Advertisement

ಕಾಲೇಜಿನಲ್ಲಿ ಮೊದ ಮೊದಲು

10:19 PM May 09, 2019 | mahesh |

ಓರ್ವ ವ್ಯಕ್ತಿಯ ಬದುಕಿನಲ್ಲಿ ಹತ್ತನೆಯ ಇಯತ್ತೆಯೆಂದರೆ ಬಾಲ್ಯದ ಕೊಂಡಿ ಕಳಚಿಕೊಂಡು ಹದಿಹರೆಯಕ್ಕೆ ಕಾಲಿಡುತ್ತಿರುವ ಮಹತ್ವದ ಕಾಲಘಟ್ಟ. ಈ ಪರೀಕ್ಷೆ ಅಂತೂ ಇಂತೂ ಮುಗಿಸಿಕೊಂಡು ಕಾಲೇಜೆಂಬೋ ಕಾಲೇಜು ಸೇರಬೇಕಾದ ಸಂದರ್ಭದಲ್ಲಿ ಅನನ್ಯವೆನಿಸುವಂಥ ಉತ್ಸಾಹ-ಉಲ್ಲಾಸಗಳ ಜೊತೆಗೆ ಹೆಗಲೆಣೆಯಾಗಿ ಭಯಾಂತಕಗಳೂ ಮಿಳಿತವಾಗಿರುವುದು ಸುಳ್ಳಲ್ಲ. ನನ್ನ ಸ್ಥಿತಿಯೂ ಇದಕ್ಕೆ ಹೊರತೇನೂ ಆಗಿರಲಿಲ್ಲ. “ಅನುಭವಿ’ ಹಿರಿಯ ವಿದ್ಯಾರ್ಥಿಗಳು ನೀಡುವ ಅವರವರ ವೈಯಕ್ತಿಕ ಅಭಿಪ್ರಾಯಗಳು ನಮ್ಮ ದ್ವಂದ್ವ ಭಾವನೆಗಳಿಗೆ ನೀರೆರೆಯುವಂತಿದ್ದುವು.

Advertisement

ಈ ತನಕ ಇದ್ದುದು ಶಾಲೆ, ಟೀಚರ್‌-ಮೇಷ್ಟ್ರು ಎಂಬ ಪರಿಚಿತ ಪರಿಸರ. ಶಾಲೆಯಂತೂ ಬಾಲ್ಯದಿಂದಲೇ ತುಂಬಾ ಪರಿಚಿತ. ನಮ್ಮ ಮನೆಯ ಚಿತ್ರಣ ಕಣ್ಣಮುಂದೆ ತೇಲಿದಾಗ ಅದು ಅಲ್ಲಿಗೆ ಸಮೀಪವೇ ಇರುವ ಶಾಲೆಯ ಪರಿಸರದ ವಿವರಗಳನ್ನೂ ಅನಿವಾರ್ಯವೆಂಬಂತೆ ಒಳಗೊಂಡಿರುತ್ತದೆ. ಅಲ್ಲಿನ ಸಹಪಾಠಿಗಳೆಲ್ಲರೂ ಹೆಚ್ಚುಕಡಿಮೆ ನನ್ನ ಬಾಲ್ಯದ ಒಡನಾಡಿಗಳೇ. ಅದು ನಾವೆಲ್ಲ ಜೊತೆಯಾಗಿಯೇ ಕುಣಿದು, ಆಟವಾಡಿಕೊಂಡು ಬೆಳೆದ ಅನ್ಯೋನ್ಯತೆಯ ಒಟ್ಟಂದದ ಯಾವುದೇ ಬಿಗುವಿಲ್ಲದ ಸಡಿಲ ವಾತಾವರಣ. ಆದರೆ, ಇನ್ನು ಮುಂದಿನದನ್ನು ಗಮನಿಸಿ: ಶಾಲೆಯೆಂಬ ಬಾಲ್ಯದಂಗಳ ಕಾಲೇಜು ಎಂಬ ಮಾಯಾಲೋಕವಾಗಿ ಬಿಡುತ್ತದೆ, ಆತ್ಮೀಯ ಶಿಕ್ಷಕ ಉಪನ್ಯಾಸಕನಾಗಿ ಅಂತರ ಕಾಯ್ದುಕೊಳ್ಳುತ್ತಾನೆ, ಸಲುಗೆಯ ತವರು ನೆಲದ ಜಾಗವನ್ನು ಯಾವುದೋ ವಿಲಕ್ಷಣವೆನ್ನಿಸುವಂಥ ಕಾಲೇಜಿನ ಪರಿಸರ ಆಕ್ರಮಿಸಿಕೊಳ್ಳುತ್ತದೆ. ಆಪ್ತ ಸ್ನೇಹಿತವರ್ಗವಿದ್ದಲ್ಲಿ ಅಪ್ಪಟ ವಿದೇಶಿಯೆಂಬಂತಿರುವ ಅಪರಿಚಿತ ಗಡ‌ಣ ಬಂದು ಕು(ವ)ಕ್ಕರಿಸುತ್ತದೆ ಮತ್ತು ಇದಕ್ಕೆಲ್ಲ ಕಳಶವಿಟ್ಟಂತೆ ಮಾತೃಭಾಷೆಯಾದ ಕನ್ನಡದ ಸ್ಥಾನವನ್ನು ಇಂಗ್ಲಿಷೆಂಬ ಪರದೇಶಿ ಭಾಷೆ ಯಾವುದೇ ಮುಲಾಜಿಲ್ಲದೆ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತದೆ. ಎಂದರೆ ಭಾಷಾ ಮಾಧ್ಯಮವೂ ಬದಲಾಗುತ್ತದೆ. ಇವೆಲ್ಲ ನಮ್ಮಂಥ ಎಳೇ ಮನಸ್ಸುಗಳಲ್ಲಿ ಅಂಜಿಕೆ ಹುಟ್ಟಿಸಿದರೆ ಏನಾಶ್ಚರ್ಯ?

ಉಪನ್ಯಾಸಕರೆಂದರೆ ಬರೀ ಪಾಠದ ಸಾರಾಂಶವನ್ನು ಮೇಲಿಂದ ಮೇಲೆ ವಿವರಿಸಿಕೊಂಡು ಹೋಗುವವರು ಎಂಬಂಥ ಭಾವನೆ ನನ್ನಲ್ಲಿತ್ತು. ಕಾಲೇಜಿಗೆ ಹೋಗಲು ಶುರುಮಾಡಿದ ಆರಂಭದ ದಿನಗಳಲ್ಲಿ “ಅಯ್ಯೋ ದೇವರೇ, ಈ ಕಾಲೇಜೆಂಬುದನ್ನು ಯಾಕಾದರೂ ಮಾಡಿದೆಯೋ’ ಎಂದು ದೇವರನ್ನೂ ಶಪಿಸುತ್ತಿದ್ದುದಿತ್ತು! ನಾವೆಲ್ಲ ಅಷ್ಟು ಕಷ್ಟಪಟ್ಟು ಕಾಲೇಜಿಗೆ ಹೋಗುತ್ತಿದ್ದೆವು! ಬಹುಶಃ ಇದು ಪ್ರತಿಯೊಬ್ಬನ ಅನುಭವವಿರಬಹುದು.

ಆದರೆ, ಜೀವನವೆಂದರೆ ನಿಂತ ನೀರಲ್ಲ , ಮುಂದೊತ್ತುವಿಕೆ, ಬದಲಾವಣೆ ಅದರ ಗುಣಧರ್ಮ ಮಾತ್ರವಲ್ಲ, ಅದು ಜೀವಂತಿಕೆಯ ಲಕ್ಷಣವೂ ಹೌದು. ದಿನಗಳೆದಂತೆ ತುಸು ತುಸುವಾಗಿ ಅರಿವು ಕೊನರಿದಂತೆ, ಪ್ರಬುದ್ಧತೆ ಇಣುಕಿದಂತೆ ತಗೋ ಕಾಲೇಜು ಇಷ್ಟವಾಗತೊಡಗಿತು! ಪಾಠ-ಪ್ರವಚನಗಳಲ್ಲಿ ಸ್ವಾರಸ್ಯ ಕಾಣಲಾರಂಭಿಸಿತು. ಸದ್ಗುಣೀ ಸ್ನೇಹಿತ-ಸ್ನೇಹಿತೆಯರ ಒಳಗೆ ಹುಟ್ಟಿಕೊಂಡಿತು. ಉಪನ್ಯಾಸಕರೂ ಎಲ್ಲಾ ವಿಷಯಗಳಲ್ಲಿ ನಮ್ಮಲ್ಲಿ ಧೈರ್ಯ ತುಂಬಿ ನಮ್ಮನ್ನು ಪ್ರೋತ್ಸಾಹಿಸಿದರಲ್ಲದೆ ನಮ್ಮ ಸಾಧನೆಗಳಿಗೆ ಬೆನ್ನುತಟ್ಟಿದರು. ಕ್ರಮೇಣ, ಎಲ್ಲರೂ ಅಂದುಕೊಂಡಂತೆ ಇಂಗ್ಲಿಷ್‌ ಕಬ್ಬಿಣದ ಕಡಲೆಯೇನೂ ಅಲ್ಲ ಎಂಬುದು ಮನವರಿಕೆಯಾಯಿತು. ಹಾಗೆಯೇ ನಾನು ಆಟೋಟಗಳಲ್ಲೂ ಭಾಗಿಯಾಗಲಾರಂಭಿಸಿದಾಗ ಸಹಜವಾಗಿಯೇ ನನ್ನ ಸ್ನೇಹಿತರ ವರ್ತುಲವೂ ವಿಸ್ತಾರವಾಯಿತು. ಚಿಕ್ಕಂದಿನಿಂದ ಶಿಕ್ಷಕರಲ್ಲೇ “ಎಷ್ಟು ಬೇಕೋ ಅಷ್ಟು’ ಎಂಬಂತೆ ಮಾತನಾಡುತ್ತಿದ್ದ ನನಗೆ ಇಲ್ಲಂತೂ ಉಪನ್ಯಾಸಕರೆದುರು ಮಾತನಾಡುವುದಿರಲಿ, ತುಟಿ ಎರಡು ಮಾಡಲೂ ಅಳುಕಿತ್ತು. ಆದರೆ, ಅವರೆಲ್ಲ ನನ್ನನ್ನು ತಾವಾಗೇ ಆತ್ಮೀಯತೆಯಿಂದ ಕರೆದು ಮಾತನಾಡಿಸುತ್ತಾ ನನ್ನ ಅಕಾರಣ ಭಯವನ್ನು ತೊಡೆದುಹಾಕಿದರೆಂದರೆ ಅತಿಶಯೋಕ್ತಿಯಲ್ಲ. ಹೀಗೆ ಪ್ರಥಮ ಪಿಯುಸಿ ಕಳೆದುಹೋದುದೇ ಗೊತ್ತಾಗಲಿಲ್ಲವೆಂದರೆ ನಗುವಿರೇನೋ!

ಇನ್ನು ದ್ವಿತೀಯ ಪಿಯುಸಿಯ ವಿಷಯಕ್ಕೆ ಬಂದರೆ ಅದೇ ಒಂದು ವೃತ್ತಾಂತವಾದೀತು. ನಾವು ಪ್ರಥಮ ಪಿಯುಸಿಯಲ್ಲಿರುವಾಗಲೇ, ದ್ವಿತೀಯ ಪಿಯುಸಿಗೆ ಪಾಠ ಮಾಡುತ್ತಿದ್ದ ಉಪನ್ಯಾಸಕರ ಬಗ್ಗೆ ನಮ್ಮ ಹಿರಿಯ ವಿದ್ಯಾರ್ಥಿಗಳಲ್ಲಿ ಕುತೂಹಲದಿಂದ ಕೇಳುವುದು ನಮಗೆ ರೂಢಿಯಾಗಿತ್ತು. ಕೆಲವು ಉಪನ್ಯಾಸಕರು ಜೋರು, ಇನ್ನು ಕೆಲವರು “ಪಾಪ’ ಇತ್ಯಾದಿ ಉತ್ತರಗಳು ನಮಗೆ ಅವ‌ರಿಂದ ದೊರಕುತ್ತಿದ್ದುವು. ಆದರೆ, ಈಗ ಅನ್ನಿಸುವುದೇನೆಂದರೆ ನಾವು ವಯೋಸಹಜ ಕುತೂಹಲದಿಂದ ಆ ರೀತಿ ಕೇಳುತ್ತಿದ್ದರೂ ಒಂದು ವಿಧದಲ್ಲಿ ಆ “ವಿಚಾರಣೆ’ ತಾರ್ಕಿಕವಾಗಿ ತಪ್ಪು. ಯಾಕೆಂದರೆ, ನಮಗೆ ಸಿಗುತ್ತಿದ್ದುದೆಲ್ಲಾ ಅವರವರ ವೈಯಕ್ತಿಕ ಅಭಿಪ್ರಾಯಗಳು; ಇದರಿಂದ ಅನಗತ್ಯವಾಗಿ ಸಂಬಂಧಿತ ಉಪನ್ಯಾಸಕಿ/ಕಿಯರ ಮೇಲೆ ನಮ್ಮಲ್ಲೊಂದು ಪೂರ್ವಾಗ್ರಹ ರೂಪುಗೊಳ್ಳುತ್ತಿರುತ್ತದೆ. ನಾವೇ ಅವರಲ್ಲಿ ಮುಖತಃ ಮಾತನಾಡದೆ ಯಾ ಪರಸ್ಪರ ವರ್ತಿಸದೆ ಯಾರದೋ ಮಾತು ಕೇಳಿ ಒಂದು ನಿರ್ಣಯಕ್ಕೆ ಬರುವುದು ಶುದ್ಧಾಂಗ ತಪ್ಪು. ವಾಸ್ತವದಲ್ಲಿ ನಮಗಿದ್ದ ಉಪನ್ಯಾಸಕರು ಎಷ್ಟು ಮೃದುಮಾತು- ಮನಸ್ಸಿನವರೆಂದರೆ ಅವರು ತರಗತಿಗೆ ಬಂದಾಗ “ಇವರೇನೋ, ಎಂತೋ’ ಎಂದು ಹೆದರಿ ಮುದುಡಿದ್ದ ನನ್ನ ವದನಾರವಿಂದ ಅವರು ನಿರ್ಗಮಿಸಿದ ಮೇಲೆ ಖುಷಿಯಿಂದ ಹಿಗ್ಗಿ ಹೀರೇಕಾಯಿಯಾಗಿತ್ತು!

Advertisement

ನನ್ನ ಬದುಕಿನ ಒಂದು ಅವಿಸ್ಮರಣೀಯ ಭಾಗವಾದ ಈ ಕಾಲೇಜಿನಲ್ಲಿ ಕಳೆದ ದಿನಗಳನ್ನು ನನ್ನ ಮುಂಬರುವ ದಿನಗಳಿಗೆ ಸ್ಫೂರ್ತಿಯ ಸೆಲೆಯಾಗಿಸಿಕೊಂಡ ಹೆಮ್ಮೆಯಿಂದ ಮುನ್ನಡೆಯುತ್ತೇನೆ.

ಮಾಧವಿ ಭಟ್‌, ಹಳೆ ವಿದ್ಯಾರ್ಥಿನಿ ವಿಠಲ ಪದವಿಪೂರ್ವ ಕಾಲೇಜು, ವಿಟ್ಲ

Advertisement

Udayavani is now on Telegram. Click here to join our channel and stay updated with the latest news.

Next