Advertisement
ಪ್ರೈಮರಿ, ಹೈಸ್ಕೂಲ್, ಪಿಯುಸಿ ಮಕ್ಕಳಿಗೆ ಅವರವರ ವಿಷಯದ ಕುರಿತು ಪಾಠ ಮಾಡುವುದು ಅಥವಾ ಟ್ಯೂಷನ್ ತೆಗೆದುಕೊಳ್ಳುವುದೇ ಟ್ಯುಟೋರಿಯಲ್‌ನ ವೈಶಿಷ್ಟ. ಮನೆಯಲ್ಲೇ ಇದಕ್ಕಾಗಿ ಒಂದು ಕೋಣೆಯನ್ನು ಮೀಸಲಿಟ್ಟು ಬೆಳಗ್ಗೆ ಅಥವಾ ಸಂಜೆ, ಅಥವಾ ಎರಡೂ ವೇಳೆಗಳಲ್ಲಿ ತರಗತಿಗಳನ್ನು ನಡೆಸಬಹುದು. ಒಬ್ಬ ವಿದ್ಯಾರ್ಥಿಗೆ ಮಾಸಿಕವಾಗಿ ಇಂತಿಷ್ಟು ಫೀಸ್ ಎಂದು ನಿಗದಿಪಡಿಸಿದರೆ ಮಾಸಿಕ ಆದಾಯಕ್ಕೆ ಕೊರತೆಯಿಲ್ಲ,
ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಸ್ವಲ್ಪ ಎಚ್ಚರಿಕೆ ವಹಿಸಿ. ನಿಮ್ಮ ಆಸಕ್ತಿಯ ವಿಷಯದಲ್ಲಿರುವ ವಿದ್ಯಾರ್ಥಿಗಳಾಗಿದ್ದರೆ ಉತ್ತಮ. ಉದಾಹರಣೆ ನೀವು ಎಂ. ಎಸ್ಸಿ ವಿದ್ಯಾರ್ಥಿಯಾಗಿದ್ದರೆ ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ದುಕೊಂಡ ವಿದ್ಯಾರ್ಥಿಗಳಿಗೆ ತರಗತಿ ನೀಡಿ. ಇದರಿಂದ ನಿಮಗೆ ವಿಷಯದಲ್ಲಿ ಗೊಂದಲ ಉಂಟಾಗುವ ಸಾಧ್ಯತೆ ಕಡಿಮೆಯಿರುತ್ತದೆ. ಸಣ್ಣ ಮಕ್ಕಳನ್ನೂ ತೆಗೆದುಕೊಳ್ಳಬಹುದು. ತರಗತಿಗಳನ್ನು ನಿಮ್ಮ ಹಾಗೂ ವಿದ್ಯಾರ್ಥಿಗಳ ಶಾಲಾ ಸಮಯವನ್ನು ನೋಡಿಕೊಂಡು ನಿರ್ಧರಿಸಿ. ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಅಥವಾ ಸಂಜೆ 5ರಿಂದ 7 ಗಂಟೆಯವರೆಗೆ ಎಂಬ ಸಮಯ ನಿಗದಿಪಡಿಸಿ. ರವಿವಾರ ಸ್ವಲ್ಪ ಹೆಚ್ಚು ಹೊತ್ತು ತರಗತಿ ನಡೆಸಬಹುದು.
ಕಾಲೇಜು ವಿದ್ಯಾಭ್ಯಾಸದ ನಡುವೆ ಹಾಗೂ ರಜಾ ಅವಧಿಗಳಲ್ಲಿ ವಿದ್ಯಾರ್ಥಿಗಳ ಸಂಪಾದನೆಯ ಮುಖ್ಯ ದಾರಿಯಾಗಿ ಟ್ಯುಟೋರಿಯಲ್ ಮಾಡಬಹುದು. ಕಲಿಕೆಯ ಆಸಕ್ತಿ ಅಧಿಕವಿದ್ದವರಿಗೆ ಈ ಕೆಲಸ ಹೆಚ್ಚು ಖುಷಿ ಕೊಡುತ್ತದೆ.
Related Articles
ಇತರ ಯಾವುದೇ ಉದ್ಯೋಗಗಳಿಗಿಂತ ಶಿಕ್ಷಣದ ನಡುವೆ ಟ್ಯುಟೋರಿಯಲ್ ನಡೆಸುವುದೇ ಉತ್ತಮ. ಯಾಕೆಂದರೆ ಕಲಿಕೆ ನಿರಂತರವಾಗಿರುತ್ತದೆ. ಇತರರಿಗೆ ಹೇಳಿ ಕೊಡುವಾಗ ನಮ್ಮ ಬುದ್ಧಿವಂತಿಕೆಯೂ ಅಧಿಕವಾಗುತ್ತದೆ. ವಿದ್ಯಾರ್ಥಿಗಳ ದೃಷ್ಟಿಯಲ್ಲಿ ನೀವೇ ಅಧ್ಯಾಪಕರಾದುದರಿಂದ ಅವರ ಸಂದೇಹಗಳನ್ನು ಪರಿಹರಿಸುವ ಜವಾಬ್ದಾರಿಯೂ ನಿಮ್ಮ ಮೇಲಿರುತ್ತದೆ. ಆದ್ದರಿಂದ ಹೆಚ್ಚು ಓದು ಅಗತ್ಯವಾಗುತ್ತದೆ.
Advertisement
– ಸುಶ್ಮಿತಾ ಶೆಟ್ಟಿ ಸಿರಿಬಾಗಿಲು