ನವದೆಹಲಿ: ದೇಶದಲ್ಲಿ ಕೊರೊನಾ ತೀವ್ರಗೊಳ್ಳಲು ಚುನಾವಣಾ ಆಯೋಗವೇ ನೇರಕಾರಣ, ಅದರ ಅಧಿಕಾರಿಗಳ ವಿರುದ್ಧ ಕೊಲೆ ಆರೋಪವನ್ನು ಹೊರಿಸಬೇಕಾದೀತು…. ಹೀಗೆಂದು ಮದ್ರಾಸ್ ಉಚ್ಚ ನ್ಯಾಯಾಲಯ ಇತ್ತೀಚೆಗೆ ಕಟುವಾಗಿ ಹೇಳಿತ್ತು. ಈ ಬಗ್ಗೆ ಮದ್ರಾಸ್ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲು ತೀರ್ಮಾನಿಸಲಾಗಿದ್ದ ಪ್ರಮಾಣಪತ್ರವೊಂದರಲ್ಲಿ; ಚುನಾವಣೆ ಆಯೋಗದ ಅಧ್ಯಕ್ಷ ರಾಜೀವ್ ಕುಮಾರ್ ಕಠಿಣ ಪ್ರತಿಕ್ರಿಯೆ ನೀಡಿದ್ದಾರೆ.
“ಬೇಕಾದರೆ ನಾನು ರಾಜೀನಾಮೆ ನೀಡುತ್ತೇನೆ ಅಥವಾ ಯಾವುದೇ ಶಿಕ್ಷೆ ಎದುರಿಸಲು ಸಿದ್ಧ’ ಎಂದು ಅದರಲ್ಲಿ ತಿಳಿಸಿದ್ದಾರೆ. ಆದರೆ ತಾಂತ್ರಿಕ ಕಾರಣಗಳ ಹಿನ್ನೆಲೆಯಲ್ಲಿ ಈ ಪ್ರಮಾಣಪತ್ರವನ್ನು ಸಲ್ಲಿಸಲಾಗಿಲ್ಲ.
ರಾಜೀವ್ ಹೇಳಿದ್ದೇನು?: ನಾವು ಕೊರೊನಾ ಹಿನ್ನೆಲೆಯಲ್ಲಿ ಕೆಲವು ಹಂತಗಳ ಚುನಾವಣೆಯನ್ನು ಮುಂದೂಡಲು ಬಯಸಿದ್ದೆವು. ಕಡೆಗೆ ಅದರ ವಿರುದ್ಧ ತೀರ್ಮಾನಿಸಿದೆವು. ಇದಕ್ಕೆ ಕಾರಣವಿಷ್ಟೇ: ಹೀಗೆ ಮಾಡಿದ್ದರೆ, ನಾವು ಒಂದು ಪಕ್ಷದ ಪರ, ಇನ್ನೊಂದು ಪಕ್ಷದ ವಿರುದ್ಧ ಕೆಲಸ ಮಾಡಿದ್ದೇವೆಂಬ ಆರೋಪಕ್ಕೆ ಒಳಗಾಗುತ್ತಿದ್ದೆವು.
ಇದನ್ನೂ ಓದಿ :ಜೇನುನೊಣಗಳೇ ಕೋವಿಡ್ ಪತ್ತೆ ಸಾಧನಗಳು! ಬಡರಾಷ್ಟ್ರಗಳಿಗೆ ಬಹಳ ಉಪಕಾರಿಯೆಂದ ಜೀವಶಾಸ್ತ್ರಜ್ಞರು
ಚುನಾವಣೆ ಆಯೋಗ ಪ್ರಜಾಪ್ರಭುತ್ವದ ಉಳಿವಿಗಾಗಿ ಯಾವಾಗಲೂ ಅನುಮಾನಮುಕ್ತವಾಗಿರಬೇಕಾಗುತ್ತದೆ. ಹಾಗಿಲ್ಲದೇ ಹೋದರೆ ತಲೆಗೊಬ್ಬರು ಬಾಯಿಗೆ ಬಂದಂತೆ ಮಾತನಾಡಲು ಅವಕಾಶ ನೀಡಿದಂತಾಗುತ್ತದೆ ಎಂದು ಪ್ರಮಾಣಪತ್ರದಲ್ಲಿ ರಾಜೀವ್ ಕುಮಾರ್ ಹೇಳಿದ್ದಾರೆ.