ಬೆಂಗಳೂರು: ಬಿಬಿಎಂಪಿ ಪೂರ್ವ ವಲಯ ವ್ಯಾಪ್ತಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಶುಕ್ರವಾರ ರೋಟರಿ ಬೆಂಗಳೂರು ರಾಜ್ ಮಹಲ್ ವಿಲಾಸ್, ರೋಟರಿ ಬೆಂಗಳೂರು ಹೆಚ್.ಎಸ್.ಆರ್ ಹಾಗೂ ಐವ್ಯಾಲ್ಯೂ ಇನ್ಫೋಸೆಲ್ಯೂಷನ್ಸ್ ಫ್ರೈ.ಲಿ.ವತಿಯಿಂದ ವೈದ್ಯಕೀಯ ಸೇವೆಗಳಿಗಾಗಿ 12 ಪರಿಸರ ಸ್ನೇಹಿ (ಎಲೆಕ್ಟ್ರಿಕಲ್)ಸಂಚಾರಿ “ಇ-ಸಂಜೀವಿನಿ’ ದ್ವಿಚಕ್ರ ವಾಹನಗಳನ್ನು ಉಚಿತವಾಗಿ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಭೈರತಿ ಸುರೇಶ್, ಪಾಲಿಕೆ ಮುಖ್ಯಆಯುಕ್ತ ಗೌರವ್ ಗುಪ್ತ, ವಲಯ ಆಯುಕ್ತ ಮನೋಜ್ ಜೈನ್, ವಲಯ ಜಂಟಿ ಆಯುಕ್ತ ಶಿಲ್ಪಾ, ಆರೋಗ್ಯ ವೈದ್ಯಾಧಿಕಾರಿ ಡಾ. ವೇದಾ, ರೋಟರಿ ಅಂತಾ ರಾಷ್ಟ್ರೀಯ ಡಿಸ್ಟ್ರಿಕ್ ಗೌರ್ನರ್ 3190 ರೋಟರಿಯನ್ ಡಾ. ಫಜಲ್ ಮಹಮೂದ್, ರೋಟರಿ ಬೆಂಗಳೂರು ರಾಜಮಹಲ್ ವಿಲಾಸ್ ಅಧ್ಯಕ್ಷ ರೋಟರಿಯನ್ ಶಂಕರ್ ಸುಬ್ರಮಣಿಯನ್, ರೋಟರಿ ಬೆಂಗಳೂರು ಹೆಚ್.ಎಸ್.ಆರ್ ನ ಅಧ್ಯಕ್ಷ ರೋಟರಿಯನ್ ಕೆ.ಸಿ.ಎನ್ ರೆಡ್ಡಿ, ಐವ್ಯಾಲ್ಯು ಇನ್ಫೋಸೆಲ್ಯೂಷನ್ಸ್ ಫ್ರೈ.ಲಿ.ನ ಸಿಎಫ್‌ಒ ಸ್ವರೂಪ್ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಶಾಸಕ ಭೈರತಿ ಸುರೇಶ್, ರೋಟರಿ ರಾಜಮಹಲ್ ವಿಲಾಸ್ ಜನರಿಗೆ ಸಾಕಷ್ಟು ಸಹಾಯ ಮಾಡುತ್ತಿರುವ ಸಂಸ್ಥೆಯಾಗಿದ್ದು, ಕೋವಿಡ್ ಸಮಯದಲ್ಲಿ ಪಾಲಿಕೆಯ ಜೊತೆ ಕೈಜೋಡಿಸಿ ಬಹಳಷ್ಟು ಕೆಲಸ ಮಾಡಿದೆ ಎಂದು ಪ್ರಶಂಸಿಸಿದರು.
ಈ ಹಿಂದೆ ಸಂಜಯ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾರಂಭಿಸಿದ್ದ ಇ-ಸಂಜೀವಿನಿ ಯೋಜನೆಯನ್ನು ಪೂರ್ವ ವಲಯ ವ್ಯಾಪ್ತಿಯ ಇನ್ನಿತರೆ ಪ್ರಾಥಮಿ ಆರೋಗ್ಯ ಕೇಂದ್ರಗಳಿಗೂ ವಿಸ್ತರಿಸಲಾಗಿದೆ. ರೋಟರಿ ಸಂಸ್ಥೆಯ ಸಮಾಜ ಸೇವೆ ಶ್ಲಾಘನೀಯ ಎಂದು ಹೇಳಿದರು. ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತ , ರೋಟರಿ ಸಂಸ್ಥೆ ವತಿಯಿಂದ ಪ್ರಾರಂಭಿಸಿದ್ದ
ಇ-ಸಂಜೀವಿನಿ ಯೋಜನೆಯು ಈಗ ಪೂರ್ವ ವಲಯದ ಹೆಬ್ಟಾಳ, ಪುಲಕೇಶಿನಗರ ಹಾಗೂ ಶಿವಾಜಿನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಿಸ್ತರಿಸಿದೆ. ಇದನ್ನು ಪೂರ್ವ ವಲಯ ಸೇರಿದಂತೆ ಇನ್ನಿತರೆ ವಲಯಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಸಂಜಯ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಈಗಾಗಲೇ 2 ದ್ವಿಚಕ್ರ ವಾಹನ ನೀಡಿದ್ದು, ಇದೀಗ ಇನ್ನೂ 12 ದ್ವಿಚಕ್ರ ವಾಹನಗಳನ್ನು ನೀಡಿರುವು ದರಿಂದ, ಪೂರ್ವ ವಲಯ ವ್ಯಾಪ್ತಿಯ ಸ್ಥಳೀಯ ಪ್ರದೇಶದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಲು ಬಹಳ ಉಪಯೋಗಕರಿಯಾಗಿದೆ. ಇದರಿಂದ ತಕ್ಷಣ ಮನೆ ಬಾಗಿಲಿಗೆ ತೆರಳಿ ಆರೋಗ್ಯ ಸೇವೆಯನ್ನು ನೀಡಬಹುದಾಗಿದೆ ಎಂದು ನುಡಿದರು.