Advertisement

ಉದ್ಯಮಶೀಲತೆ ಬೆಳೆಸಲು ಇ-ಸ್ಟೆಪ್‌ ಆರಂಭ

11:07 AM Sep 06, 2019 | Team Udayavani |

ಬೆಳಗಾವಿ: ಕರ್ನಾಟಕ ಸರ್ಕಾರದ ಐಟಿ, ಬಿಟಿ ಮತ್ತು ಎಸ್‌ಅಂಡ್‌ಟಿ ಇಲಾಖೆಯು ಕರ್ನಾಟಕ ಇನ್ನೋವೇಷನ್‌ ಅಂಡ್‌ ಟೆಕ್ನಾಲಜಿ ಸೊಸೈಟಿ(ಕೆಐಟಿಎಸ್‌-ಕಿಟ್ಸ್‌) ಮೂಲಕ ಇ-ಸ್ಟೆಪ್‌ ಉಪಕ್ರಮವನ್ನು ಆರಂಭಿಸಿದೆ. ಕರ್ನಾಟಕ ಸ್ಟಾರ್ಟಪ್‌ ಸೆಲ್ನ ಈ ಉಪಕ್ರಮವನ್ನು ರಾಜ್ಯದಲ್ಲಿನ ವಿದ್ಯಾರ್ಥಿ ಸ್ಟಾರ್ಟಪ್‌ಗ್ಳನ್ನು ಉದ್ಯಮಶೀಲತೆಯ ಕಡೆಗೆ ಸಬಲೀಕರಿಸುವ ಉದ್ದೇಶದೊಂದಿಗೆ ಆರಂಭಿಸಲಾಗಿದೆ ಎಂದು ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣಾರೆಡ್ಡಿ ಹೇಳಿದರು.

Advertisement

ನಗರದ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ, ಡಾ.ಎಂ.ಎಸ್‌.ಶೇಷಗಿರಿ ತಾಂತ್ರಿಕ ಮಹಾವಿದ್ಯಾಲಯ ಮತ್ತು ಬಸವೇಶ್ವರ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಸೆ. 5 ರಿಂದ 7 ರವರೆಗೆ ರಾಜ್ಯ ಸರ್ಕಾರದ ಐಟಿ, ಬಿಟಿ ಮತ್ತು ಎಸ್‌ಅಂಡ್‌ಟಿ ಇಲಾಖೆಯ

ಆಶ್ರಯದಲ್ಲಿ ಆರಂಭವಾದ ಇ-ಸ್ಟೆಪ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೂಟ್ಕ್ಯಾಂಪ್‌ಗ್ಳು, ಮಾರ್ಗದರ್ಶನ ಮತ್ತು ನಿರ್ದಿಷ್ಟ ತರಬೇತಿ ಕಾರ್ಯಕ್ರಮಗಳತ್ತ ಇ-ಸ್ಟೆಪ್‌ ಗಮನ ಕೇಂದ್ರೀಕರಿಸುತ್ತದೆ. ಅನುಭವಿ ತರಬೇತುದಾರರಿಂದ ಉದ್ಯಮಶೀಲತೆಯ ಮೂಲ ಅಂಶಗಳನ್ನು ಅರಿತುಕೊಳ್ಳಲು ಸಹಾಯಕವಾಗಲಿದೆ ಎಂದರು.

ಇ-ಸ್ಟೆಪ್‌ನ ಮೊದಲ ಹಂತದ‌ ಬೂಟ್ ಕ್ಯಾಂಪ್‌ಗ್ಳನ್ನು ರಾಜ್ಯದ ಎಲ್ಲೆಡೆ ಇರುವ ನ್ಯೂ ಏಜ್‌ ಇನ್‌ಕ್ಯೂಬೇಷನ್‌ ನೆಟ್ವರ್ಕ್‌(ಎನ್‌ಎಐಎನ್‌)ಗಳಲ್ಲಿ ಸಂಘಟಿಸಲಾಗುವುದು. ಬೂಟ್ ಕ್ಯಾಂಪ್‌ಗ್ಳನ್ನು ರಾಜ್ಯದ ಮಂಡ್ಯ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ದಕ್ಷಿಣ ಕನ್ನಡ, ಮಂಗಳೂರು, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲ್ಬುರ್ಗಿ ಮತ್ತು ಬೀದರ್‌ಗಳಲ್ಲಿ ಸೆ. 14ರವರೆಗೆ, ನಡೆಸಲಾಗುವುದು ಎಂದು ಹೇಳಿದರು.

ಇದರಲ್ಲಿ ಯುವ ಪ್ರತಿಭೆಗಳನ್ನು ಗುರುತಿಸಿ ಪೋಷಿಸಲಾಗುವುದು. ಪ್ರತಿ ದಿನ 400ಕ್ಕೂ ಹೆಚ್ಚಿನ ನೋಂದಣಿಗಳ ಜೊತೆಗೆ ರಾಜ್ಯದ ಎಲ್ಲೆಡೆ ಬೂಟ್ ಕ್ಯಾಂಪ್‌ಗ್ಳಿಗೆ ಅಪಾರ ಪ್ರತಿಕ್ರಿಯೆಯನ್ನು ನಾವು ಸ್ವೀಕರಿಸಿದ್ದೇವೆ. ಇದುವರೆಗೆ 18ರಿಂದ 26 ವರ್ಷ ವಯಸ್ಸಿನ 2499 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ ಸುಮಾರು ಶೇ.50ರಷ್ಟು ಮಹಿಳಾ ಅಭ್ಯರ್ಥಿಗಳಿದ್ದಾರೆ ಎಂದರು.

Advertisement

ಇ-ಸ್ಟೆಪ್‌ ಎಲ್ಲರನ್ನು ಒಳಗೊಂಡ ಬೆಳವಣಿಗೆಯಲ್ಲಿ ನೆರವಾಗುತ್ತಿದೆ. ಇದಲ್ಲದೇ 2ನೇ ಮತ್ತು 3ನೇ ಹಂತದ ನಗರಗಳಲ್ಲಿ ಇದರ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲಾಗುವದು. ಭಾರತದಲ್ಲಿ ಸ್ಟಾರ್ಟ್‌ ಅಪ್‌ ರಾಜಧಾನಿಯಾಗಿ ಕರ್ನಾಟಕದ ಸ್ಥಾನವನ್ನು ಮತ್ತಷ್ಟು ದೃಢಪಡಿಸುವಲ್ಲಿ ಇಲ್ಲಿನ ಪ್ರತಿಭೆಗಳನ್ನು ಬಳಸಿಕೊಳ್ಳುವುದು ನಮ್ಮ ಉದ್ದೇಶವಾಗಿದೆ ಎಂದರು.

ಪ್ರಾಯೋಗಿಕ ನಿರ್ದೇಶನದೊಂದಿಗೆ ಸ್ಟಾರ್ಟಪ್‌ಗ್ಳನ್ನು ಕೈಗೆತ್ತಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ಬೂಟ್ಕ್ಯಾಂಪ್‌ ಪ್ರಮುಖ ಹೆಜ್ಜೆಯಾಗಿದೆ. ಇದನ್ನು ಕರ್ನಾಟಕದ ಎಲ್ಲೆಡೆ ಇರುವ 30 ಕೆ-ಟೆಕ್‌ ಇನ್ನೋವೇಷನ್‌ ಹಬ್‌ಗಳಲ್ಲಿ ನಡೆಸಲಾಗುತ್ತಿದೆ. ಈ ಉಪಕ್ರಮದ ನಂತರ 2ನೇ ಮತ್ತು 3ನೇ ಹಂತದ ನಗರಗಳ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಉದ್ಯಮಶೀಲತೆಯ ಕಾರ್ಯಗಳನ್ನು ವೃತ್ತಿಜೀವನವನ್ನಾಗಿ ಆರಿಸಿಕೊಳ್ಳಲು ವಿಶ್ವಾಸ ಹೊಂದಲಿದ್ದಾರೆ ಎಂದು ಐಟಿ, ಬಿಟಿ ಇಲಾಖೆ, ಕಿಟ್ಸ್‌ನ ಎಂಡಿ, ಪ್ರಶಾಂತ್‌ ಕುಮಾರ್‌ ಮಿಶ್ರಾ ಹೇಳಿದರು

ಬೂಟ್ ಕ್ಯಾಂಪ್‌ ಪ್ರಸ್ತುತ ಸ್ಟಾರ್ಟ್‌ಅಪ್‌ ವ್ಯವಸ್ಥೆಯ ಒಟ್ಟಾರೆ ನೋಟವನ್ನು ಭಾಗವಹಿಸುವವರಿಗೆ ನೀಡುತ್ತದೆ. ಸಮಸ್ಯೆ, ಪರಿಹಾರಗಳು, ಸ್ಪರ್ಧಿಗಳು ಮತ್ತು ಗ್ರಾಹಕರನ್ನು ಆಧರಿಸಿದ ಹಲವಾರು ಚಿಂತನೆಗಳ ಮೇಲೆ ತಂಡಗಳು ಕೆಲಸ ಮಾಡಲು ಈ ಬೂಟ್ಕ್ಯಾಂಪ್‌ಗ್ಳು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತವೆ. ಬೂಟ್ಕ್ಯಾಂಪ್‌ನಲ್ಲಿ ನುರಿತ ಮಾರ್ಗದರ್ಶಕರು ಉಪನ್ಯಾಸ ನೀಡಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next