ವಿಜಯಪುರ: ಜಿಲ್ಲೆಯಲ್ಲಿ ತಜ್ಞರ ಸಮಿತಿ ಮಸೂತಿ ಪರಿಸರದಲ್ಲಿ ಭೂಕಂಪನ ಅಧ್ಯಯನ ನಡೆಸಿರುವ ಹಂತದಲ್ಲಿಯೇ ತಿಕೋಟಾ ತಾಲೂಕಿನಲ್ಲಿ ಭಾರಿ ಸದ್ದಿನೊಂದಿಗೆ ಮತ್ತೆ ಭೂಕಂಪ ಮುಂದುವರೆದಿದೆ.
ಬುಧವಾರ ಬೆಳಿಗ್ಗೆ10-29 ಕ್ಕೆ ತಿಕೋಟಾ ತಾಲೂಕಿನ ಹಲವೆಡೆ ಭಾರಿ ಸದ್ದಿನೊಂದಿಗೆ ಭೂಕಂಪನ ಸಂಭವಿದೆ. ಭೂಮಿ ಕಂಪಿಸುತ್ತಲೇ ಜನರು ಮನೆಗಳಿಂದ ಹೊರಗೋಡಿ ಬಂದಿದ್ದಾರೆ. ಪದೇ ಪದೇ ಸಂಭವಿಸುತ್ತಿರುವ ಭೂಕಂಪನದಿಂದ ಆತಂಕಕ್ಕೀಡಾಗಿದ್ದಾರೆ.
ಸೋಮವಾರ ಸಂಜೆ 6.34 ಗಂಟೆಗೆ ತಾಲೂಕಿನ ಕಳ್ಳಕವಟಗಿ, ಘೋಣಸಗಿ, ಬಾಬಾನಗರ, ಬಿಜ್ಜರಗಿ, ಹುಬನೂರ, ಸಿದ್ದಾಪುರ ಕೆ. ಟಕ್ಕಳಕಿ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ ಗ್ರಾಮಗಳಲ್ಲಿ ಭೂಕಂಪನ ಆಗಿತ್ತು. ಇದರ ಬೆನ್ನಲ್ಲೇ ಬುಧವಾರ ಬೆಳಿಗ್ಗೆ 10-29 ಕ್ಕೆ ಹಿಂದೆಂದೂ ಕೇಳಿರದ ಭೂಮಿ ಅಂತರಾಳದ ಸದ್ದಿನ ಭೂಕಂಪನ ಸಂಭವಿಸಿದೆ.
ಈ ಸಮಯದಲ್ಲಿ ಭೂಮಿಯ ಆಳದಿಂದ ಜೋರಾದ ಶಬ್ದ ಕೇಳಿಬಂದಿದ್ದು, ಹಲವು ಸೆಕೆಂಡ್ ಕಂಪಿಸಿ ಭೂಮಿಯಲ್ಲಿ ಜೋರಾದ ಶಬ್ದ ಉಂಟಾಗಿ ಮನೆ ಮೇಲ್ಚಾವಣಿ ಮಣ್ಣು ಉದುರಿದೆ. ಮನೆಯಲ್ಲಿನ ಹಿರಿಯರು ಮಕ್ಕಳೊಂದಿಗೆ ಮನೆಯಿಂದ ಭಯಗೊಂಡು ಹೊರ ಓಡಿ ಬಂದಿದ್ದಾರೆ.
ಅಕ್ಟೋಬರ್ ತಿಂಗಳಲ್ಲೇ ಈಗಾಗಲೇ ನಾಲ್ಕೈದು ಬಾರಿ ಸಂಭವಿಸಿದ್ದರಲ್ಲಿ ಕೆಲವು ಭೂಕಂಪನದ ರಿಕ್ಟರ್ ಮಾಪಕದಲ್ಲೂ ದಾಖಲಾಗಿವೆ.
ಇಷ್ಟಾದರೂ ಯಾವ ಗಣಿ ಹಾಗೂ ಭೂ ವಿಜ್ಞಾನಿಗಳಾಗಲಿ, ಇತರೆ ಇಲಾಖೆಗಳ ಅಧಿಕಾರಿಗಳಾಗಲಿ ಗ್ರಾಮಗಳಿಗೆ ಭೇಟಿ ನೀಡಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದಾರೆ.