಚುನಾವಣೆಗಾಗಿ ಮತದಾರರಿಗೆ ಹಣ ಹಂಚುವ ಉದ್ದೇಶದ ಸುಮಾರು 24 ಲಕ್ಷ ರೂ.ನಗದನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆ.
ಚುನಾವಣಾ ವೀಕ್ಷಕ ಹಾಗೂ ವಿಶೇಷ ಅಧಿಕಾರಿಯಾಗಿರುವ ವಿಕ್ರಂ ಬಾತ್ರ ಅವರು ಈ ಬಗ್ಗೆ ಮುಚ್ಚಿದ ಬಾಗಿಲುಗಳ ಹಿಂದೆ ಸಭೆ ನಡೆಸಿದ್ದು ಎಲ್ಲ ರಾಜಕೀಯ ಪಕ್ಷಗಳು ಇತರ ಪಕ್ಷಗಳ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಮಾಡುತ್ತಿವೆ.
ವಿಕ್ರಂ ಬಾತ್ರಾ ಅವರಾಗಲೀ ಮುಖ್ಯ ಚುನಾವಣಾಧಿಕಾರಿ ರಾಜೇಶ್ ಲಖೋನಿ ಅವರಾಗಲೀ ಈ ಬಗ್ಗೆ ಪ್ರತಿಕ್ರಿಯೆಗಾಗಿ ಮಾಧ್ಯಮಕ್ಕೆ ಅಲಭ್ಯರಾಗಿದ್ದಾರೆ.
ಈ ನಡುವೆ ಡಿಎಂಕೆ ನಾಯಕ ಎಂ ಕೆ ಸ್ಟಾಲಿನ್ ಅವರು ನಿನ್ನೆ ಭಾನುವಾರ ವಿಕ್ರಂ ಬಾತ್ರಾ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಎಐಎಡಿಎಂಕೆ ಮತ್ತು ಕೆಲವು ಹಿರಿಯ ಸಚಿವರು ಸುಮಾರು 120 ಕೋಟಿ ರೂ.ಗಳನ್ನು ಮತದಾರರಿಗೆ ಹಂಚಿದ್ದಾರೆ ಎಂದು ಆರೋಪಿಸಿದ್ದಾರೆ.
ಟಿಟಿವಿ ಬೆಂಬಲಿಗ ಮಹಿಳೆಯೋರ್ವರ ಬಳಿ ಇದ್ದ 20 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದ್ದು ಆಕೆಯನ್ನು ರಿಮಾಂಡ್‌ಗೆ ಒಪ್ಪಿಸಲಾಗಿದೆ.