ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ಅವರ ಅಭ್ಯರ್ಥಿ ತನವನ್ನು ಅನುಮೋದಿಸಿ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.
ಮಾಜಿ ಪ್ರಥಮ ಮಹಿಳೆ ಮಿಚೆಲ್ ಒಬಾಮಾ ಅವರೊಂದಿಗಿನ ಹೇಳಿಕೆಯಲ್ಲಿ ಒಬಾಮಾ ಅವರು “ಕಮಲಾ ಹ್ಯಾರಿಸ್ ಅವರನ್ನು ಯುನೈಟೆಡ್ ಸ್ಟೇಟ್ಸ್ ನ ಮುಂದಿನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ನಾವು ಎಲ್ಲವನ್ನೂ ಮಾಡುತ್ತೇವೆ” ಎಂದು ಹೇಳಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಒಬಾಮಾ ”ಈ ವಾರದ ಆರಂಭದಲ್ಲಿ, ಮಿಚೆಲ್ ಮತ್ತು ನಾನು ನಮ್ಮ ಸ್ನೇಹಿತೆಯಾದ ಕಮಲಾ ಹ್ಯಾರಿಸ್ ಅವರಿಗೆ ಕರೆ ಮಾಡಿದ್ದೆವು. ಅವರು ಯುನೈಟೆಡ್ ಸ್ಟೇಟ್ಸ್‌ನ ಅದ್ಭುತ ಅಧ್ಯಕ್ಷರಾಗುತ್ತಾರೆ ಎಂದು ನಾವು ಭಾವಿಸುತ್ತೇವೆ. ಅವರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಅವರಿಗೆ ಹೇಳಿದ್ದೇವೆ. ನಮ್ಮ ದೇಶಕ್ಕೆ ಈ ನಿರ್ಣಾಯಕ ಕ್ಷಣದಲ್ಲಿ, ನವೆಂಬರ್‌ನಲ್ಲಿ ಅವರು ಗೆಲ್ಲುವುದನ್ನು ಖಚಿತಪಡಿಸಿಕೊಳ್ಳಲು ನಾವು ಎಲ್ಲವನ್ನೂ ಮಾಡಲಿದ್ದೇವೆ. ನೀವು ನಮ್ಮೊಂದಿಗೆ ಸೇರುತ್ತೀರಿ ಎಂದು ನಾವು ಭಾವಿಸುತ್ತೇವೆ” ಎಂದು ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.
ಒಬಾಮಾ ಅವರು ಕಮಲಾ ಅವರ ಉಮೇದುವಾರಿಕೆಯನ್ನು ಅನುಮೋದಿಸುವಲ್ಲಿ ವಿಳಂಬ ಧೋರಣೆ ತೋರಿದ್ದ ಅತ್ಯಂತ ಪ್ರಮುಖ ಡೆಮೋಕ್ರಾಟ್ ಆಗಿದ್ದರು.