Advertisement

ಐಫೋನ್‌ನಲ್ಲಿ ಇ-ಸಿಮ್‌ ಬಂತು!

03:24 AM Sep 17, 2018 | Team Udayavani |

ಇ-ಸಿಮ್‌ನಿಂದಾಗಿ ಟೆಲಿಕಾಂ ಆಪರೇಟರ್‌ಗಳ ಅಸ್ತಿತ್ವವೇ ಅಲುಗಾಡುತ್ತದೆ ಎಂಬ ಭೀತಿ ಈಗ ಎದುರಾಗಿದೆ. ಒಂದು ನೆಟ್‌ವರ್ಕ್‌ ನಿಂದ ಇನ್ನೊಂದು ನೆಟ್‌ವರ್ಕ್‌ಗೆ ಬದಲಾಗುವುದು ಇದರಲ್ಲಿ ಅತ್ಯಂತ ಸುಲಭ. ಇದಕ್ಕಾಗಿ ಟೆಲಿಕಾಂ ಕಂಪನಿಗಳ ಕಚೇರಿಗೆ ಹೋಗಬೇಕಿಲ್ಲ. ಕೇವಲ ಫೋನ್‌ನಲ್ಲಿರುವ ಸೆಟ್ಟಿಂಗ್ಸ್‌ ಬದಲಿಸಿದರೆ ಸಾಕು. ಈ ಅನುಕೂಲ ಗ್ರಾಹಕರಿಗೆ ಆರಾಮದಾಯಕವೇನೋ ಹೌದು. ಆದರೆ ಸಮಸ್ಯೆ ಇರುವುದು ಟೆಲಿಕಾಂ ಕಂಪನಿಗಳಿಗೆ.

Advertisement

ಪ್ರತಿ ಬಾರಿ ಆ್ಯಪಲ್‌ ಹೊಸ ಫೋನನ್ನೋ ಅಥವಾ ಗ್ಯಾಜೆಟ್‌ಅನ್ನೋ ಮಾರುಕಟ್ಟೆಗೆ ಪರಿಚಯಿಸುವಾಗ ಭವಿಷ್ಯದಲ್ಲಿ ಮಾರುಕಟ್ಟೆಯನ್ನೇ ಬದಲಿಸುವ ತಂತ್ರಜ್ಞಾನವೊಂದನ್ನು ಪರಿಚಯಿಸುತ್ತಲೇ ಇರುತ್ತದೆ. ಕಳೆದ ಬಾರಿ ಐಫೋನ್‌ 6 ಬಿಡುಗಡೆಯಾದಾಗ ಅದರಲ್ಲಿದ್ದ ಫೇಸ್‌ ರಿಕಾಗ್ನಿಶನ್‌ ಅನ್‌ಲಾಕ್‌ ವ್ಯವಸ್ಥೆ ಅತ್ಯಂತ ಚರ್ಚೆಗೀಡಾಗಿತ್ತು. ಅದು ಎಷ್ಟು ಸುರಕ್ಷಿತವೋ, ಅನುಕೂಲವೋ ಎಂಬುದರಾಚೆಗೆ ಅದೊಂದು ಹೊಸ ಫೀಚರ್‌ ಆಗಿತ್ತು. ಈಗಂತೂ ಹೈ ಎಂಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಫೇಸ್‌ ರಿಕಾಗ್ನಿಶನ್‌ ಅನ್‌ಲಾಕ್‌ ಎಂಬುದು ಕನಿಷ್ಠ  ಫೀಚರ್‌ ಆಗಿ ಹೋಗಿದೆ. ಅದೇ ರೀತಿ ಇದೀಗ ಐಫೋನ್‌ ಎಕ್ಸ್‌ ಸರಣಿಯಲ್ಲಿ ಇ-ಸಿಮ್‌ ಪರಿಚಯಿಸಲಾಗಿದೆ.

ಈ ಇ-ಸಿಮ್‌ ಕಲ್ಪನೆ ಹೊಸದೇನೂ ಅಲ್ಲ. ಕಳೆದ ಆರೇಳು ವರ್ಷಗಳಿಂದಲೂ ಈ ವ್ಯವಸ್ಥೆ ಚಾಲ್ತಿಯಲ್ಲಿದೆ. ಅದರೆ ಇದನ್ನು ಕೆಲವೇ ಕಂಪನಿಗಳು ತಮ್ಮ ಪ್ರಾಡಕ್ಟ್ಗಳಲ್ಲಿ ಅಳವಡಿಸಿದ್ದವು. 

ಅಷ್ಟೇ ಅಲ್ಲ, ಇದು ಎಷ್ಟರ ಮಟ್ಟಿಗೆ ಗ್ರಾಹಕರಿಗೆ ಅನುಕೂಲ ಎಂಬುದೂ ಚರ್ಚೆಗೀಡಾಗಿತ್ತು. ಆದರೆ ಐಫೋನ್‌ ಮೂಲಕ ಇದು ಭಾರತವೂ ಸೇರಿದಂತೆ 10 ದೇಶಗಳಿಗೆ ಕಾಲಿಟ್ಟಿದೆ. ಈ ಹಿಂದೆ ಕಳೆದ ವರ್ಷ ಆಪಲ್‌ನ ಸ್ಮಾರ್ಟ್‌ ವಾಚ್‌ 3ಯಲ್ಲಿ ಇದನ್ನು ಪರಿಚಯಿಸಲಾಗಿತ್ತು. ಆದರೆ ಅದು ಅಷ್ಟೇನೂ ಸದ್ದು ಮಾಡಲಿಲ್ಲ. ನಂತರ ಗೂಗಲ್‌ ಪಿಕ್ಸೆಲ್‌ 2 ಕೂಡ ಇ-ಸಿಮ್‌ ಅಳವಡಿಸಲಿದೆ ಎಂಬ ಸುದ್ದಿ ಹೊರಬಿದ್ದಿತ್ತು.

ಏನಿದು ಇ-ಸಿಮ್‌?
ಇ-ಸಿಮ್‌ ಎಂದರೆ ಎಲೆಕ್ಟ್ರಾನಿಕ್‌ ಸಿಮ್‌ ಅಲ್ಲ. ಬದಲಿಗೆ ಎಂಬೆಡೆಡ್‌ ಸಿಮ್‌. ಪ್ರಸ್ತುತ ಸನ್ನಿವೇಶದಲ್ಲಿ ನಾವು ಟೆಲಿಕಾಂ ಕಂಪನಿಯ ಕಚೇರಿಗೆ ತೆರಳಿ ನಮ್ಮ ದಾಖಲೆಗಳನ್ನು ಕೊಟ್ಟು, ಅವರಿಂದ ಒಂದು ಸಣ್ಣ ಬಿಲ್ಲೆಯಂಥ ಚಿಪ್‌ ತರುತ್ತೇವೆ. ಅದನ್ನು ನಮ್ಮ ಸ್ಮಾರ್ಟ್‌ಫೋನ್‌ಗೆ ಹಾಕಿಕೊಳುತ್ತೇವೆ. ಆ ಸಿಮ್‌ ತೆಗೆದುಹಾಕಿದರೆ ಟೆಲಿಕಾಂ ಕಂಪನಿಗೂ ನಮಗೂ ಸಂಪರ್ಕವೇ ಇಲ್ಲ! ಆದರೆ ಇ-ಸಿಮ್‌ನಲ್ಲಿ ಹಾಗಲ್ಲ. ನಾವು ಕೊಂಡು ತರುವಂಥದ್ದೇ ಚಿಪ್‌ ಅನ್ನು ಫೋನ್‌ನ ಮದರ್‌ಬೋರ್ಡ್‌ನಲ್ಲೇ ಅಳವಡಿಸಲಾಗಿರುತ್ತದೆ. ಹಾಗಂತ ನಮಗೆ ಒಂದು ಕಂಪನಿಯ ಸೇವೆ ಬೇಡವೆಂದರೆ ಆ ಸಿಮ್‌ ತೆಗೆಯುವ ಅಗತ್ಯವಿಲ್ಲ. ಬೇರೆ ನೆಟ್‌ವರ್ಕ್‌ ಜೊತೆಗೆ ಸುಲಭವಾಗಿ ಕನೆಕ್ಟ್ ಮಾಡಿಕೊಳ್ಳಬಹುದು. ಅಂದರೆ ಇದು ರೀರೈಟಬಲ್‌ ಚಿಪ್‌! ಇತ್ತೀಚಿನ ಕೆಲವು ಮೊಬೈಲ್‌ಗ‌ಳಲ್ಲಿರುವ ಎನ್‌ಎಫ್ಸಿ ಚಿಪ್‌ ರೀತಿಯಲ್ಲೇ ಇದು ಕೆಲಸ ಮಾಡುತ್ತದೆ.

Advertisement

ಸದ್ಯದ ವ್ಯವಸ್ಥೆಯಲ್ಲಿ ಐಫೋನ್‌ ಖರೀದಿಸಿಕೊಂಡು ಬಂದ ತಕ್ಷಣ ಟೆಲಿಕಾಂ ಆಪರೇಟರ್‌ಗಳನ್ನು ಸಂಪರ್ಕಿಸಿ, ಈ ಇ-ಸಿಮ್‌ಗೆ ಸಂಪರ್ಕ ಕಲ್ಪಿಸಿ ಎಂದು ಗೋಗರೆಯಬೇಕು. ಮುಂದೊಂದು ದಿನ ಎಲ್ಲ ಕಂಪನಿಗಳೂ ತಮ್ಮ ಅಪ್ಲಿಕೇಶನ್‌ನಲ್ಲೇ ಈ ಸೌಲಭ್ಯ ಕಲ್ಪಿಸಿ ಸುಲಭವಾಗಿ ಸಿಮ್‌ಗೆ ನೆಟ್‌ವರ್ಕ್‌ ಕನೆಕ್ಟ್ ಮಾಡುವ ಅನುಕೂಲ ಮಾಡಿಕೊಡಬಹುದು. ಇದಕ್ಕೆ ಇನ್ನಷ್ಟು ಕಾಲ ತೆಗೆದುಕೊಳ್ಳಬಹುದು.

ನೆಟ್‌ವರ್ಕ್‌ ಆಪರೇಟರ್‌ಗಳಿಗೆ ಟೆನÒನ್‌
ಸಾಮಾನ್ಯವಾಗಿ ಪ್ರತಿ ಐಫೋನ್‌ ಬಿಡುಗಡೆಯಾದಾಗಲೂ ಮೊಬೈಲ್‌ ನೆಟ್‌ವರ್ಕ್‌ ಆಪರೇಟರ್‌ಗಳು ಖುಷಿಯಾಗುತ್ತಿದ್ದರು. ಗೇಮ್ಸ್‌ ಹಾಗೂ ಡೇಟಾವನ್ನು ಹೆಚ್ಚು ಹೆಚ್ಚು ಬಳಸುವುದಕ್ಕೆ ಅನುಕೂಲವಾಗುವಂತೆ ಪ್ರತಿ ಐಫೋನ್‌ ಕೂಡ ಅಪ್‌ಗೆÅàಡ್‌ ಆಗುತ್ತಿತ್ತು. ಇದು ಪರೋಕ್ಷವಾಗಿ ಆಪರೇಟರ್‌ಗಳಿಗೆ ಹೆಚ್ಚು ಆದಾಯ ತಂದುಕೊಡುತ್ತಿತ್ತು.  ಆದರೆ ಈ ಬಾರಿಯ ಐಫೋನ್‌ನಲ್ಲಿ ಇ-ಸಿಮ್‌ ಸೌಲಭ್ಯ ಟೆಲಿಕಾಂ ಆಪರೇಟರ್‌ಗಳ ನಿದ್ದೆ 
ಕೆಡಿಸಿದೆ. ಇ-ಸಿಮ್‌ ಪರಿಚಯಿಸುವುದಕ್ಕೂ ಮುನ್ನವೇ ಅಮೆರಿಕದ ವೆರಿಜಾನ್‌ ಕಮ್ಯೂನಿಕೇಶನ್ಸ್‌ ಮತ್ತು ಎಟಿ ಆ್ಯಂಡ್‌ ಟಿ ಕಂಪನಿಗಳ ಜೊತೆಗೆ ಆ್ಯಪಲ್‌ ಕಾನೂನು ಸಮರ ನಡೆಸಬೇಕಾಗಿ ಬಂದಿತ್ತು. ಈ ಎರಡೂ ಕಂಪನಿಗಳು ಇ-ಸಿಮ್‌ ಜಾರಿಗೆ ವಿರೋಧ ವ್ಯಕ್ತಪಡಿಸುತ್ತಿವೆ. ಬೆಂಬಲ ನೀಡುತ್ತಿಲ್ಲ ಎಂದು ಆ್ಯಪಲ್‌ ಆಕ್ಷೇಪಿಸಿದೆ. ಈ ಪ್ರಕರಣ ಇನ್ನೂ ಅಮೆರಿಕ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿದೆ.

ಇ-ಸಿಮ್‌ನಿಂದಾಗಿ ಟೆಲಿಕಾಂ ಆಪರೇಟರ್‌ಗಳ ಅಸ್ತಿತ್ವವೇ ಅಲುಗಾಡುತ್ತದೆ ಎಂಬ ಭೀತಿ ಈಗ ಎದುರಾಗಿದೆ. ಒಂದು ನೆಟ್‌ವರ್ಕ್‌ನಿಂದ ಇನ್ನೊಂದು ನೆಟ್‌ವರ್ಕ್‌ಗೆ ಬದಲಾಗುವುದು ಇದರಲ್ಲಿ ಅತ್ಯಂತ ಸುಲಭ. ಇದಕ್ಕಾಗಿ ಟೆಲಿಕಾಂ ಕಂಪನಿಗಳ ಕಚೇರಿಗೆ ಹೋಗಬೇಕಿಲ್ಲ. ಕೇವಲ ಫೋನ್‌ನಲ್ಲಿರುವ ಸೆಟ್ಟಿಂಗ್ಸ್‌ ಬದಲಿಸಿದರೆ ಸಾಕು. ಈ ಅನುಕೂಲ ಗ್ರಾಹಕರಿಗೆ ಆರಾಮದಾಯಕವೇನೋ ಹೌದು. ಆದರೆ ಸಮಸ್ಯೆ ಇರುವುದು ಟೆಲಿಕಾಂ ಕಂಪನಿಗಳಿಗೆ. ಪದೇ ಪದೇ ಬದಲಾಗುವ ಗ್ರಾಹಕನನ್ನು ಹಿಡಿದಿಟ್ಟುಕೊಳ್ಳಲು ಟೆಲಿಕಾಂ ಕಂಪನಿಗಳು ನಿರಂತರವಾಗಿ ಸ್ಪರ್ಧೆ ಎದುರಿಸಲೇಬೇಕಿರುತ್ತದೆ. ಅದರಲ್ಲೂ ಈ ಸೌಲಭ್ಯ ಹೊಸದಾಗಿ ಗ್ರಾಹಕರಿಗೆ ಸಿಕ್ಕರಂತೂ, ರಾಜಕಾರಣಿಗಳು ದಿನಬೆಳಗಾದರೆ ಪಕ್ಷದಿಂದ ಪಕ್ಷಕ್ಕೆ ಹಾರುವಂತೆ ಜನರು ಪದೇ ಪದೇ ನೆಟ್‌ವರ್ಕ್‌ನಿಂದ ನೆಟ್‌ವರ್ಕ್‌ಗೆ ಜಿಗಿಯುತ್ತಾರೆ.

ಇದು ಟೆಲಿಕಾಂ ಕಂಪನಿಗಳಿಗೆ ಭಾರಿ ತಲೆನೋವಿನ ಸಂಗತಿ. ಈ ಹಿಂದೆ ಮೊಬೈಲ್‌ ಸಂಖ್ಯೆ ಪೋರ್ಟ್‌ ಸೌಲಭ್ಯ ಬಂದಾಗ ಜನರು ಮಾಡಿದ್ದೂ ಇದನ್ನೇ. ಅಷ್ಟೇ ಅಲ್ಲ, ಕಳೆದ ವರ್ಷ ಸ್ಪೇನ್‌ನಲ್ಲಿ ಪೋರ್ಟ್‌ ಮಾಡುವುದಕ್ಕೆ 
ಬೇಕಿದ್ದ ಸಮಯವನ್ನು 24 ಗಂಟೆಗೆ ಇಳಿಸಿದಾಗಲೂ ಇದೇ ರೀತಿ ಆಗಿತ್ತು. ಕೋಟ್ಯಂತರ ಜನರು ಟೆಲಿಕಾಂ ಕಂಪನಿಗಳ ಕಚೇರಿಗಳಿಗೆ ನುಗ್ಗಿ ಪೋರ್ಟ್‌ ಮಾಡಿಸಿಕೊಂಡರು. ಇನ್ನು ಇ-ಸಿಮ್‌ ಸೌಲಭ್ಯ ಬಂದರೆ ಕೇಳಬೇಕೆ?

ಭಾರತದಲ್ಲಿ ಎರಡು ಕಂಪನಿಗಳಲ್ಲಿದೆ ಸೌಲಭ್ಯ
ಸದ್ಯ ಭಾರತದಲ್ಲಿ ಐಫೋನ್‌ ಮಾರುಕಟ್ಟೆಗೆ ಬರುತ್ತಿದ್ದಂತೆಯೇ ಏರ್‌ಟೆಲ್‌ ಮತ್ತು ರಿಲಾಯನ್ಸ್‌ ಜಿಯೋ ಇ-ಸಿಮ್‌ಗೆ ಕನೆಕ್ಟಿವಿಟಿ ಒದಗಿಸಲಿವೆ. ಆದರೆ ಐಫೋನ್‌ ಎಕ್ಸ್‌ ಹಾಗೂ ಎಕ್ಸ್‌ಎಸ್‌ ಮ್ಯಾಕ್ಸ್‌ ಇ-ಸಿಮ್‌ ಮಿತಿಯೆಂದರೆ ಇಡೀ ವಿಶ್ವದಲ್ಲಿ ಕೇವಲ 10 ದೇಶಗಳ ಟೆಲಿಕಾಂ ಕಂಪನಿಗಳು ಇ-ಸಿಮ್‌ ಬೆಂಬಲಿಸುತ್ತವೆ. ಒಂದು ಖುಷಿಯ ಸಂಗತಿಯೆಂದರೆ ಐಫೋನ್‌ ಇ-ಸಿಮ್‌ ಒಂದನ್ನೇ ಹೊಂದಿರುವುದಿಲ್ಲ. ಒಂದು ಮೈಕ್ರೋಸಿಮ್‌ ಸ್ಲಾಟ್‌ ಕೂಡ ಇರುತ್ತದೆ. ಅಂದರೆ ಐಫೋನ್‌ ಎಕ್ಸ್‌ ಹಾಗೂ ಎಕ್ಸ್‌ಎಸ್‌ ಮ್ಯಾಕ್ಸ್‌ ಗಳು ಡ್ಯುಯೆಲ್‌ ಸಿಮ್‌ ಫೋನ್‌ಗಳಾಗಿದ್ದು, ಒಂದು ಸಿಮ್‌ನಲ್ಲಿ ಮೈಕ್ರೋಸಿಮ್‌ ಹಾಕಿಕೊಳ್ಳಬಹುದು. ಆದರೆ ಇನ್ನೊಂದು ಮೊಬೈಲ್‌ ನಂಬರ್‌ ಬಳಸುತ್ತೇವೆ ಎಂದಾದರೆ ಇ-ಸಿಮ್‌ ಸೌಲಭ್ಯ ಪಡೆದುಕೊಳ್ಳಬೇಕು.

ಸದ್ಯ ಚೀನಾದಲ್ಲಿ ಮಾರಾಟವಾಗುವ ಐಫೋನ್‌ಗಳು ಮಾತ್ರ ಎರಡೂ ಮೈಕ್ರೋ ಹಾಗೂ ನ್ಯಾನೋ ಸಿಮ್‌ ಸ್ಲಾಟ್‌ಗಳನ್ನೇ ಹೊಂದಿರುತ್ತವೆ. ಅಂದರೆ ಅದರಲ್ಲಿ ಇ-ಸಿಮ್‌ ಇರುವುದಿಲ್ಲ. ಸಾಮಾನ್ಯವಾಗಿ ಏಷ್ಯಾ ದೇಶಗಳಲ್ಲಿ ಡ್ಯುಯೆಲ್‌ ಸಿಮ್‌ ಫೋನ್‌ಗಳು ಕಳೆದ ಆರೇಳು ವರ್ಷಗಳಲ್ಲಿ ಜನಪ್ರಿಯವಾಗಿವೆ. ಈವರೆಗೂ ಐಫೋನ್‌ ಡ್ಯುಯೆಲ್‌ ಸಿಮ್‌ ಸೌಲಭ್ಯ ಹೊಂದಿರಲಿಲ್ಲ. ಏಷ್ಯಾ ಮಾರುಕಟ್ಟೆಯನ್ನೇ ಗಮನದಲ್ಲಿಟ್ಟುಕೊಂಡು ಐಫೋನ್‌ 
ಈ ಸೌಲಭ್ಯವನ್ನು ತಂದಿದ್ದರೂ, ಡ್ಯುಯೆಲ್‌ ಸಿಮ್‌ ಸೌಲಭ್ಯ ಈ ಭಾಗಕ್ಕೆ ಹಳೆಯದಾಯಿತು. ಐಫೋನ್‌ನಲ್ಲಿ ಡ್ಯುಯೆಲ್‌ ಸಿಮ್‌ ಇಲ್ಲದ್ದರಿಂದ ಸಾಮಾನ್ಯವಾಗಿ ಐಫೋನ್‌ ಇಟ್ಟುಕೊಂಡವರು ಒಂದು ಆಂಡ್ರಾಯ್ಡ ಫೋನನ್ನೂ ಹಿಡಿದು ಓಡಾಡುತ್ತಿದ್ದರು. ಆದರೆ ಇನ್ನು ಐಫೋನ್‌ ಎಕ್ಸ್‌ ಇಟ್ಟುಕೊಂಡವರಿಗೆ ಆಂಡ್ರಾಯ್ಡನ ಹಂಗಿರುವುದಿಲ್ಲ.

ಮೇನಲ್ಲಿ ಟೆಲಿಕಾಂ ಇಲಾಖೆಯಿಂದ ಅನುಮತಿ
ಭಾರತದಲ್ಲಿ ಇ-ಸಿಮ್‌ ಹೊಂದಿರುವ ಆಪಲ್‌ ಸ್ಮಾರ್ಟ್‌ ವಾಚ್‌ಗಳನ್ನು ಏರ್‌ಟೆಲ್‌ ಹಾಗೂ ರಿಲಾಯನ್ಸ್‌ ಜಿಯೋ ಮಾರಾಟ ಮಾಡಲು ಆರಂಭಿಸುತ್ತಿದ್ದಂತೆಯೇ ಕಳೆದ ಮೇನಲ್ಲಿ ಟೆಲಿಕಾಂ ಇಲಾಖೆ ಇ-ಸಿಮ್‌ಗೆ ಅನುಮತಿ ನೀಡಿದೆ. ಟೆಲಿಕಾಂ ನಿಯಮದ ಪ್ರಕಾರ ಸ್ಮಾರ್ಟ್‌ಫೋನ್‌ ತಯಾರಕರು ಸ್ಮಾರ್ಟ್‌ ಫೋನ್‌ ಮಾರುವಾಗಲೇ ಸಿಮ್‌ ವಿತರಣೆಗೆ ಅಗತ್ಯವಿರುವ ಕೆವೈಸಿ ದಾಖಲೆಯನ್ನು ಖಚಿತಪಡಿಸಿಕೊಳ್ಳಬೇಕು. ಅಂದರೆ ಈಗ ನಾವು ಮೊಬೈಲ್‌ ತೆಗೆದುಕೊಳ್ಳುವ ರೀತಿಯಲ್ಲಿ ನಮ್ಮ ಹೆಸರಿನಲ್ಲಿ ಬಿಲ್‌ ಮಾಡಿಸಿಕೊಂಡು ಬಂದರೆ ಸಾಲದು. ವಿಳಾಸ ಹಾಗೂ ಗುರುತಿನ ದಾಖಲೆಗಳನ್ನೂ ನೀಡಬೇಕಿರುತ್ತದೆ. ಈಗ ಸಿಮ್‌ ಖರೀದಿಗೆ ಆಧಾರ್‌ ನೀಡಬೇಕಿರುವುದರಿಂದ, ಬಯೋಮೆಟ್ರಿಕ್‌ ದೃಢೀಕರಣ ಸೌಲಭ್ಯದ ಮೂಲಕ ಸ್ಮಾರ್ಟ್‌ಫೋನ್‌ ಖರೀದಿ ಮಾಡಬೇಕಾಗುತ್ತದೆ. ಹೀಗಾಗಿ ಪ್ರತಿ ಬಾರಿ ನೆಟ್‌ವರ್ಕ್‌ ಬದಲಾವಣೆ ಮಾಡುವಾಗಲೂ ದಾಖಲೆಗಳನ್ನು ಕೊಡಬೇಕಿಲ್ಲ.

ಸ್ಮಾರ್ಟ್‌ಫೋನ್‌ ಕಂಪನಿಗಳೇ ಗೇಟ್‌ಕೀಪರ್‌!
ಇ-ಸಿಮ್‌ನ ಅನುಕೂಲಗಳು ಹಲವಾರಿದ್ದರೂ ಮುಂದೊಂದು ದಿನ ಸ್ಮಾರ್ಟ್‌ಫೋನ್‌ ತಯಾರಿಕೆ ಕಂಪನಿಗಳೇ ಗೇಟ್‌ ಕೀಪರುಗಳಂತಾಗುವ ಅಪಾಯವೂ ಇದೆ. ಯಾವ ಮೊಬೈಲ್‌ ನೆಟ್‌ವರ್ಕ್‌ ಗಳ ಜೊತೆ ಒಪ್ಪಂದ ಮಾಡಿಕೊಳ್ಳಬೇಕು, ಯಾವ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಬಾರದು ಎಂಬುದನ್ನು ಸ್ಮಾರ್ಟ್‌ಫೋನ್‌ ತಯಾರಿಕೆ ಕಂಪನಿಗಳು ನಿರ್ಧರಿಸಬಹುದು. ಅಷ್ಟೇ ಅಲ್ಲ, ನೆಟ್‌ವರ್ಕ್‌ ಆಕ್ಟಿವೇಶನ್‌ಗೆ ಶುಲ್ಕವನ್ನೂ ವಿಧಿಸ ಬಹುದು. ಇನ್ನೂ ಮುಂದೆ ಹೋಗಿ ನೆಟ್‌ವರ್ಕ್‌ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ತಾನೇ ಡೇಟಾ ಹಾಗೂ ಕರೆಗಳ ಟ್ಯಾರಿಫ್ ಬಿಡುಗಡೆ ಮಾಡಿ ಮೊಬೈಲ್‌ ವರ್ಚುವಲ್‌ ನೆಟ್‌ವರ್ಕ್‌ ಆಪರೇಟರ್‌ ರೀತಿ ಕಾರ್ಯನಿರ್ವಹಿಸಲೂ ಬಹುದು. ಸದ್ಯ ಐಫೋನ್‌ಗಳು ಒಂದು ಇ-ಸಿಮ್‌ ಹಾಗೂ ಇನ್ನೊಂದು ಭೌತಿಕ ಸಿಮ್‌ ಸೌಲಭ್ಯ ಹೊಂದಿವೆ. ಮುಂದೊಂದು ದಿನ ಎರಡೂ ಸಿಮ್‌ಗಳನ್ನೂ ಇ-ಸಿಮ್‌ ಮಾಡಿ, ಭೌತಿಕ ಸಿಮ್‌ಗೆ ತಿಲಾಂಜಲಿ ಇಟ್ಟ ರಂತೂ ಟೆಲಿಕಾಂ ವಲಯದಲ್ಲಿ ಮಹತ್ವದ ಸ್ಥಿತ್ಯಂತರವಾಗುವು ದಂತೂ ಸತ್ಯ. ಮೊಬೈಲ್‌ ನೆಟ್‌ವರ್ಕ್‌ ಕಂಪನಿಗಳ ಅಸ್ತಿತ್ವವನ್ನೇ ಅಲುಗಾಡಿಸಿ ಬಿಡಬಹುದಾದ ಬದಲಾವಣೆ ಇದು ಆದೀತು.

– ಕೃಷ್ಣ ಭಟ್‌

Advertisement

Udayavani is now on Telegram. Click here to join our channel and stay updated with the latest news.

Next