ಕಲಬುರಗಿ: ಆನೆಕಾಲು ರೋಗ ತಗುಲಿದ ನಂತರ ನಿಖರ ಚಿಕಿತ್ಸೆಗಳಿಲ್ಲ. ಆನೆಕಾಲು ರೋಗ ನಿರ್ಮೂಲನೆಗೆ ಮುಂಜಾಗೃತಾ ಕ್ರಮವಾಗಿ ಡಿ.ಇ.ಸಿ. ಮಾತ್ರೆಗಳನ್ನು ಸೇವಿಸಿ ಆನೆಕಾಲು ರೋಗದ ವೈರಾಣುಗಳು ಹರಡದಂತೆ ದೇಹದಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿಕಾಸ ಭವನದ ಎಲ್ಲ ಇಲಾಖೆಗಳ ಸಿಬ್ಬಂದಿಗೆ ಡಿ.ಇ.ಸಿ. ಸಾಮೂಹಿಕ ಔಷಧಿ ನುಂಗಿಸುವ ಕಾರ್ಯಕ್ರಮವನ್ನು ಡಿ.ಇ.ಸಿ. ಮಾತ್ರೆ ನುಂಗುವ ಮೂಲಕ ಪ್ರಾರಂಭಿಸಿ ಅವರು ಮಾತನಾಡಿದರು.
ಆನೆಕಾಲು ರೋಗವು ಕಲಬುರಗಿ, ಬೀದರ, ಯಾದಗಿರಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 7700 ಆನೆಕಾಲು ರೋಗ ಪ್ರಕರಣಗಳು ಪತ್ತೆಯಾಗಿವೆ. ಈ ರೋಗವನ್ನು ಜಿಲ್ಲೆಯಿಂದ ನಿರ್ಮೂಲನೆ ಮಾಡಲು ನಾಗರಿಕರು ಕಡ್ಡಾಯವಾಗಿ ಡಿ.ಇ.ಸಿ. ಮಾತ್ರೆಗಳನ್ನು ಸೇವಿಸಬೇಕು ಎಂದರು. ಆನೆಕಾಲು ರೋಗ ತಗುಲಿದ ನಂತರ ಸುಮಾರು 8 ವರ್ಷಗಳ ಕಾಲ ಯಾವುದೇ ನಿಖರವಾದ ಲಕ್ಷಣಗಳು ಕಂಡು ಬರುವುದಿಲ್ಲ. ರೋಗ ತಗುಲಿ ದೇಹದ ಕೈಕಾಲುಗಳಂತಹ ಅಂಗಾಂಗಗಳು ಊತುಕೊಳ್ಳಲು ಪ್ರಾರಂಭಿಸಿದಾಗ ಚಿಕಿತ್ಸೆ ಪಡೆದಲ್ಲಿ ಫಲಕಾರಿಯಾಗುವುದಿಲ್ಲ.
ಆನೆಕಾಲು ರೋಗಕ್ಕೆ ತುತ್ತಾದಲ್ಲಿ ಮರಣದವರೆಗೆ ಅದರೊಂದಿಗೆ ಜೀವಿಸಬೇಕಾಗುತ್ತದೆ ಎಂದರು.ಪ್ರೊಬೆಷನರಿ ಐ.ಎ.ಎಸ್. ಅಧಿಕಾರಿ ಲೋಖಂಡೆ ಸ್ನೇಹಲ್ ಸುಧಾಕರ, ಜಿಲ್ಲಾಧಿಕಾರಿ ಕಚೇರಿಯ ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಕೆ. ರಾಮೇಶ್ವರಪ್ಪ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.