Advertisement

“ಇ-ವೇ’ರಸೀದಿ ನಾಳೆಯಿಂದ ಕಡ್ಡಾಯ

06:05 AM Mar 31, 2018 | Team Udayavani |

ಬೆಂಗಳೂರು: ಜಿಎಸ್‌ಟಿ ಜಾರಿಯಿಂದಾಗಿ ರಾಜ್ಯಗಳ ಗಡಿಗಳ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ರದ್ದಾದ ನಂತರ ತೆರಿಗೆ ವಂಚನೆ ಹೆಚ್ಚಾಗಿ ಆದಾಯ ಸೋರಿಕೆ ಹಿನ್ನೆಲೆಯಲ್ಲಿ ಜಿಎಸ್‌ಟಿ ಕೌನ್ಸಿಲ್‌ ಅಂತಾರಾಜ್ಯ ಸರಕು ಸಾಗಣೆಗೆ “ಇ-ವೇ’ ರಸೀದಿ ಪಡೆಯುವುದನ್ನು ಕಡ್ಡಾಯಗೊಳಿಸಿದ್ದು, ಏ.1ರಿಂದ ಜಾರಿಯಾಗಲಿದೆ.

Advertisement

ರಾಜ್ಯದಲ್ಲಿ ಈಗಾಗಲೇ “ಇ-ವೇ’ ಬಿಲ್‌ ವ್ಯವಸ್ಥೆ ಜಾರಿಯಲ್ಲಿರುವುದರಿಂದ ಹೆಚ್ಚು ಪರಿಣಾಮ ಬೀರುವುದಿಲ್ಲ. ಆದರೆ, ಅನ್ಯ ರಾಜ್ಯದಿಂದ ಸರಕು ರಾಜ್ಯ ಪ್ರವೇಶಿಸಲು “ಇ-ವೇ’ ಬಿಲ್‌ ಪಡೆಯುವುದು ಕಡ್ಡಾಯ. ರಾಜ್ಯದ ಗಡಿಭಾಗದಲ್ಲಿ ಚೆಕ್‌ ಪೋಸ್ಟ್‌ನಲ್ಲಿ ತಪಾಸಣೆ ರದ್ದಾಗಿದ್ದರೂ ಸಂಚಾರಿ ಘಟಕಗಳ ತಪಾಸಣೆ ಮುಂದುವರಿಯಲಿದೆ.

ದೇಶಾದ್ಯಂತ ಏಕ ರೂಪದ ತೆರಿಗೆ ವ್ಯವಸ್ಥೆಯಂತೆ ಜು.1ರಿಂದ ಜಿಎಸ್‌ಟಿ ಜಾರಿಯಾದ ಬೆನ್ನಲ್ಲೇ ರಾಜ್ಯಗಳ ಗಡಿಭಾಗದ
ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ರದ್ದಾಯಿತು. ಜಿಎಸ್‌ಟಿ ಅನುಷ್ಠಾನದ ಆರಂಭದಲ್ಲಿ ದೇಶಾದ್ಯಂತ ತೆರಿಗೆ ಸಂಗ್ರಹ ಉತ್ತಮವಾಗಿಯೇ ಇದ್ದುದು,ಹೆಚ್ಚು ಆದಾಯ ಸಂಗ್ರಹದ ನಿರೀಕ್ಷೆ ಮೂಡಿಸಿತ್ತು.ಆದರೆ ಕ್ರಮೇಣ ಆದಾಯ ಇಳಿಕೆಯಾಗಿದ್ದರಿಂದ ಆತಂಕಗೊಂಡ ಜಿಎಸ್‌ಟಿ ಕೌನ್ಸಿಲ್‌ ಇದಕ್ಕೆ ಕಾರಣವಾದ ಅಂಶಗಳ ಪತ್ತೆಗೆ ಮುಂದಾಯಿತು.

ರಾಜ್ಯಗಳ ನಡುವೆ ಸಾಗಣೆಯಾಗುವ ಸರಕುಗಳನ್ನು ರಾಜ್ಯಗಳ ಗಡಿಭಾಗಗಳಲ್ಲಿ ಪರಿಶೀಲಿಸುವ ಚೆಕ್‌ಪೋಸ್ಟ್‌ ವ್ಯವಸ್ಥೆ
ರದ್ದಾಗಿರುವುದು ತೆರಿಗೆ ಆದಾಯ ಇಳಿಕೆಗೆ ಕಾರಣವಾದ ಅಂಶಗಳಲ್ಲಿ ಪ್ರಮುಖವಾದುದು ಎಂಬುದು ಬಯಲಾಯಿತು. ಒಂದು ರಾಜ್ಯದಿಂದ ಮತ್ತೂಂದು ರಾಜ್ಯಕ್ಕೆ ಸರಕು ಸಾಗಣೆ ವೇಳೆ ತೆರಿಗೆ ವಂಚಿಸುತ್ತಿದ್ದರಿಂದ ಆದಾಯ ಸೋರಿಕೆ ಕಂಡು ಬಂತು. ಆ ಹಿನ್ನೆಲೆಯಲ್ಲಿ ತೆರಿಗೆ ಸೋರಿಕೆ ತಡೆಗೆ “ಇ-ವೇ’ ಬಿಲ್‌ ವ್ಯವಸ್ಥೆ ಕಡ್ಡಾಯಗೊಳಿಸಲು ಜಿಎಸ್‌ಟಿ ಕೌನ್ಸಿಲ್‌ ಸಭೆ ನಿರ್ಧರಿಸಿತು.

ವಿಳಂಬ ಜಾರಿ: ದೇಶಾದ್ಯಂತ ಅಂತಾರಾಜ್ಯ ಸರಕು ಸಾಗಣೆಗೆ “ಇ-ವೇ’ ಬಿಲ್‌ ಕಡ್ಡಾಯ ವ್ಯವಸ್ಥೆಯನ್ನು ಫೆ.1ರಿಂದ ಜಾರಿಗೊಳಿಸಲು ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ ವಿವಿಧ ಕಾರಣಗಳಿಂದ ಫೆ.1ರಿಂದ ಜಾರಿಯಾಗಲಿಲ್ಲ. ಇದೀಗ ಏ.1ರಿಂದ ಕಡ್ಡಾಯ ಜಾರಿಗೆ ಜಿಎಸ್‌ಟಿ ಕೌನ್ಸಿಲ್‌ ತೀರ್ಮಾನಿಸಿದ್ದು,ಅದರಂತೆ ಭಾನುವಾರದಿಂದ ಜಾರಿಯಾಗಲಿದೆ.

Advertisement

“ಇ-ವೇ’ ರಸೀದಿ ಎಂದರೇನು?: ಒಂದು ಕಡೆಯಿಂದ ಮತ್ತೂಂದು ಕಡೆಗೆ ಸರಕು ಸಾಗಣೆಗೆ ದೃಢೀಕೃತ ಪತ್ರವೇ “ಇ-ವೇ’ ರಸೀದಿ. ಜಿಎಸ್‌ ಟಿಯಡಿ ದೇಶಾದ್ಯಂತ ಇದು ಹಂತ ಹಂತವಾಗಿ ಜಾರಿಯಾಗಲಿದೆ. 50,000 ರೂ.ಗಿಂತ ಹೆಚ್ಚು ಮೊತ್ತದ ಸರಕನ್ನು ಮೋಟಾರು ವಾಹನದಲ್ಲಿ ಒಂದು ಕಡೆಯಿಂದ ಮತ್ತೂಂದು ಕಡೆಗೆ ಸಾಗಿಸಲು “ಇ-ವೇ’ ರಸೀದಿ ಕಡ್ಡಾಯ. ಜೂ.1ರಿಂದ ರಾಜ್ಯದೊಳಗೂ ಸರಕು ಸಾಗಣೆಗೆ “ಇ-ವೇ’ ಬಿಲ್‌ ಕಡ್ಡಾಯವಾಗಲಿದೆ.

ರಾಜ್ಯದಲ್ಲಿ ಈ ಹಿಂದೆ “ವ್ಯಾಟ್‌’ ವ್ಯವಸ್ಥೆಯಿದ್ದಾಗಲೇ “ಇ-ಸುಗಮ’ ವ್ಯವಸ್ಥೆಯಿತ್ತು.ಹಾಗಾಗಿ ಜಿಎಸ್‌ಟಿ ಕೌನ್ಸಿಲ್‌ “ಇ-ಸುಗಮ’ಕ್ಕೆ ಬದಲಾಗಿ ಅದನ್ನೇ ಹೋಲುವ “ಇ-ವೇ’ ರಸೀದಿ ವ್ಯವಸ್ಥೆಯನ್ನು ಕರ್ನಾಟಕದಲ್ಲೇ ಪ್ರಾಯೋಗಿಕವಾಗಿ ಜಾರಿಗೊಳಿಸಲು ನಿರ್ಧರಿಸಿತು. ಅದರಂತೆ ಕಳೆದ ಸೆ.17ರಿಂದ ರಾಜ್ಯದಲ್ಲಿ ಜಾರಿಯಲ್ಲಿದೆ. ಆಹಾರ ಧಾನ್ಯ, ಸಂಸ್ಕರಿಸದ ಆಹಾರ ಪದಾರ್ಥ, ಬೇಳೆಕಾಳು,ಮೀನು, ಹಾಲು, ಹಾಲಿನ ಕೆಲ ಉತ್ಪನ್ನ ಸೇರಿ ತೆರಿಗೆ ವಿನಾಯ್ತಿಯಿರುವ 154 ಸರಕುಗಳಿಗೆ ರಾಜ್ಯದಲ್ಲಿ ವಿನಾಯ್ತಿ ಇದೆ. ರಾಜ್ಯದಲ್ಲಿ ನಿತ್ಯ ಸುಮಾರು 1.70 ಲಕ್ಷ “ಇ-ವೇ’ ಬಿಲ್‌ಗ‌ಳು ಸೃಷ್ಟಿಯಾಗುತ್ತಿವೆ.

ಯಾವುದಕ್ಕೆ ಕಡ್ಡಾಯ? ವಿನಾಯ್ತಿ?: ಒಟ್ಟು 50,000 ರೂ.ಗಿಂತ ಹೆಚ್ಚು ಮೌಲ್ಯದ ಸರಕನ್ನು ಒಂದು ರಾಜ್ಯದಿಂದ ಮತ್ತೂಂದು ರಾಜ್ಯಕ್ಕೆ ಸಾಗಿಸಲು “ಇ-ವೇ’ ಬಿಲ್‌ ಪಡೆಯುವುದು ಕಡ್ಡಾಯ. 50 ಕಿ.ಮೀ. ವ್ಯಾಪ್ತಿಯಲ್ಲಿ ಸರಕು
ಸಾಗಣೆಗೂ “ಇ-ವೇ’ ಬಿಲ್‌ ಕಡ್ಡಾಯವಾಗಿದ್ದರೂ ಸರಕು ಸಾಗಿಸುವ ವಾಹನದ ನೋಂದಣಿ ಸಂಖ್ಯೆ ನಮೂದಿಸುವುದು ಕಡ್ಡಾಯವಲ್ಲ. ಯಾವುದೇ ವಸ್ತುವನ್ನು ಮೋಟಾರು ವಾಹನದಲ್ಲಿ ಸಾಗಿಸದೆ ತಲೆ- ಹೆಗಲ ಮೇಲೆ ಹೊತ್ತು ಸಾಗುವುದು,
ಎತ್ತಿನಗಾಡಿ, ಕುದುರೆ ಬಂಡಿ, ತಳ್ಳುಗಾಡಿಯಲ್ಲಿ ಸಾಗಿಸಿದರೆ “ಇ-ವೇ’ ಬಿಲ್‌ ಅಗತ್ಯವಿಲ್ಲ.

ಏ.1ರಿಂದ ಅಂತಾರಾಜ್ಯ ಸರಕು ಸಾಗಣೆಗೆ “ಇ-ವೇ’ ಬಿಲ್‌ ಕಡ್ಡಾಯ. ರಾಜ್ಯದಿಂದ ಅನ್ಯರಾಜ್ಯಕ್ಕೆ ಸರಕು ಸಾಗಣೆಗೆ ಈಗಾಗಲೇ “ಇ-ವೇ’ ಬಿಲ್‌ ಪಡೆಯುವುದು ಕಡ್ಡಾಯ ಜಾರಿಯಲ್ಲಿದೆ. ಆದರೆ ಅನ್ಯರಾಜ್ಯದಿಂದ ರಾಜ್ಯಕ್ಕೆ ಸಾಗಣೆಯಾಗುವ ಸರಕುಗಳಿಗೆ ಏ.1ರಿಂದ ಇ-ವೇ ಬಿಲ್‌ ಕಡ್ಡಾಯ. ರಾಜ್ಯದ ಗಡಿಭಾಗಗಳಲ್ಲಿ ಚೆಕ್‌ಪೋಸ್ಟ್‌ ರದ್ದಾಗಿದ್ದು, ಇಲಾಖೆಯ ಸಂಚಾರಿ ಘಟಕಗಳ ತಪಾಸಣೆ ಮುಂದುವರಿಯಲಿದೆ.
–  ಎಂ.ಎಸ್‌.ಶ್ರೀಕರ, ರಾಜ್ಯ ವಾಣಿಜ್ಯ ತೆರಿಗೆ ಆಯುಕ್ತ

ಏ.1ರಿಂದ ಅಂತಾರಾಜ್ಯ ಸರಕು ಸಾಗಣೆಗೆ “ಇ-ವೇ’ ಬಿಲ್‌ ಕಡ್ಡಾಯವಾಗಲಿದ್ದು, ವಾಣಿಜ್ಯೋದ್ಯಮಿಗಳು, ಸರಕು- ಸಾಗಣೆದಾರರು ಸ್ಪಂದಿಸಿದರೆ ಅಡಚಣೆಯಿಲ್ಲದೆ ಸರಕು ಸಾಗಿಸಬಹುದಾಗಿದೆ. ಕ್ರಮೇಣ ಗ್ರಾಹಕರಿಗೂ ಬೆಲೆ ಇಳಿಕೆಯ ಲಾಭ ಸಿಗುವ ಸಾಧ್ಯತೆಯಿದೆ. ವಾಣಿಜ್ಯ ತೆರಿಗೆ ಇಲಾಖೆ ಕೇಂದ್ರ ಕಚೇರಿಯಲ್ಲಿ ಸಹಾಯಕೇಂದ್ರ (ಟೋಲ್‌ ಫ್ರೀ ಸಂಖ್ಯೆ 1800 425 6300) ಆರಂಭವಾಗಿದ್ದು, ಸರಕು ಸಾಗಣೆದಾರರು, ವಾಣಿಜ್ಯೋದ್ಯಮಿಗಳು ಅದರ ಸದುಪಯೋಗ ಪಡೆದುಕೊಳ್ಳಬಹುದು.
– ಬಿ.ಟಿ.ಮನೋಹರ್‌,
ರಾಜ್ಯ ಸರ್ಕಾರದ ಜಿಎಸ್‌ಟಿ ಸಲಹಾ ಸಮಿತಿ ಸದಸ್ಯ

– ಎಂ.ಕೀರ್ತಿ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next