ದಾವಣಗೆರೆ: ದಾವಣಗೆರೆ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನೂತನ ಅಧ್ಯಕ್ಷರಾಗಿ ಬೆಳವನೂರು ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಬಿ.ಕೆ. ಈರಣ್ಣ , ಉಪಾಧ್ಯಕ್ಷರಾಗಿ ಅಣಜಿ ಕ್ಷೇತ್ರದ ಎಸ್.ಕೆ. ಚಂದ್ರಶೇಖರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮೊದಲನೇ 20 ತಿಂಗಳ ಅವಧಿಗೆ ಅಧ್ಯಕ್ಷರಾಗಿದ್ದ ಮುದೇಗೌಡ್ರು ಗಿರೀಶ್, ಉಪಾಧ್ಯಕ್ಷ ಎಂ.ಬಿ. ಹಾಲಪ್ಪ ಅಧಿಕಾರವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿ.ಕೆ.ಈರಣ್ಣ, ಉಪಾಧ್ಯಕ್ಷ ಸ್ಥಾನಕ್ಕೆ ಎಸ್.ಕೆ. ಚಂದ್ರಶೇಖರ್ ಇಬ್ಬರು ಮಾತ್ರ ಕಣದಲ್ಲಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ದಾವಣಗೆರೆ ತಹಶೀಲ್ದಾರ್ ಜಿ. ಸಂತೋಷ್‌ಕುಮಾರ್ ಘೋಷಿಸಿದರು.
ಒಟ್ಟು 16 ಸದಸ್ಯ ಬಲದ ಎಪಿಎಂಸಿಯಲ್ಲಿ ಕಾಂಗ್ರೆಸ್ ಬೆಂಬಲಿತ ಹತ್ತು, ಬಿಜೆಪಿ ನಾಲ್ವರು ಹಾಗೂ ಇಬ್ಬರು ನಾಮನಿರ್ದೇಶಿತ ನಿರ್ದೇಶಕರು ಇದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಬೆಳವನೂರು ಕ್ಷೇತ್ರದ ಬಿ.ಕೆ. ಈರಣ್ಣ ನಾಮಪತ್ರ ಸಲ್ಲಿಸಿದ್ದರು. ಕಕ್ಕರಗೊಳ್ಳ ಕ್ಷೇತ್ರದ ಕೆ.ಜಿ. ಶಾಂತರಾಜ್ ಸೂಚಕರಾಗಿದ್ದರು.
ಉಪಾಧ್ಯಕ್ಷ ಸ್ಥಾನಕ್ಕೆ ಅಣಜಿ ಕ್ಷೇತ್ರದ ಎಸ್. ಕೆ. ಚಂದ್ರಶೇಖರ್ ನಾಮಪತ್ರ ಸಲ್ಲಿಸಿದ್ದರು. ಮಾಜಿ ಅಧ್ಯಕ್ಷ ಮುದೇಗೌಡ್ರ ಗಿರೀಶ್ ಸೂಚಕರಾಗಿದ್ದರು. ನಿಗದಿತ ಅವಧಿಯಲ್ಲಿ ನಾಮಪತ್ರ ವಾಪಸ್ ಪಡೆಯದ ಕಾರಣ ಅವಿರೋಧವಾಗಿ ಆಯ್ಕೆಯಾದರು. ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಧಿ ಸೆ. 29 ರಿಂದ ಮುಂದಿನ 20 ತಿಂಗಳು ಇರಲಿದೆ.
ಮಾಜಿ ಉಪಾಧ್ಯಕ್ಷ ಎಂ.ಬಿ. ಹಾಲಪ್ಪ, ನಿರ್ದೇಶಕರಾದ ಶಾಮನೂರು ಕಲ್ಲೇಶಪ್ಪ, ದೊಗ್ಗಳ್ಳಿ ಬಸವರಾಜ, ಟಿ. ರಾಜಣ್ಣ, ಎಂ.ಕೆ. ರೇವಣಸಿದ್ದಪ್ಪ, ಕೆ.ಜಿ. ಶಾಂತರಾಜ್, ಕೆ.ಎಚ್. ರೇವಣಸಿದ್ದಪ್ಪ , ಕೆ.ಪಿ. ಮಲ್ಲಿಕಾರ್ಜುನ್, ಸುಧಾ ರುದ್ರೇಶ್, ಮಂಜುನಾಥ್ ಶ್ಯಾಗಲೆ, ಪಾಲಾಕ್ಷಮ್ಮ, ಸೇವ್ಯಾನಾಯ್ಕ, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಸ್.ಬಸವಂತಪ್ಪ, ಮಾಜಿ ಸದಸ್ಯಬೇತೂರು ಕರಿಬಸಪ್ಪ, ಡಾ| ಎಚ್ .ಬಿ. ಅರವಿಂದ್, ಎಪಿಎಂಸಿ ಕಾರ್ಯದರ್ಶಿ ಬಿ. ಆನಂದ್, ಸಹಾಯಕ ಕಾರ್ಯದರ್ಶಿ ಜಿ. ಪ್ರಭು, ರಾಜೇಶ್‌ಕುಮಾರ್, ಇತರರು ಇದ್ದರು.