Advertisement

ಪಾಲಿಕೆ ಅಧಿಕಾರಿಗಳೇ ಇತ್ತ ಚಿತ್ತ ಹರಿಸಿ!: ತ್ಯಾಜ್ಯವಾಗುತ್ತಿರುವ ಇ- ಟಾಯ್ಲೆಟ್‌ಗಳಿಗೆ ಬೇಕಿದೆ ಕಾಯಕಲ್ಪ

11:11 PM Jan 01, 2023 | Team Udayavani |

ಮಹಾನಗರ: ನಗರದ ಬಸ್‌ ಹಾಗೂ ರೈಲು ನಿಲ್ದಾಣ, ಪಾರ್ಕ್‌ ಸೇರಿದಂತೆ ಜನನಿಬಿಡ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಿರ್ಮಾಣವಾದ ಇ- ಟಾಯ್ಲೆಟ್‌ಗಳು ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ. ಲಾಲ್‌ಬಾಗ್‌, ಕಂಕನಾಡಿ (ಎಕ್ಕೂರು ಕೆಎಚ್‌ಬಿ ಕಾಲನಿ ಬಳಿ), ಮಂಗಳೂರು ಕೇಂದ್ರ ರೈಲ್ವೇ ನಿಲ್ದಾಣ ಸೇರಿ ಪ್ರಮುಖ ಜಂಕ್ಷನ್‌ಗಳಲ್ಲಿ ಪಾಲಿಕೆಯ 14ನೇ ಹಣಕಾಸು ಯೋಜನೆಯಡಿ ತಲಾ 7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಇದಲ್ಲದೆ ಇದಕ್ಕೂ ಮೊದಲು ಖಾಸಗಿ ಸಹಭಾಗಿತ್ವದಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ನಿರ್ಮಾಣವಾಗಿದ್ದ ಅತ್ಯಾಧುನಿಕ ವ್ಯವಸ್ಥೆಯ ಇ- ಟಾಯ್ಲೆಟ್‌ಗಳಿಗೆ ನಿರ್ವಹಣೆ ಇಲ್ಲದಂತಾಗಿದೆ.

Advertisement

ಸೆನ್ಸಾರ್‌ ಹಾಳಾಗಿದೆ
2 ರೂಪಾಯಿ ಕಾಯಿನ್‌ ಹಾಕಿ ಉಪಯೋಗಿಸಬೇಕಾದ ಇ ಟಾಯ್ಲೆಟ್‌ಗಳಲ್ಲಿ ಲಾಲ್‌ಬಾಗ್‌ನಲ್ಲಿರುವ ಎರಡು ಶೌಚಾಲಯಗಳು ಬಾಗಿಲು ತೆರೆಯಲು ಸಾಧ್ಯವಾಗದ ಸ್ಥಿತಿಯಲ್ಲಿವೆ. ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕವಾಗಿರುವ ಇ ಟಾಯ್ಲೆಟ್‌ಗಳ ಸೆನ್ಸಾರ್‌ ಹಾಳಾಗಿದೆ. ಟಾಯ್ಲೆಟ್‌ ಒಳಗೆ ಜನ ಇದ್ದಾಗ ಬೆಳಗಬೇಕಾದ ಕೆಂಪು ದೀಪ, ಖಾಲಿಯಾಗಿದ್ದಾಗ ಹಸಿರು ದೀಪಗಳು ಉರಿಯುತ್ತಿಲ್ಲ. ಈ ಶೌಚಾಲಯಗಳು ಆರಂಭದಲ್ಲಿ ಕೆಲವು ಸಮಯ ಬಳಕೆಯಾಗಿದ್ದು, ಬಳಿಕ ಉಪಯೋಗಕ್ಕೆ ಸಾಧ್ಯವಿಲ್ಲದಂತಾಗಿವೆ.

ಮಿನಿ ವಿಧಾನ ಸೌಧ ಹಾಗೂ ಮಂಗಳೂರಿನ ಕೇಂದ್ರ ರೈಲ್ವೇ ನಿಲ್ದಾಣದ ರಸ್ತೆಯಲ್ಲಿರುವ ಶೌಚಾಲಯದ ಸುತ್ತಮುತ್ತ ಕಸದ ರಾಶಿ ತುಂಬಿದೆ. ಶೌಚಾಲಯದ ಬಳಿಗೆ ಹೋಗದ ಪರಿಸ್ಥಿತಿ ಇದೆ.

ಬಾಗಿಲು ತೆರೆಯುವುದಿಲ್ಲ
ಎಕ್ಕೂರಿನಲ್ಲಿ (ಕಂಕನಾಡಿ) ಇರುವ ಎರಡು ಶೌಚಾಲಯಗಳು ಸಾರ್ವಜನಿಕರಿಂದ ಬಳಕೆಯಾಗಿದ್ದೇ ಇಲ್ಲ. ಎಕ್ಕೂರಿನ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ ಕಾಲನಿ) ವಠಾರದೊಳಗಿನ ಇ ಟಾಯ್ಲೆಟ್‌ ಕಾಯಿನ್‌ ಹಾಕಿದರೂ ಬಾಗಿಲು ತೆರೆಯುವುದಿಲ್ಲ. ಉದ್ಘಾಟನೆಗೊಂಡ ಅನಂತರ ಕೆಲ ದಿನಗಳ ಬಳಿಕವೇ ಪಾಳು ಬಿದ್ದಿವೆ. ಇದು ಕೋಸ್ಟ್‌ಗಾರ್ಡ್‌ ವಸತಿ ನಿಲಯ ಹಾಗೂ ಮನೆಗಳಿರುವ ಪ್ರದೇಶವಾದ್ದರಿಂದ ಇಲ್ಲಿ ಇ- ಟಾಯ್ಲೆಟ್‌ನ ಅಗತ್ಯವೇ ಇಲ್ಲ. ಎಕ್ಕೂರಿನ ಕೆಎಚ್‌ಬಿ ಕಾಲನಿಯಿಂದ ಸುಮಾರು 300 ಮೀಟರ್‌ ವ್ಯಾಪ್ತಿಯಲ್ಲಿರುವ ಮಹಾನಗರ ಪಾಲಿಕೆಯ ಮೈದಾನದ ಮೇಲ್ಭಾಗದಲ್ಲಿ ರಸ್ತೆಗೆ ತಾಗಿ ಇರುವ ಇ- ಟಾಯ್ಲೆಟ್‌ ಕೂಡ ಬಳಕೆಯಾಗಿಲ್ಲ. ನಿರ್ವಹಣೆಯೂ ಇಲ್ಲದೆ ಪಾಳು ಬಿದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next