ಶೃಂಗೇರಿ: ಎಬಿವಿಪಿ ಕಾರ್ಯಕರ್ತ ಅಭಿಷೇಕ್ ಆತ್ಮಹತ್ಯೆ ಪ್ರಕರಣದಲ್ಲಿ ಈಗ ರಾಜಕಾರಣ ಶುರುವಾಗಿದೆ. ವಿದ್ಯಾರ್ಥಿ ಸಂಘಟನೆಗಳಾದ ಎಬಿವಿಪಿ ಹಾಗೂ ಎನ್‌ಎಸ್‌ಯುಐ ಕಾರ್ಯಕರ್ತರ ನಡುವಿನ ಜಗಳದಿಂದ ಆದ ಈ ಘಟನೆ ಬಳಿಕ ಕಾಂಗ್ರೆಸ್ ಹಾಗೂ ಬಿಜೆಪಿ ತಮ್ಮ ತಮ್ಮ ಕಾರ್ಯಕರ್ತರ ಬೆಂಬಲಕ್ಕೆ ನಿಂತಿವೆ.
ಅಭಿಷೇಕ್ ಆತ್ಮಹತ್ಯೆಯಲ್ಲಿ ತಮ್ಮ ಪಾತ್ರ ಇಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ದೇವರ ಎದುರು ಆಣೆ ಪ್ರಮಾಣ ಮಾಡಿದ್ದಾರೆ. ಇನ್ನೊಂದೆಡೆ ಎಬಿವಿಪಿ ಕಾರ್ಯಕರ್ತರು ಅಭಿಷೇಕ್ ಸಾವಿನ ತನಿಖೆಗೆ ಒತ್ತಾಯಿಸಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಗುರುವಾರ ಶ್ರದ್ಧಾಂಜಲಿ ಸಭೆ ನಡೆಸಿ ವಿದ್ಯಾರ್ಥಿ ಸಾವಿಗೆ ಸಂತಾಪ ಸೂಚಿಸಿದ್ದ ಬ್ಲಾಕ್ ಕಾಂಗ್ರೆಸ್ ಸಮಿತಿ ಶುಕ್ರವಾರ ಆಣೆ, ಪ್ರಮಾಣ ಮಾಡುವುದಾಗಿ ಹೇಳಿತ್ತು. ಅದರಂತೆ ಶೃಂಗೇರಿಯ ಶಿಡ್ಲೆ ಗಣಪತಿ ದೇವಸ್ಥಾನದಲ್ಲಿ ವಿದ್ಯಾರ್ಥಿ ಅಭಿಷೇಕ್ ಸಾವಿನಲ್ಲಿ ಕಾಂಗ್ರೆಸ್ ಪಾತ್ರವಿಲ್ಲ ಎಂದು ಕಾಂಗ್ರೆಸ್ ಮುಖಂಡರು ದೇವರ ಎದುರು ಪ್ರಮಾಣ ಮಾಡಿದರು. ಜತೆಗೆ ವಿದ್ಯಾರ್ಥಿ ಸಾವಿನ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕಪ್ಪು ಪಟ್ಟಿ ಧರಿಸಿ ಮೌನ ಮೆರವಣಿಗೆ ನಡೆಸಿದರು.
ಈ ವೇಳೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಅವರು, ಅಭಿಷೇಕ್ ಸಾವಿಗೆ ಕಾಂಗ್ರೆಸ್ ಕಾರಣವಲ್ಲ. ಆದರೆ ನಿಜ ಸಂಗತಿ ಆ ದೇವರಿಗೆ ಗೊತ್ತಿದ್ದು, ಇದಕ್ಕಾಗಿ ನಾವು ದೇವರ ಮೊರೆ ಹೋಗುವುದು ಅನಿವಾರ್ಯವಾಗಿದೆ. ಎಬಿವಿಪಿ ಹೆಸರಲ್ಲಿ ಬಿಜೆಪಿ ಕಾಲೇಜಿನಲ್ಲಿ ರಾಜಕಾರಣ ಮಾಡುತ್ತಿದೆ. ಪ್ರಕರಣವನ್ನು ಸಿಐಡಿ ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಿದರು.
ಎಬಿವಿಪಿ ಪ್ರತಿಭಟನೆ:
ಈ ನಡುವೆ ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕಾಂಗ್ರೆಸ್‌ನಿಂದ ವಿದ್ಯಾರ್ಥಿಗಳಿಗೆ ಆತ್ಮಹತ್ಯೆ ಭಾಗ್ಯ ಸಿಕ್ಕಂತಾಗಿದೆ. ಕೂಡಲೇ ಅಭಿಷೇಕ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮುಂದುವರಿದ ತನಿಖೆ:
ಇದೇ ವೇಳೆ ಅಭಿಷೇಕ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.