ವಿಶೇಷ ವರದಿ
ಹಾವೇರಿ: ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಅನೇಕ ರೈತರು ತಾವು ಬೆಳೆದ ಬೆಳೆ ಮಾರಲಾಗದೇ ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ, ಇಲ್ಲೊಬ್ಬ ರೈತರು ಎರೆಹುಳು ಗೊಬ್ಬರ ತಯಾರಿಸಿ ತಿಂಗಳಿಗೆ 50 ಸಾವಿರ ರೂ.ಗೂ ಅಧಿಕ ಆದಾಯ ಗಳಿಸುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ರಾಣಿಬೆನ್ನೂರು ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಪ್ರಗತಿಪರ ರೈತ ವಿಶ್ವನಾಥ ಒಡೆಯರ್ ಎರೆಹುಳು ಗೊಬ್ಬರ ತಯಾರಿಸಿ ಅದನ್ನು ಮಾರಾಟ ಮಾಡಿ ಉತ್ತಮ ಆದಾಯದ ದಾರಿ ಕಂಡುಕೊಂಡಿದ್ದಾರೆ. ಪಿಯುಸಿ ಮುಗಿಸಿ ಕೃಷಿಯಲ್ಲೇ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನಿರ್ಧರಿಸಿದ ವಿಶ್ವನಾಥ ಎರೆಹುಳು ಗೊಬ್ಬರ ತಮ್ಮ ಕೃಷಿಗಾಗಿ ತಯಾರಿಸಿ ಈಗ ಅದನ್ನೇ ಆದಾಯದ ಮೂಲವನ್ನಾಗಿ ಮಾಡಿಕೊಂಡಿದ್ದಾರೆ.
ತೆರೆದ ವಿಧಾನದಲ್ಲಿ ಗೊಬ್ಬರ ತಯಾರಿ: ಸಿಮೆಂಟ್ ನೆಲದ ಮೇಲೆ ನೇರವಾಗಿ ತೆರೆದ ವಿಧಾನದಲ್ಲಿ ಎರೆ ಹುಳು ಗೊಬ್ಬರ ತಯಾರಿಸುತ್ತಿದ್ದು, ಉತ್ತಮ ಗೊಬ್ಬರ ಪಡೆಯುತ್ತಿದ್ದಾರೆ. ಈ ವಿಧಾನದಲ್ಲಿ ಗಾಳಿಯಾಡುವಿಕೆ ಉತ್ತಮವಾಗಿರುವುದರಿಂದ ಎರೆಹುಳುಗಳ ಚಟುವಟಿಕೆ ಇಮ್ಮಡಿಯಾಗಿ ಬೇಗನೆ ಗೊಬ್ಬರ ತಯಾರಾಗುತ್ತದೆ. ಸೆಗಣಿ ಗೊಬ್ಬರ ಕಚ್ಚಾವಸ್ತುವಾಗಿ ಇವರು ಬಳಸುತ್ತಾರೆ. ಇವರ ಎರೆಗೊಬ್ಬರ ತಯಾರಿಕೆ ಘಟಕವು 52 ಚದರ ಮೀ. ವಿಸ್ತೀರ್ಣ ಹೊಂದಿದೆ. ನೆರಳಿನ ಅನುಕೂಲಕ್ಕೆ ತೆಂಗಿನ ಗರಿಗಳಿಂದ ಮತ್ತು ಹಳೇ ತಗಡಿನಿಂದ ಮೇಲ್ಛಾವಣಿ ರಚಿಸಿದ್ದಾರೆ. ನೆಲವನ್ನು ಸಿಮೆಂಟ್‌ನಿಂದ ಮಾಡಿ ನೇರವಾಗಿ ನೆಲದ ಮೇಲೆ ಎರೆಗೊಬ್ಬರ ತಯಾರಿಸುತ್ತಾರೆ.
ಗೊಬ್ಬರಕ್ಕೆ ನೀರು ಒದಗಿಸಲು ಪೈಪ್ ಅಳವಡಿಸಿದ್ದಾರೆ. 75-90 ದಿನಗಳಲ್ಲಿ ಗೊಬ್ಬರ ತಯಾರು: ಸೆಗಣಿ ಗೊಬ್ಬರಕ್ಕೆ ತಕ್ಷಣ ಎರೆಹುಳು ಬಿಡುವುದಿಲ್ಲ. ಮೊದಲು ಸೆಗಣಿ ಗೊಬ್ಬರ ಸ್ವಲ್ಪ ದಿನ ಕೊಳೆಯಲು ಬಿಡುತ್ತಾರೆ. ಒಂದು ಪದರ ಮೆಕ್ಕೆಜೋಳದ ರವದಿ ಕೆಳಮುಖವಾಗಿ ಜೋಡಿಸುತ್ತಾರೆ. ಜೋಡಿಸಿದ ಮೆಕ್ಕೆಜೋಳ ರವದಿ ಮೇಲೆ ಸೆಗಣಿ ಗೊಬ್ಬರ ಪದರವಾಗಿ ಹಾಕಿ ಅದರ ಮೇಲೆ ನೀರು ಮತ್ತು ಸೆಗಣಿ ಸ್ಲರಿ ಹರಡುತ್ತಾರೆ. ನಂತರ ಪ್ರತಿ ಮಡಿಗೆ 2ರಿಂದ 3 ಕೆ.ಜಿಯಷ್ಟು ಎರೆಹುಳು ಬಿಡುತ್ತಾರೆ. ತಮಗೆ ಬೇಕಾದಾಗ ಎರೆಹುಳುಗಳನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ತರುತ್ತಾರೆ. ತೇವಾಂಶ ಕಾಪಾಡಲು ಪ್ರತಿ ದಿನ ಅಥವಾ ಎರಡು ದಿನಗಳಿಗೊಮ್ಮೆ ನೀರು ಹಾಕುತ್ತಾರೆ. ಎರೆಹುಳು ಬಿಟ್ಟ ದಿನದಿಂದ 75 ರಿಂದ 90 ದಿನಗಳಲ್ಲಿ ಗೊಬ್ಬರ ತಯಾರಾಗುತ್ತದೆ. ಉತ್ತಮ ಪೆಲಟ್‌ರೂಪದ ಗೊಬ್ಬರವನ್ನು ಚೀಲದಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡುತ್ತಾರೆ.
ಪ್ರತಿ ವರ್ಷ 4 ಲಕ್ಷ ಆದಾಯ: ಪ್ರತಿ ವರ್ಷಕ್ಕೆ ಸುಮಾರು 70 ಟನ್‌ಗಳಷ್ಟು ಎರೆಗೊಬ್ಬರ ಉತ್ಪಾದನೆ ಮಾಡುತ್ತಾರೆ. ಉತ್ಪಾದನೆಯಾದ ಅಷ್ಟೂ ಎರೆಗೊಬ್ಬರದ ಮಾರುಕಟ್ಟೆ ಸಮಸ್ಯೆ ಇಲ್ಲ ಎನ್ನುತ್ತಾರೆ ವಿಶ್ವನಾಥ. ಎರೆಗೊಬ್ಬರದ ಉತ್ತಮ ಗುಣಮಟ್ಟದ್ದಾಗಿರುವುದಿಂದ ಸ್ಥಳೀಯರೇ ಮನೆಗೆ ಬಂದು ಪ್ರತಿ ಕೆ.ಜಿಗೆ 6 ರೂ. ನಂತೆ ಖರೀದಿಸುತ್ತಾರೆ. ಇದರಿಂದ ಸುಮಾರು 4 ಲಕ್ಷ ಆದಾಯ ಬರುತ್ತಿದೆ. ಎರೆಗೊಬ್ಬರ ತಯಾರಿಕೆ ಕೃಷಿಯಲ್ಲಿ ಉಪ ಕಸುಬಾದರು ದೊಡ್ಡ ಪ್ರಮಾಣದಲ್ಲಿ ಮಾಡುವುದರಿಂದ ಕೈ ತುಂಬ ಹಣಗಳಿಸಬಹುದು. ಈ ಎರೆಹುಳು ಗೊಬ್ಬರ ಜಿಲ್ಲೆಯಲ್ಲಷ್ಟೇ ಅಲ್ಲದೇ ಸುತ್ತಮುತ್ತಲಿನ ಜಿಲ್ಲೆಗಳಾದ ಗದಗ, ದಾವಣಗೆರೆ ಹಾಗೂ ಶಿವಮೊಗ್ಗ ರೈತರು ಇವರ ಘಟಕಕ್ಕೆ ಭೇಟಿ ನೀಡಿ ಎರೆಹುಳು ಗೊಬ್ಬರ ಖರೀದಿಸುತ್ತಾರೆ ಎಂದು ವಿಶ್ವನಾಥ ಹೇಳುತ್ತಾರೆ.