Advertisement

ಹಿಂದಿನ ವಿಪ್‌ ಉಲ್ಲಂಘನೆಗಳೇ ಅತೃಪ್ತರಿಗೆ ಅಸ್ತ್ರ!

01:26 AM Feb 08, 2019 | |

ಬಳ್ಳಾರಿ: ವಿಪ್‌ ಜಾರಿಯಾದರೂ ಬಜೆಟ್ ಅಧಿವೇಶನಕ್ಕೆ ಹಾಜರಾಗದ ಅತೃಪ್ತ ಶಾಸಕರಿಗೆ ಈ ಹಿಂದೆ ವಿಪ್‌ ಉಲ್ಲಂಘಿಸಿದ ಶಾಸಕರ ವಿರುದ್ಧ ಮೈತ್ರಿ ಪಕ್ಷಗಳು ಯಾವುದೇ ಕ್ರಮ ಕೈಗೊಳ್ಳದಿರುವುದೇ ಬಹು ದೊಡ್ಡ ಅಸ್ತ್ರವಾಗಿ ಪರಿಣಮಿಸಿದೆ.

Advertisement

ಅಧಿವೇಶನಕ್ಕೆ ಗೈರಾಗುವ ಜತೆಗೆ ಕಾನೂನು ತಜ್ಞರೊಂದಿಗೂ ಚರ್ಚಿಸಿ ಮುಂದೆ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ಅತೃಪ್ತರು ಸಿದ್ಧತೆಯಲ್ಲಿ ತೊಡಗಿದ್ದಾರೆ. ವಿಧಾನ ಪರಿಷತ್‌, ರಾಜ್ಯಸಭೆ, ಸ್ಪೀಕರ್‌ ಆಯ್ಕೆಗೆ ನಡೆಯುವ ಚುನಾವಣೆ ಸೇರಿ ಪಕ್ಷದ ಶಾಸಕರು ಕೈಮೀರುತ್ತಿರುವ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ವಿಪ್‌ ಜಾರಿಗೊಳಿಸುವುದು ಸಾಮಾನ್ಯ. ಅದರಂತೆ ಮೈತ್ರಿ ಸರ್ಕಾರ ಮಂಡಿಸುತ್ತಿರುವ ಎರಡನೇ ಬಜೆಟ್ ಅಧಿವೇಶನಕ್ಕೆ ಎಲ್ಲ ಶಾಸಕರು ತಪ್ಪದೇ ಹಾಜರಾಗಬೇಕೆಂದು ಕಾಂಗ್ರೆಸ್‌-ಜೆಡಿಎಸ್‌ ವಿಪ್‌ ಜಾರಿಗೊಳಿಸಿವೆ. ಆದರೆ, ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳ 10 ಶಾಸಕರು ಬಜೆಟ್ ಅಧಿವೇಶನಕ್ಕೆ ಹಾಜರಾಗದೆ ಪಕ್ಷ ಜಾರಿಗೊಳಿಸಿರುವ ವಿಪ್‌ ಉಲ್ಲಂಘಿಸಿದ್ದಾರೆ.

ಶಾಸಕರಿಂದ ವಿಪ್‌ ಉಲ್ಲಂಘನೆ ಹೊಸದೇನಲ್ಲ. ಈ ಹಿಂದೆ ವಿಪ್‌ ಉಲ್ಲಂಘಿಸಿರುವ ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಬಗ್ಗೆ ಅತೃಪ್ತ ಶಾಸಕರು ಚರ್ಚಿಸುತ್ತಿದ್ದಾರೆ. ವಿಪ್‌ ಉಲ್ಲಂಘನೆ ಯಿಂದ ಮುಂದೆ ಎದುರಾಗುವ ಕಾನೂನು ಹೋರಾಟ ಎದುರಿಸಲು ಕಾನೂನು ತಜ್ಞರ ಸಲಹೆ ಪಡೆಯುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ಅಂದು ಸಿದ್ದು ಬೆಂಬಲಿಸಿದ್ದರು: ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ರಾಜ್ಯಸಭೆಗೆ ಚುನಾವಣೆ ನಡೆಯಿತು. ಕಾಂಗ್ರೆಸ್‌-ಜೆಡಿಎಸ್‌ ಎರಡೂ ಪಕ್ಷಗಳು ತಮ್ಮ ಶಾಸಕರಿಗೆ ವಿಪ್‌ ಜಾರಿಗೊಳಿಸಿತ್ತು. ಆದರೆ, ಅಂದು ಜೆಡಿಎಸ್‌ ಶಾಸಕರಾಗಿದ್ದ ಭೀಮಾನಾಯ್ಕ, ಜಮೀರ್‌ ಅಹ್ಮದ್‌, ಶ್ರೀನಿವಾಸ ಮೂರ್ತಿ ಸೇರಿ ಒಟ್ಟು 7 ಜನ ಶಾಸಕರು ಅಡ್ಡ ಮತದಾನ ಮಾಡುವ ಮೂಲಕ ವಿಪ್‌ ಉಲ್ಲಂಘಿಸಿದ್ದರು. ಆಗ ಮಾಜಿ ಸಿಎಂ ಸಿದ್ದರಾಮಯ್ಯನವರೇ ಬೆಂಬಲ ನೀಡಿದ್ದರು. ಜತೆಗೆ 2018ರ ವಿಧಾನಸಭೆ ಚುನಾವಣೆಯಲ್ಲಿ ಆ ಎಲ್ಲ 7 ಶಾಸಕರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡು ಪಕ್ಷದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದರು. ಈ ಪೈಕಿ ಮೂವರು ಶಾಸಕರಾಗಿ ಆಯ್ಕೆಯಾಗಿ, ನಾಲ್ವರು ಪರಾಭವ ಗೊಂಡಿದ್ದಾರೆ. ಅವರಿಗಿಲ್ಲದ ವಿಪ್‌ ಉಲ್ಲಂಘನೆಯ ನಿಯಮ, ನಮಗೆ ಹೇಗೆ ಅನ್ವಯಿಸುತ್ತದೆ ಎಂಬುದು ಅಧಿವೇಶನಕ್ಕೆ ಗೈರಾಗಿರುವ ಅತೃಪ್ತ ಶಾಸಕರ ವಾದ ಎನ್ನಲಾಗುತ್ತಿದೆ.

ಅಧಿವೇಶನಕ್ಕೆ ಹಾಜರಾಗದ ಶಾಸಕರನ್ನು ಬೆದರಿಸಲು ಪಕ್ಷಾಂತರ ನಿಷೇಧ ಕಾಯ್ದೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ. ಅವರು ಹೇಳಿದಂತೆ ಕೇಳಲು, ಪಕ್ಷದಿಂದ ಉಚ್ಚಾಟನೆ ಮಾಡಲು ನಾವು ಗ್ರಾಪಂ ಸದಸ್ಯರಲ್ಲ. ಅತೃಪ್ತರಾದರೂ ಅಧಿವೇಶನಕ್ಕೆ ಯಾವುದೇ ಕಾರಣಕ್ಕೂ ಬರಲ್ಲ. ಒಂದು ವೇಳೆ ಪಕ್ಷಾಂತರ ನಿಷೇಧ ಕಾಯ್ದೆ ಅಡ್ಡಿಯಾದರೆ, ಮುಂದಿನ ದಿನಗಳಲ್ಲಿ ಎದುರಾಗುವ ಎಲ್ಲ ಸಮಸ್ಯೆಗಳನ್ನು ಎದುರಿಸಲು ಕಾನೂನು ತಜ್ಞರನ್ನು ಸಂಪರ್ಕಿಸಿ ಹಲವು ಸಲಹೆ ಸೂಚನೆ ಪಡೆಯುತ್ತೇವೆ ಎನ್ನುತ್ತಾರೆ ಅತೃಪ್ತರು.

Advertisement

ವಿಪ್‌ ಉಲ್ಲಂಘಿಸಿ ಕಾನೂನು ಹೋರಾಟದಲ್ಲಿ ಗೆದ್ದಿದ್ದರು!

ಬಿಜೆಪಿ ಆಡಳಿತಾವಧಿಯಲ್ಲೂ ಗೂಳಿಹಟ್ಟಿ ಶೇಖರ್‌, ಬಾಲಚಂದ್ರ ಜಾರಕಿಹೊಳಿ ಸೇರಿ ಒಟ್ಟು 6 ಶಾಸಕರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಆದರೆ, ಆಗ ಇವರೆಲ್ಲರೂ ಸುಪ್ರೀಂಕೋರ್ಟ್‌ನಲ್ಲಿ ಪಕ್ಷ ಕೈಗೊಂಡಿರುವ ನಿಯಮದ ವಿರುದ್ಧ ಹೋರಾಡಿ ಜಯ ಗಳಿಸಿದ್ದರು. ಹಿಂದೆ ನಡೆದಿದ್ದ ಈ ಎಲ್ಲ ವಿಪ್‌ ಉಲ್ಲಂಘನೆ, ಉಚ್ಚಾಟನೆಗಳು ಅತೃಪ್ತ ಶಾಸಕರನ್ನು ಸದ್ಯ ಅಧಿವೇಶನಕ್ಕೆ ಹೋಗದಂಡೆ ತಡೆಯುತ್ತಿದ್ದು, ಈ ಎಲ್ಲ ಅಸ್ತ್ರಗಳನ್ನು ಬಳಸಿಕೊಂಡು ಮುಂದಿನ ದಿನಗಳಲ್ಲಿ ಪಕ್ಷದಿಂದ ಎದುರಾಗುವ ಕಾನೂನು ತೊಡಕುಗಳನ್ನು ಸಮರ್ಥವಾಗಿ ಎದುರಿಸಲಿದ್ದಾರೆಯೇ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next