ಕಾಂಬೋಡಿಯಾ : ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಉಕ್ರೇನ್ ನ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಅವರೊಂದಿಗೆ ಶನಿವಾರ ಸಭೆ ನಡೆಸಿದರು. ಉಭಯ ನಾಯಕರು ಪ್ರದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳು, ಪರಮಾಣು ಕಾಳಜಿಗಳು ಮತ್ತು ಉಕ್ರೇನ್ ಮೇಲಿನ ರಷ್ಯಾದ ಯುದ್ಧವನ್ನು ಕೊನೆಗೊಳಿಸುವ ಮಾರ್ಗಗಳ ಕುರಿತು ಚರ್ಚಿಸಿದರು.
ಕಾಂಬೋಡಿಯಾದ ರಾಜಧಾನಿಯಲ್ಲಿ ನಡೆದ ಆಸಿಯಾನ್-ಭಾರತ ಶೃಂಗಸಭೆಯ ಸಂದರ್ಭದಲ್ಲಿ ಜೈಶಂಕರ್ ಕುಲೇಬಾ ಅವರನ್ನು ಭೇಟಿಯಾದರು.
”ಉಕ್ರೇನ್‌ನ ಡಿಮಿಟ್ರೋ ಕುಲೆಬಾ ಅವರನ್ನು ಭೇಟಿಯಾಗಲು ಸಂತೋಷವಾಗಿದೆ. ನಮ್ಮ ಚರ್ಚೆಗಳು ಸಂಘರ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳು, ಉಪಕ್ರಮ ಮತ್ತು ಪರಮಾಣು ಕಾಳಜಿಗಳನ್ನು ಒಳಗೊಂಡಿವೆ” ಎಂದು ಎಸ್. ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ಜೈಶಂಕರ್ ಅವರು ಆಸಿಯಾನ್-ಇಂಡಿಯಾ ಶೃಂಗಸಭೆ ಮತ್ತು 17 ನೇ ಪೂರ್ವ ಏಷ್ಯಾ ಶೃಂಗಸಭೆಗೆ ಭಾರತೀಯ ನಿಯೋಗವನ್ನು ಮುನ್ನಡೆಸುತ್ತಿರುವ ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಅವರೊಂದಿಗೆ ಪ್ರವಾಸ ಕೈಗೊಂಡಿದ್ದಾರೆ.
ಡಿಮಿಟ್ರೋ ಕುಲೆಬಾ ಅವರು ಟ್ವೀಟ್ ಮಾಡಿ ದ್ವಿಪಕ್ಷೀಯ ಸಹಕಾರ ಮತ್ತು ಉಕ್ರೇನ್ ವಿರುದ್ಧ ರಷ್ಯಾದ ಯುದ್ಧವನ್ನು ಕೊನೆಗೊಳಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದ್ದೇವೆ ಎಂದು ಹೇಳಿದ್ದಾರೆ.
“ನನ್ನ ಭಾರತೀಯ ಸಹವರ್ತಿ ಎಸ್. ಜೈಶಂಕರ್ ಮತ್ತು ನಾನು ದ್ವಿಪಕ್ಷೀಯ ಸಹಕಾರ ಮತ್ತು ಉಕ್ರೇನ್ ಮೇಲಿನ ರಷ್ಯಾದ ಯುದ್ಧವನ್ನು ಕೊನೆಗೊಳಿಸುವ ಮಾರ್ಗಗಳ ಬಗ್ಗೆ ಚರ್ಚಿಸಲು ಭೇಟಿಯಾದೆವು. ರಷ್ಯಾ ತಕ್ಷಣವೇ ಮಾರಣಾಂತಿಕ ದಾಳಿಯನ್ನು ನಿಲ್ಲಿಸಬೇಕು, ಉಕ್ರೇನ್‌ನಿಂದ ಎಲ್ಲಾ ಪಡೆಗಳನ್ನು ಹಿಂತೆಗೆದುಕೊಳ್ಳಬೇಕು ಮತ್ತು ಶಾಂತಿಗೆ ಬದ್ಧವಾಗಿರಬೇಕು ಎಂದು ನಾನು ಒತ್ತಿಹೇಳಿದೆ. ನಾವು ಜಾಗತಿಕ ಆಹಾರ ಭದ್ರತೆಯತ್ತಲೂ ಗಮನ ಹರಿಸಿದ್ದೇವೆ ಎಂದು ಟ್ವೀಟ್ ನಲ್ಲಿ ಬರೆದಿದ್ದಾರೆ.
ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ಭಾರತ ಇನ್ನೂ ಖಂಡಿಸಿಲ್ಲ ಮತ್ತು ರಾಜತಾಂತ್ರಿಕತೆ ಮತ್ತು ಮಾತುಕತೆಯ ಮೂಲಕ ಬಿಕ್ಕಟ್ಟನ್ನು ಪರಿಹರಿಸಬೇಕು ಎಂದು ಹೇಳುತ್ತಲೇ ಬಂದಿದೆ.