ಮಧುಗಿರಿ: ರಾಜ್ಯದಲ್ಲಿ ಸುಮಾರು 56 ಲಕ್ಷಕ್ಕೂ ಅಧಿಕವಿರುವ ಆದಿಜಾಂಬವ ಜನಾಂಗದ ಪರವಾಗಿ ದನಿ ಎತ್ತುವರನ್ನು ಈ ಬಾರಿ ಚುನಾವಣೆಯಲ್ಲಿ ಆಯ್ಕೆ ಮಾಡಿ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜಾಧ್ಯಕ್ಷ ಪರಶುರಾಮ ಎನ್. ಮರೇಗುದ್ದಿ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಬೀದರ್ ಜಿಲ್ಲೆಯ ಔರಾದ್ ಮೀಸಲು ಕ್ಷೇತ್ರದಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನವರಗೆ ಮಾದಿಗ ಮೀಸಲಾತಿ ಹೋರಾಟ ಸಮಿತಿಯು ಹಮ್ಮಿಕೊಂಡಿರುವ ಮಾದಿಗರ ಮತಜಾಗೃತಿ ಅಭಿಯಾನ ಬೈಕ್ ರ್ಯಾಲಿಗೆ ಸ್ವಾಗತಿಸಿದ ಸಮುದಾಯದವರಿಗೆ ಕೃತಜ್ಞತೆ ಸಲ್ಲಿಸಿದರು.
ನ್ಯಾ.ಎ.ಜೆ.ಸದಾಶಿವ ಆಯೋಗದ ಜಾರಿಯಿಂದ ನಮ್ಮ ಜನಾಂಗಕ್ಕೆ ಸಾಮಾಜಿಕನ್ಯಾಯ ದೊರೆಯುತ್ತದೆ. ಆಯೋಗದ ವರದಿ ಜಾರಿಗಾಗಿ ನಮ್ಮನ್ನು ಬೆಂಬಲಿಸುವ ರಾಜಕಾರಣಿಗಳನ್ನು ಆಯ್ಕೆ ಮಾಡಬೇಕು ಎಂದರು.
ಸಮಿತಿಯ ಜಿಲ್ಲಾಧ್ಯಕ್ಷ ಸತ್ಯಪ್ಪ ಮಾತನಾಡಿ, ಕೇವಲ ನಮ್ಮ ಜನಾಂಗವನ್ನು ಓಟಿಗಾಗಿ ಬಳಸಿಕೊಳ್ಳುವ ರಾಜಕಾರಣಿಗಳನ್ನು ದೂರವಿಟ್ಟು ನಮಗೆ ಉತ್ತಮ ಸ್ಥಾನ-ಮಾನ ನೀಡಿ ಬದುಕಲು ಅವಕಾಶ ನೀಡುವವರನ್ನು ಈ ಬಾರಿ ಕೈ ಹಿಡಿಯೋಣ ಮತ್ತು ನಮ್ಮ ಪ್ರಾಣ ಇರುವವರೆಗೂ ನಮ್ಮ ಹಕ್ಕಿಗಾಗಿ ಹೋರಾಡೋಣ ಎಂದರು.
ಆಂದಿಜಾಂಬವ ಮಹಾಸಭಾ ತಾಲೂಕು ಅಧ್ಯಕ್ಷ ಮಹರಾಜು ಮಾತನಾಡಿ ನಮಗೂ ಎಲ್ಲರಂತೆ ಬದುಕಲು ಅವಕಾಶ ಕೊಡಿ ಎಂದರು. ದಸಂಸ ಮುಖಂಡ ದೊಡ್ಡೇರಿ ಕಣಿಮಯ್ಯ ಮಾತನಾಡಿ, ಕೇವಲ ಚುನಾವಣೆಗಳು ಬಂದಾಗ ಮಾತ್ರ ನಮ್ಮನ್ನು ರಾಜರಂತೆ ಕಂಡು ಅಧಿಕಾರ ಸಿಕ್ಕ ನಂತರ ನಮ್ಮನ್ನೇ ಒಡೆದು ಆಳುವ ನೀತಿ ಬಿಟ್ಟುಬಿಡಿ. ನಮ್ಮನ್ನು ಉದ್ದಾರ ಮಾಡುವ ವ್ಯಕ್ತಿಯನ್ನು ಅಧಿಕಾರಕ್ಕೆ ತರುವ ಬಗ್ಗೆ ಎಲ್ಲರೂ ಒಗ್ಗಟ್ಟಾಗಿ ಎಂದರು.
ಸಮಿತಿಯ ಪಾವಗಡ ತಾಲೂಕು ಅಧ್ಯಕ್ಷ ಕೃಷ್ಣಮೂರ್ತಿ, ಬಾಗಲಕೋಟೆಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹನುಮಂತ ಸೀಮೇಕೇರಿ, ರಾಜ್ಯ ಕಾರ್ಯದರ್ಶಿ ಸೋಮುಚೂರಿ, ತಾಲೂಕು ಮುಖಂಡ ಸಂಜೀವಯ್ಯ ಇನ್ನಿತರರು ಮಾತನಾಡಿದರು.
ತಾಲೂಕು ಸಮುದಾಯದ ಮುಖಂಡರಾದ ಪೋಸ್ಟ್ ಮರಿಯಣ್ಣ, ಅಖೀಲ್‌ಮಾದರ್, ಬಾಲಕೃಷ್ಣ, ರಂಗನಾಥ್, ಎಸ್.ಕೆ. ಅಶ್ವತ್ಥಪ್ಪ, ಕೃಷ್ಣಪ್ಪ, ಕಸಾಪುರ ರಮೇಶ್, ಮಂಜುನಾಥ, ನೀರಕಲ್ ನಾಗೇಶ್, ಶ್ರೀರಾಮ್,ಅಡವೀಶ್ ಇತರರು ಹಾಜರಿದ್ದರು.