ವಿಜಯಪುರ: ಭವಿಷ್ಯದ ಸಶಕ್ತ ಭಾರತ ತರಗತಿ ಕೋಣೆಗಳಲ್ಲಿ ನಿರ್ಮಾಣವಾಗುತ್ತಿವೆ. ಇಂದಿನ ಮಕ್ಕಳೇ ಮುಂದಿನ ಸಮಾಜದ ರೂವಾರಿಗಳು ಎಂದು ಡಿಡಿಪಿಐ ಎನ್.ವಿ. ಹೊಸೂರ ಹೇಳಿದರು. ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಅಕ್ಷರ ದಾಸೋಹ ಇಲಾಖೆ ಹಾಗೂ ಪಿಡಿಜೆ “ಅ’ ಮಾಧ್ಯಮಿಕ ಶಾಲೆ ವಿಭಾಗದ ಆಶ್ರಯದಲ್ಲಿ ಜಿಲ್ಲಾಮಟ್ಟದ “ರಾಷ್ಟ್ರೀಯ ಪೋಷಣ್ ಅಭಿಯಾನ’ ಕಾರ್ಯಕ್ರಮಕ್ಕೆ ಸಸಿಗೆ ನೀರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಭವಿಷ್ಯ ಹಾಗೂ ಆರೋಗ್ಯದ ಹಿತರಕ್ಷಣೆ ದೃಷ್ಟಿಯಿಂದ ಕೇಂದ್ರ ಸರ್ಕಾರ ಮಗುವಿನ ದೈಹಿಕ ಮತ್ತು ಮಾನಸಿಕ ವಿಕಾಸಕ್ಕೆ ಅಕ್ಷರ ದಾಸೋಹದ ಯೋಜನೆ ಜಾರಿಗೊಳಿಸಿ ಬಲಿಷ್ಠ ಭಾರತದ ಕನಸು ನನಸುಗೊಳಿಸುತ್ತಿದೆ. ರಾಷ್ಟ್ರೀಯ-ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪದಕ ವಿಜೇತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಬೇಕಾದರೆ ಆರೋಗ್ಯಕ್ಕಾಗಿ ಆಹಾರ ಎಂಬ ಮೂಲಮಂತ್ರ ಮರೆಯಬಾರದು. ಜಂಕ್‌ಫುಡ್ ತ್ಯಜಿಸಿ ಶುಚಿಯಾದ ಆರೋಗ್ಯವರ್ಧನೆಗೆ ಪೂರಕ
ಆಹಾರ ಸೇವಿಸಬೇಕು ಎಂದರು.
ಮಗುವಿನ ಸರ್ವಾಂಗೀಣ ವಿಕಾಸಕ್ಕೆ ಸತ್ವಭರಿತ ಆಹಾರ ಬಹುಮುಖ್ಯ. ಸರ್ಕಾರದ ಅಕ್ಷರ ದಾಸೋಹದ ಈ ಮಹಾತ್ವಾಕಾಂಕ್ಷಿ ಯೋಜನೆಯ ಸಂಪೂರ್ಣ ಸದುಪಯೋಗ ಪಡೆಯಬೇಕೆಂದು ಅಕ್ಷರ ದಾಸೋಹ ಯೋಜನೆ ಶಿಕ್ಷಣಾಧಿ ಕಾರಿ ಎಸ್. ಎಸ್. ಮುಜಾವಾರ ಪ್ರಾಸ್ತಾವಿಕ ನುಡಿಗಳ ಮೂಲಕ ಮಕ್ಕಳಿಗೆ ತಿಳಿಸಿದರು.
ವಿಜ್ಞಾನ ಶಿಕ್ಷಕ ವಿ.ಆರ್. ಕಟ್ಟಿ ಮಾತನಾಡಿ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರಲ್ಲಿ ಜೀವಸತ್ವಗಳು, ಮಿನರಲ್ಸ್, ಕಾಬೊìಹೈಡ್ರೇಟ್ಸ್‌ಗಳ ಪಾತ್ರ ಮುಖ್ಯ. ನಮ್ಮ ಆಹಾರದಲ್ಲಿ ಸಮತೋಲನಕ್ಕೆ ಪ್ರಾಮುಖ್ಯ ನೀಡಬೇಕು ಎಂದರು. ಉಪ ಪ್ರಾಚಾರ್ಯ ಎಂ.ಎ. ಆಲೂರ ಅಧ್ಯಕ್ಷತೆ ವಹಿಸಿದ್ದರು. ಶಾಲೆ ಮಕ್ಕಳು ರಾಷ್ಟ್ರೀಯ ಪೋಷಣ್ ಅಭಿಯಾನಕ್ಕೆ ಪೂರಕವಾದ ರಂಗೋಲಿ, ವಸ್ತು ಪ್ರದರ್ಶನ, ರಸಪ್ರಶ್ನೆಯಲ್ಲಿ ಪಾಲ್ಗೊಂಡು ಪೌಷ್ಟಿಕ ಆಹಾರದ ಪ್ರಾಮುಖ್ಯತೆ ಅರಿತುಕೊಂಡರು. ಪಿ.ಡಿ. ಪೂಜಾರ, ಪಿ.ಕೆ. ಮಲಘಾಣ ಕಾರ್ಯಕ್ರಮ ನಿರೂಪಿಸಿದರು. ಬಿ.ಜಿ. ಮೆಡೆಗಾರ ವಂದಿಸಿದರು.