Advertisement

ಸ್ಮಾರ್ಟ್ ನಗರಿಯಲ್ಲಿ ಇ- ವಾಹನಗಳಿಗೆ ಉತ್ತೇಜನ ಸಿಗಲಿ

01:06 PM Dec 09, 2018 | |

ಮಂಗಳೂರು ಸ್ಮಾರ್ಟ್‌ ನಗರವಾಗಿ ರೂಪುಗೊಳ್ಳುತ್ತಿದೆ. ಸ್ವಚ್ಛ, ಸ್ವಸ್ಥ, ಸುಂದರ ಮತ್ತು ಪರಿಸರ ಸ್ನೇಹಿ ನಗರ ಸ್ಮಾರ್ಟ್‌ ಸಿಟಿ ಪರಿಕಲ್ಪನೆಯ ಮುಖ್ಯ ಉದ್ದೇಶ. ವಾಯುಮಾಲಿನ್ಯ ನಿಯಂತ್ರಣ ಇದರಲ್ಲಿ ಪ್ರಮುಖವಾದದ್ದು. ಮಂಗಳೂರು ನಗರ ಬೆಳೆದಂತೆಲ್ಲ ವಾಯುಮಾಲಿನ್ಯ ಸಮಸ್ಯೆಯು ತೀವ್ರಗೊಳ್ಳುತ್ತಿದೆ. ಇದರಲ್ಲಿ ಹೆಚ್ಚುತ್ತಿರುವ ವಾಹನಗಳು ಗಣನೀಯ ಪಾಲು ಹೊಂದಿದೆ. ಇದರ ನಿಯಂತ್ರಣಕ್ಕೆ ಎಲೆಕ್ಟ್ರಿಕ್‌ ವಾಹನಗಳಿಗೆ ಉತ್ತೇಜನ ನೀಡುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಪೂರಕ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಬೇಕಾಗಿದೆ.

Advertisement

ಪ್ರಸ್ತುತ ಕಾಲಘಟ್ಟದಲ್ಲಿ ನಗರದಲ್ಲಿ ವಾಯು ಮಾಲಿನ್ಯ ಗಂಭೀರ ಸಮಸ್ಯೆಯಾಗಿ ಕಾಡುತ್ತಿದೆ. ಶುದ್ಧ ನೀರಿನಂತೆ ಶುದ್ಧಗಾಳಿ ಮಾರಾಟ ಮಳಿಗೆಗಳು ಆರಂಭಗೊಂಡಿರುವುದು ಸಮಸ್ಯೆಯ ತೀವ್ರತೆಯ ಚಿತ್ರಣವನ್ನು ತೆರೆದಿಟ್ಟಿವೆ. ಹೊಸದಿಲ್ಲಿ ಎದುರಿಸುತ್ತಿರುವ ವಾಯುಮಾಲಿನ್ಯ ಸಮಸ್ಯೆಯ ಭೀಕರತೆ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಸಮಸ್ಯೆಗಳು ಉಲ್ಬಣ ಸ್ಥಿತಿಗೆ ತಲುಪಿದ ಬಳಿಕ ಕಾರ್ಯೋನ್ಮುಖವಾಗುವ ಬದಲು ಪೂರ್ವದಲ್ಲೇ ಕಾರ್ಯಯೋಜನೆಗಳನ್ನು ಅಳವಡಿಸಿಕೊಂಡು ಅನುಷ್ಠಾನ ಪ್ರಕ್ರಿಯೆಗಳನ್ನು ಕೈಗೊಂಡರೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಈ ದಿಶೆಯಲ್ಲಿ ದೇಶದ ಕೆಲವು ನಗರಗಳು ಎಲೆಕ್ಟ್ರಿಕ್‌ ವಾಹನ ( ಇ-ವಾಹನ ) ವ್ಯವಸ್ಥೆಯತ್ತ ಹೊರಳುತ್ತಿವೆ. ಒಡಿಸ್ಸಾದ ಭುವನೇಶ್ವರ ನಗರ ಈಗಾಗಲೇ ಮಾದರಿ ಕಾರ್ಯಯೋಜನೆ ರೂಪಿಸಿ ಅನುಷ್ಠಾನಗೊಳಿಸುತ್ತಿದೆ.

ಮಂಗಳೂರು ನಗರದ ಸ್ಥಿತಿ
ಮಂಗಳೂರಿನಲ್ಲಿ ವಾಯುಮಾಲಿನ್ಯ ತೀವ್ರಗೊಳ್ಳು ತ್ತಿರುವ ಬಗ್ಗೆ ಸಾರಿಗೆ ಇಲಾಖೆ ಮತ್ತು ಆ್ಯಂಟಿ ಪೊಲ್ಯೂಶನ್‌ ಡ್ರೈವ್‌ ಎಂಬ ಖಾಸಗಿ ಸಂಸ್ಥೆ ನಡೆಸಿದ ಅಧ್ಯಯನ ಗಮನ ಸೆಳೆದಿದೆ. ಪ್ರಾಯೋಗಿಕವಾಗಿ ನಗರದಲ್ಲಿ 174 ಮಂದಿಯನ್ನು ತಪಾಸಣೆಗೊಳಪಡಿಸಿದಾಗ ಇದರಲ್ಲಿ 61 ಮಂದಿಯಲ್ಲಿ ವಾಯು ಮಾಲಿನ್ಯದಿಂದಾಗಿ ಶ್ವಾಸಕೋಶ ತೊಂದರೆಗಳು ಕಾಣಿಸಿಕೊಂಡಿತ್ತು. ಮಂಗಳೂರು ನಗರದಲ್ಲಿ ಗಾಳಿಯಲ್ಲಿ ಮಾಲಿನ್ಯಕಾರಿ ಕಣ (ಪಿಎಂ 10 ಲೆವೆಲ್‌) ಹೆಚ್ಚಾಗುತ್ತಿದ್ದು, 60 ರಿಂದ 61 ಎಂಜಿಕ್ಯುಎಂ ( ಮಿಲಿಗ್ರಾಂ ಫರ್‌ ಕ್ಯುಬಿಕ್‌ ಮೀಟರ್‌) ಇದೆ. ವಾಹನಗಳು ಹೊರಸೂಸುವ ಕಾರ್ಬನ್‌ ಡೈಆಕ್ಸೈಡ್‌ ಶೇ. 42ರಿಂದ 45 ಹಾಗೂ ಕಾಮಗಾರಿಯ ಧೂಳು, ತ್ಯಾಜ್ಯಕ್ಕೆ ಬೆಂಕಿ ಮುಂತಾದುವುಗಳು ಶೇ. 4- 5ರಷ್ಟಿದ್ದು ಇದು ಗಾಳಿಯಲ್ಲಿ ಪಿಎಂ 10 ಲೆವೆಲ್‌ ಏರಿಕೆಯಾಗಲು ಕಾರಣ ಎಂದು ವರದಿಯೊಂದು ಹೇಳಿದೆ.

ಮಂಗಳೂರು ಪ್ರಾದೇಶಿಕ ಕಚೇರಿ ವ್ಯಾಪ್ತಿ ಮಂಗಳೂರು ಹಾಗೂ ಬಂಟ್ವಾಳ ತಾಲೂಕು ಸೇರಿ 6.50 ಲಕ್ಷಕ್ಕೂ ಅಧಿಕ ವಾಹನಗಳು ನೋಂದಣಿಯಾಗಿವೆ. ಇದರಲ್ಲಿ ಸುಮಾರು 3.22 ಲಕ್ಷ ದ್ವಿಚಕ್ರ ವಾಹನಗಳು, 12,000 ಸಾರಿಗೆ ವಾಹನಗಳು ಒಳಗೊಂಡಿದೆ. ದಿನವೊಂದಕ್ಕೆ ಅಂದಾಜು 150 ದ್ವಿಚಕ್ರ ವಾಹನಗಳು, 30 ಲಘುವಾಹನಗಳು ನೋಂದಣಿಯಾಗುತ್ತಿವೆ.

ತತ್‌ಕ್ಷಣದಿಂದಲೇ ಕಾರ್ಯಯೋಜನೆ ಅನಿವಾರ್ಯ
ದೇಶದಲ್ಲಿ ಕಾನ್ಪುರ, ಫರೀದಾಬಾದ್‌, ವಾರಣಾಸಿ, ಗಯಾ, ಪಟ್ನಾ, ದಿಲ್ಲಿ, ಲಕ್ನೋ ಈಗಾಗಲೇ ವಾಯುಮಾಲಿನ್ಯ ಸಮಸ್ಯೆಯಿಂದ ಹೊರಬಾರಲಾರದಷ್ಟು ದೂರ ಸಾಗಿವೆ. ಮಂಗಳೂರು ನಗರ ಕೂಡ ಇದರ ಸಾಲಿಗೆ ಸೇರ್ಪಡೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ತತ್‌ಕ್ಷಣದಿಂದಲೇ ಕಾರ್ಯಯೋಜನೆಗಳನ್ನು ಹಾಕಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಮಂಗಳೂರಿನಲ್ಲಿ ಅನುಷ್ಠಾನಗೊಳ್ಳುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಇದಕ್ಕೆ ಅವಕಾಶವಿದೆ. ಬೆಂಗಳೂರು ನಗರದಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ನೀಡುತ್ತಿರುವ ಪ್ರೋತ್ಸಾಹಕ ಕ್ರಮಗಳಂತೆ ಮಂಗಳೂರು ನಗರಕ್ಕೆ ನೀಡುವ ಅವಶ್ಯವಿದೆ.

Advertisement

ಭುವನೇಶ್ವರ ನಗರದ ಯೋಜನೆ
ಭುವನೇಶ್ವರ ನಗರವನ್ನು ಪರಿಸರ ಸ್ನೇಹಿ ನಗರವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್‌ ವಾಹನ ಉತ್ತೇಜನ ಯೋಜನೆ ಹಮ್ಮಿಕೊಂಡಿದೆ. ಇದಕ್ಕಾಗಿ ಇಂಟರ್‌ನ್ಯಾಶನಲ್‌ ಫೈನಾನ್ಸ್‌ ಕಾರ್ಪೊರೇಶನ್‌ ( ಐಎಫ್‌ಸಿ) ಸಹಯೋಗವನ್ನು ಪಡೆದುಕೊಂಡು ಕಾರ್ಯಯೋಜನೆಗಳನ್ನು ರೂಪಿಸಿದೆ. ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಭುವನೇಶ್ವರ ನಗರದ ಒಟ್ಟು ಸಾರ್ವಜನಿಕ ಸಂಚಾರ ವ್ಯವಸ್ಥೆಯಲ್ಲಿ 2021ರ ವೇಳೆಗೆ ಶೇ. 20ರಷ್ಟು ವಾಹನಗಳನ್ನು ಇ- ವಾಹನ ವ್ಯವಸ್ಥೆಗೆ ಬದಲಾಯಿಸುವ ಯೋಜನೆ ಹೊಂದಲಾಗಿದೆ. ಇದಕ್ಕಾಗಿ 219.75 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದ್ದು , ಇದರಲ್ಲಿ 208 ಕೋಟಿ ರೂ. ಇ- ವಾಹನಕ್ಕೆ ಹಾಗೂ 11.13 ಕೋ. ರೂ. ಚಾರ್ಚಿಂಗ್‌ ಮೂಲ ಸೌಕರ್ಯ ಅಳವಡಿಕೆಗೆ ಮೀಸಲಿರಿಸಲಾಗಿದೆ. 10.5 ಕೋಟಿ ರೂ. ಭುವನೇಶ್ವರ ಸ್ಮಾರ್ಟ್‌ ಸಿಟಿ ಲಿಮಿಟೆಡ್‌, 93.12 ಕೋ.ರೂ. ರಾಜ್ಯ ಸರಕಾರ ಹಾಗೂ 116.13 ಕೋ. ರೂ. ಡಿಎಚ್‌ಐಯಿಂದ ನಿರೀಕ್ಷಿಸಲಾಗಿದೆ. ಪ್ರಥಮ ಹಂತದಲ್ಲಿ ನಗರದ 32 ಕಿ.ಮೀ. ವ್ಯಾಪ್ತಿಯೊಳಗಿನ ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನು ಇ- ವಾಹನಕ್ಕೆ ಪರಿವರ್ತಿಸುವ ಗುರಿ ಇರಿಸಿಕೊಳ್ಳಲಾಗಿದೆ. ಎಲೆಕ್ಟ್ರಿಕ್‌ ಬಸ್‌, ಎಲೆಕ್ಟ್ರಿಕ್‌ ರಿಕ್ಷಾ , ಎಲೆಕ್ಟ್ರಿಕ್‌ ಬೈಕ್‌, ಎಲೆಕ್ಟ್ರಿಕ್‌ ಕಾರು ಮುಂತಾದುವುಗಳು ಇ- ವಾಹನ ಪರಿವರ್ತನೆ ಯೋಜನೆಯಲ್ಲಿ ಸೇರಿವೆ.

ಕರ್ನಾಟಕ ಸರಕಾರದ ಎಲೆಕ್ಟ್ರಿಕ್‌ ವಾಹನ ನೀತಿ
ಕರ್ನಾಟಕದಲ್ಲಿ ರಾಜ್ಯದಲ್ಲೂ ಎಲೆಕ್ಟ್ರಿಕ್‌ ವಾಹನ ನೀತಿ ಅನುಷ್ಠಾದಲ್ಲಿದೆ. ರಾಜ್ಯದಲ್ಲಿ ಪರಿಸರ ಸ್ನೇಹಿ ಸಂಚಾರ ವ್ಯವಸ್ಥೆಯನ್ನು ಉತ್ತೇಜಿಸುವ, ಎಲೆಕ್ಟ್ರಿಕಲ್‌ ವಾಹನಗಳ ಉತ್ಪಾದನೆಗೆ ಪ್ರೋತ್ಸಾಹ ಹಾಗೂ ಸಾರ್ವಜನಿಕ ಸಾರಿಗೆಗಳಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಆದ್ಯತೆ ನೀಡುವುದು ಮತ್ತು ಬೆಂಗಳೂರು ನಗರವನ್ನು ಎಲೆಕ್ಟ್ರಿಕ್‌ ವಾಹನಗಳ ರಾಜಧಾನಿಯಾಗಿ ಮಾಡುವ ಉದ್ದೇಶ ಕರ್ನಾಟಕ ಸರಕಾರ ಎಲೆಕ್ಟ್ರಿಕ್‌ ವಾಹನ ನೀತಿ ಹೊಂದಿದೆ. ಈಗಾಗಲೇ ಬೆಂಗಳೂರು ನಗರದಲ್ಲಿ ಎಲೆಕ್ಟ್ರಿಕಲ್‌ವಾಹನಗಳ ಬಳಕೆಗೆ ರಾಜ್ಯ ಸರಕಾರದಿಂದ ಉತ್ತೇಜನಕಾರಿ ಯೋಜನೆಗಳು ಜಾರಿಯಲ್ಲಿವೆ. ಈ ಒಂದಷ್ಟು ಎಲೆಕ್ಟ್ರಿಕ್‌ ವಾಹನಗಳು ಬೆಂಗಳೂರು ನಗರದಲ್ಲಿ ಓಡಾಡುತ್ತಿವೆ. ಸರಕಾರಿ ಇಲಾಖೆಗಳ ವಾಹನಗಳನ್ನು ಎಲೆಕ್ಟ್ರಿಕ್‌ ವಾಹನಗಳಾಗಿ ಪರಿವರ್ತಿಸುವ ಪ್ರಕ್ರಿಯೆಗಳು ಆರಂಭಗೊಂಡಿವೆ.

ಆರಂಭದಲ್ಲಿ ಬೆಂಗಳೂರು ನಗರವನ್ನು ಹೆಚ್ಚು ಕೇಂದ್ರೀಕರಿಸಲಾಗಿದೆ.ಇಂಧನದಿಂದ ಎಲೆಕ್ಟ್ರಿಕ್‌ ವಾಹನಕ್ಕೆ ಹೋಗುವ ಖಾಸಗಿ ವಾಹನಗಳಿಗೆ ಉತ್ತೇಜನ, ಪ್ರಸ್ತುತ ಇರುವ ಆಟೋರಿಕ್ಷಾಗಳು ಎಲೆಕ್ಟ್ರಿಕ್‌ ವಿಭಾಗಕ್ಕೆ ಪರಿವರ್ತನೆಗೆ ಪ್ರೋತ್ಸಾಹ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯೂ ಕೆಎಸ್‌ ಆರ್‌ಟಿಸಿ , ಎನ್‌ಇಕೆಆರ್‌ಟಿಸಿ ವಿಭಾಗಗಳಲ್ಲಿ ಎಲೆಕ್ಟ್ರಿಕ್‌ ಸಾರಿಗೆ ಬಸ್‌ಗಳನ್ನು ಹಾಕುವುದು, ರಿಚಾರ್ಚ್‌ ಕೇಂದ್ರಗಳ ಸ್ಥಾಪನೆಗೆ ಪ್ರೋತ್ಸಾಹ ನೀಡುವುದು ಮುಂತಾದ ಹಲವು ಕ್ರಮಗಳು ಎಲೆಕ್ಟ್ರಿಕ್‌ ವಾಹನ ನೀತಿ ಹೊಂದಿದೆ.

ಎಲೆಕ್ಟ್ರಿಕ್‌ ವಾಹನಗಳ ರಿಚಾರ್ಚ್‌ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪೆಟ್ರೋಲ್‌ ಬಂಕ್‌ಗಳ ಮಾದರಿಯಲ್ಲಿ ವ್ಯಾಪಕವಾಗಿ ರಿಚಾರ್ಚ್‌ ಸೌಲಭ್ಯಗಳು ಲಭ್ಯವಾಗುವ ನಿಟ್ಟಿನಲ್ಲಿ ಬೆಂಗಳೂರು ನಗರದಲ್ಲಿ ಸುಮಾರು 300 ಸ್ಥಳಗಳನ್ನು ಗುರುತಿಸಲಾಗಿದೆ. ಭಾರತ ಸರಕಾರ ಕೂಡ ನೀತಿ ಆಯೋಗದಲ್ಲಿ ಇ- ವಾಹನಗಳನ್ನು ಉತೇಜಿಸುವ ನಿಟ್ಟಿನಲ್ಲಿ ಪ್ರೋತ್ಸಾಹಕ ಕ್ರಮಗಳನ್ನು ರೂಪಿಸಿದೆ.

ಮಂಗಳೂರು ನಗರ ಕೂಡ ಭವಿಷ್ಯದಲ್ಲಿ ಎಲೆಕ್ಟ್ರಿಕಲ್‌ ವಾಹನಗಳ ನಗರವಾಗಿ ಮೂಡಿಬರುವಲ್ಲಿ ಪೂರಕ ಯೋಜನೆಗಳು ರೂಪುಗೊಂಡರೆ ವಾಯುಮಾಲಿನ್ಯ ಸಮಸ್ಯೆಗೆ ಒಂದಷ್ಟು ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ವಾಹನಗಳು ಇಂದು ಜನರ ಬದುಕಿನ ಅವಿಭಾಜ್ಯ ಭಾಗವಾಗಿದೆ. ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ಇದರಿಂದಾಗುವ ಪರಿಸರ ಮಾಲಿನ್ಯಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ. ನಗರದೊಳಗೆ ವಾಹನಗಳಿಂದಾಗುವ ವಾಯುಮಾಲಿನ್ಯ ತಡೆಯಲು ಎಲೆಕ್ಟ್ರಿಕ್‌ ವಾಹನಗಳ ಬಳಕೆ ಪರಿಹಾರಗಳಲ್ಲೊಂದಾಗಿ ಪರಿಗಣಿಸಲಾಗುತ್ತಿದೆ. 

ಮಾಲಿನ್ಯ ಮುಕ್ತ ಶುದ್ಧ ಗಾಳಿ ಇಲ್ಲಿ ಲಭ್ಯ !
ಮಾಲಿನ್ಯ ಮುಕ್ತ ಗಾಳಿ ಇಲ್ಲಿ ದೊರೆಯುತ್ತದೆ ! ಇದು ಅಚ್ಚರಿಯಲ್ಲ . ಹೊಸದಿಲ್ಲಿ ಸಹಿತ ದೇಶದ ಕೆಲವು ನಗರಗಳಲ್ಲಿ ಮಳಿಗೆಗಳಲ್ಲಿ ಈ ರೀತಿಯ ಫಲಕಗಳು ನೇತಾಡುತ್ತಿವೆ . ಶುದ್ಧ ನೀರಿನ ಬಾಟಲ್‌ ಗಳಂತೆ ಶುದ್ಧ ಗಾಳಿಯನ್ನು ಕೂಡ ಮಾರಾಟ ಮಾಡಲಾಗುತ್ತಿದೆ ಎಂದು ವರದಿಯೊಂದು ಹೇಳಿದೆ. ಮುಂದೊಂದು ದಿನ ಮಂಗಳೂರು ನಗರದಲ್ಲಿಯೂ ಇಂತಹ ಫಲಕಗಳು ಕಂಡುಬಂದರೆ ಅಚ್ಚರಿ ಪಡಬೇಕಾಗಿಲ್ಲ. 3 ಲೀ ಶುದ್ಧಗಾಳಿಗೆ 1,500 ರೂ. ವರೆಗೆ ದರ ವಿಧಿಸಲಾಗುತ್ತಿದೆ. ಈಗ ಇದರಲ್ಲೂ ಸ್ಪರ್ಧೆ ಆರಂಭವಾಗಿ ದರ 650 ರೂ.ಗೆ ಇಳಿದಿದೆ. ಸಾಮಾನ್ಯವಾಗಿ ಓರ್ವ ಮನುಷ್ಯನಿಗೆ ಉಸಿರಾಡಲು 7 ರಿಂದ 8 ಲೀ. ಹಾಗೂ ದಿನವೊಂದಕ್ಕೆ 11,000 ಲೀ. ಗಾಳಿ ಬೇಕು ಎಂದು ವರದಿ ತಿಳಿಸಿದೆ. 

ನಗರ ಸಾರಿಗೆಗೆ ಪೂರಕ
ಎಲೆಕ್ಟ್ರಿಕ್‌ ವಾಹನಗಳನ್ನು ನಗರದೊಳಗಿನ ಸಾರ್ವಜನಿಕ ಸಂಚಾರ ವ್ಯವಸ್ಥೆಗಳು ಅಂದರೆ ಸಿಟಿ ಬಸ್‌ಗಳು, ಆಟೋ ರಿಕ್ಷಾಗಳು, ಟ್ಯಾಕ್ಸಿಗಳ, ಸ್ಕೂಲ್‌ ಬಸ್‌ಗಳು, ಸರಕಾರಿ ಇಲಾಖೆಗಳ ವಾಹನಗಳಿಗೆ ಅಳವಡಿಕೆ ಮಾಡಲು ಸಾಧ್ಯವಿದೆ. ಎಲೆಕ್ಟ್ರಿಕ್‌ ಕಾರು ನಿರಂತರ 1 ಗಂಟೆ 20 ನಿಮಿಷ ಚಾರ್ಚ್‌ ಮಾಡಿದರೆ 125 ಕಿ.ಮೀ. ಸಂಚರಿಸಲು ಸಾಧ್ಯವಿದೆ. ಮನೆಯಲ್ಲೂ ಚಾರ್ಚ್‌ ಮಾಡಲು ಅವಕಾಶವಿದೆ. ಮನೆಯಲ್ಲಿ ಚಾರ್ಚ್‌ ಮಾಡಿದರೆ ಪ್ರತಿ ಯೂನಿಟಿಗೆ 6 ರಿಂದ 7 ರೂ. ಭರಿಸಬೇಕಾಗುತ್ತದೆ.ಕೇಂದ್ರಗಳಲ್ಲಿ ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಚಾರ್ಚ್‌ ಮಾಡಿಕೊಂಡರೆ ಪ್ರತಿ ಯೂನಿಟಿಗೆ 4.85 ರೂ. ಹಾಗೂ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಚಾರ್ಚ್‌ ಮಾಡಿಕೊಂಡರೆ 3.85 ರೂ. ವೆಚ್ಚ ತಗಲುತ್ತದೆ ಎಂದು ವಿವರಿಸಲಾಗಿದೆ.

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next