ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ “ಇ ಸಂಜೀವಿನಿ’ ರಾಷ್ಟ್ರೀಯ ಟೆಲಿಮೆಡಿಸಿನ್ ಸೇವೆಗೆ ಕರ್ನಾಟಕದಲ್ಲಿ ಉತ್ತಮ ಸ್ಪಂದನೆ ದೊರೆತಿದೆ. ದೇಶದಲ್ಲಿಯೇ ಆರೋಗ್ಯ ಉಪ ಕೇಂದ್ರಗಳ ಮೂಲಕ ಇ ಸಂಜೀವಿನಿ ಸೇವೆ ಬಳಕೆಯಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದ್ದು, ಈ ಕುರಿತು ಕೇಂದ್ರ ಸರ್ಕಾರದಿಂದ ಪ್ರಶಂಸೆ ವ್ಯಕ್ತವಾಗಿದೆ.
ಇದರ ಬೆನ್ನಲ್ಲೇ ಕಳೆದ ವಾರ “ಇ ಸಂಜೀವಿನಿ ಒಪಿಡಿ’ ಟೆಲಿಮೆಡಿಸಿನ್ ಸೇವೆ ಆರಂಭವಾಗಿದ್ದು, ರಾಜ್ಯದ 706 ಸರ್ಕಾರಿ ವೈದ್ಯರು ಟೆಲಿಮೆಡಿಸಿಸ್ ಸೇವೆ ನೀಡಲು ನೋಂದಣಿಯಾಗಿದ್ದಾರೆ. ಸಾರ್ವಜನಿಕರು ಮನೆಯಲ್ಲಿಯೇ ಕುಳಿತು ಮೊಬೈಲ್ ಮೂಲಕ ಸಾಮಾನ್ಯ ಕಾಯಿಲೆ, ಫಾಲೋಅಪ್ ಚಿಕಿತ್ಸೆ, ತಜ್ಞ ವೈದ್ಯರ ಸಲಹೆ ಪಡೆಯಬಹುದಾಗಿದೆ. ಇದಕ್ಕಾಗಿಯೇ ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 38 ಟೆಲಿಮೆಡಿಸಿನ್ ಹಬ್‌ಗಳು ಕಾರ್ಯಾಚರಣೆ ನಡೆಸುತ್ತಿವೆ.
ದೇಶದಲ್ಲಿ ಕೋವಿಡ್ ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ದೇಶಾದ್ಯಂತ 2 ವಿಧದ ಟೆಲಿಮೆಡಿಸಿನ್ ಸೇವೆಯನ್ನು ಕೇಂದ್ರ ಸರ್ಕಾರ ಆರಂಭಿಸಿತು. 1. ರೋಗಿಗಳು ಸ್ಥಳೀಯ ಮಟ್ಟದ ಆರೋಗ್ಯ ಉಪಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಕಿರಿಯ ಆರೋಗ್ಯ ಸಹಾಯಕಿಯರ ನೆರವಿನಿಂದ ತಜ್ಞ ವೈದ್ಯರೊಂದಿಗೆ ಟೆಲಿ ಸಮಾಲೋಚನೆಗೆ ಒಳಗಾಗುವುದು. 2. “ಇ ಸಂಜೀವಿನಿ ಒಪಿಡಿ” ಕಾರ್ಯಕ್ರಮದಡಿ ರೋಗಿಯೇ ಮೊಬೈಲ್ ಆ್ಯಪ್, ಆನ್‌ಲೈನ್ ಮೂಲಕ ನೇರವಾಗಿ ವೈದ್ಯರ ಸಂಪರ್ಕಿಸುವುದು. ಈವರೆಗೂ ದೇಶಾದ್ಯಂತ 3 ಲಕ್ಷಕ್ಕೂ ಅಧಿಕ ಟೆಲಿಮೆಡಿಸಲ್ ಸೇವೆ ಲಭ್ಯವಾಗಿವೆ. ಉಪ ಕೇಂದ್ರಗಳ ಟೆಲಿಮೆಟಿಸಿನ್ ಸೇವೆಯಲ್ಲಿ ಕರ್ನಾಟಕ ಈವರೆಗೂ 6,731 ಮಂದಿಗೆ 7,474 ಸೇವೆಗಳನ್ನು ನೀಡುವ ಮೂಲಕ ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಮೂರು ಸ್ಥಾನದಲ್ಲಿ ಹಿಮಾಚಲ ಪ್ರದೇಶ, ಆಂಧ್ರಪ್ರದೇಶ, ಗುಜರಾತ್ ರಾಜ್ಯಗಳಿವೆ.
ರೋಗಿಗೆ ಮೊಬೈಲ್‌ನಲ್ಲೆ ಚಿಕಿತ್ಸೆ: ಕರ್ನಾಟಕದಲ್ಲಿ 5 ತಿಂಗಳಿನಿಂದ ಕೇವಲ ಆರೋಗ್ಯ ಉಪಕೇಂದ್ರಗಳಲ್ಲಿ ಮಾತ್ರ ಇ ಸಂಜೀವಿನಿ ಸೇವೆ ಲಭ್ಯವಿತ್ತು. ಆದರೆ, ಸೆ. 1 ರಿಂದ ಮೊಬೈಲ್ ಆ್ಯಪ್ ಅಥವಾ ಆನ್‌ಲೈನ್ ಮೂಲಕ “ಇ ಸಂಜೀವಿನಿ ಒಪಿಡಿ” ಸೇವೆ ಆರಂಭವಾಗಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗಾಗಲೇ 300ಕ್ಕೂ ಹೆಚ್ಚು ರೋಗಿಗಳು ಆ್ಯಪ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ವಾರದಲ್ಲಿಯೇ 650 ವೈದ್ಯರ ನೋಂದಣಿ: ಈ ಹಿಂದೆ ರಾಜ್ಯದಲ್ಲಿ 50 ವೈದ್ಯರು ಮಾತ್ರ ಟೆಲಿಮೆಟಿಸಿನ್ ಸೇವೆಗೆ ನೋಂದಣಿ ಮಾಡಿಕೊಂಡಿದ್ದರು. ಆರೋಗ್ಯ ಇಲಾಖೆ ಇ ಸಂಜೀವಿನ ಒಪಿಡಿ ಸೇವೆ ಆರಂಭಿಸಿದ ಹಿನ್ನೆಲೆ ಜಿಲ್ಲಾಸ್ಪತ್ರೆಗಳ ವೈದ್ಯರುಗಳನ್ನು ಟೆಲಿಮೆಡಿಸನ್ ಸೇವೆಆಹ್ವಾನಿಸಿತ್ತು. ಒಂದು ವಾರದಲ್ಲಿ 650ಕ್ಕೂ ಹೆಚ್ಚು ವೈದ್ಯರು ನೋಂದಣಿ ಮಾಡಿಕೊಂಡಿದ್ದಾರೆ. ಸದ್ಯ 706 ವೈದ್ಯರು ಇ ಸಂಜೀವಿನಿ ಟೆಲಿಮೆಡಿಸಿನ್ ಸೇವೆಗೆ ಲಭ್ಯವಿದ್ದಾರೆ. ರಾಜ್ಯ ಜಿಲ್ಲಾಸ್ಪತ್ರೆ ಮತ್ತು ರೆಫೆರಲ್ ಆಸ್ಪತ್ರೆ ಸೇರಿ 38 ಕಡೆ ಟೆಲಿಮೆಡಿಸಿನ್ ಸೇವಾ ಹಬ್‌ಗಳನ್ನು ತೆರೆಯಲಾಗಿದೆ. ಪಾಳಿಯಲ್ಲಿ ವೈದ್ಯರು ಕಾರ್ಯನಿರ್ವಹಿಸಲಿದ್ದು, ಜನರಲ್ ಒಪಿಡಿ ಇಲ್ಲದ ದಿನ ಟೆಲಿ ಮೆಡಿಸಿನ್ ಒಪಿಡಿ ಸೇವೆ ನೀಡಲಿದ್ದು, ನಿತ್ಯ 2000 ರೂ. ಗೌರವಧನ ನೀಡಲಾಗುವುದು ಎಂದು ಇ-ಆರೋಗ್ಯ ಉಪನಿರ್ದೇಶಕ ಡಾ.ಅರುಣ್ ಕುಮಾರ್ ತಿಳಿಸಿದ್ದಾರೆ.
ಮೊಬೈಲ್ ಮೂಲಕ ಚಿಕಿತ್ಸೆ ಹೇಗೆ? : ಮೊಬೈಲ್‌ನಲ್ಲಿ ಪ್ಲೇ ಸ್ಟೋರ್ ಅಥವಾ ಕಂಪ್ಯೂಟರ್‌ನಲ್ಲಿ ಗೂಗಲ್‌ಗೆ ತೆರಳಿ “ಇ ಸಂಜೀವಿನಿ ಒಪಿಡಿ’ ಆಯ್ಕೆ ಮಾಡಿಕೊಳ್ಳಬೇಕು. ಇ- ಸಂಜೀವಿನಿ ಮುಖ ಪುಟ ತೆರೆದುಕೊಳ್ಳಲಿದೆ. ಇದರಲ್ಲಿ ರೋಗಿಯ ಮೊಬೈಲ್ ನಂಬರ್ ನೀಡಿ, ಒಟಿಪಿ ಪಡೆದು ನೋಂದಣಿ ಮಾಡಿಕೊಳ್ಳಬೇಕು. ಬಳಿಕ ರೋಗಿಯ ಪ್ರಾಥಮಿಕ ಮಾಹಿತಿ ನಮೂದಿಸಿ ಕಾಯಿಲೆ ವಿಧದ ಆಯ್ಕೆ ಮಾಡಿದ ಕೂಡಲೇ ರೋಗಿ ಐಡಿ, ಟೋಕನ್ ಸಂಖ್ಯೆ ಬರಲಿದೆ. ಅದನ್ನು ಬಳಸಿ ಲಾಗ್ ಇನ್ ಆದರೆ ಆ್ಯಪ್ ಅಥವಾ ವೆಬ್‌ಪುಟದಲ್ಲೆ ವಿಡಿಯೋ ಕಾಲ್ ಮೂಲಕ ವೈದ್ಯರನ್ನು ಸಂಪರ್ಕಿಸಬಹುದು. ಬಳಿಕ ಇ- ಔಷಧ ಚೀಟಿಯನ್ನು ವೈದ್ಯರು ನೀಡುತ್ತಾರೆ. ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಪ್ರತಿ ದಿನದ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯ ವರೆಗೆ ಲಭ್ಯವಿರು ತ್ತದೆ. ಒಮ್ಮೆ ನೋಂದಣಿ ಆದ ಬಳಿಕ ಸಮಾಲೋಚನೆ ಅಗತ್ಯವಿದ್ದಾಗ ಟೋಕನ್ ನಂಬರ್ ಪಡೆದು ನೇರವಾಗಿ ವಿಡಿಯೋ ಕಾಲ್ ಮಾಡಬಹುದು. ಆರೋಗ್ಯ ಉಪಕೇಂದ್ರಗಳಿಗೆ ಭೇಟಿ ನೀಡಿಯೂ ಇ ಸಂಜೀವಿನಿ ಟೆಲಿಮೆಡಿಸಿನ್ ನೆರವು ಪಡೆಯಬಹುದು.
ಇ ಸಂಜೀವಿನಿ ಒಪಿಡಿ ಸೇವೆ ಬಳಸುವ ಮೂಲಕ ರೋಗಿಗಳು ಆಸ್ಪತ್ರೆಯ ಅಲೆದಾಟದಿಂದ ತಪ್ಪಿಸಿಕೊಳ್ಳಬಹುದು. ಮನೆಯಲ್ಲೆ ಕುಳಿತು ತಜ್ಞ ವೈದ್ಯರನ್ನು ಸಂಪರ್ಕಿಸಬಹುದು. ರೆಫರಲ್ ಆಸ್ಪತ್ರೆಗಳ ತಜ್ಞ ವೈದ್ಯರು ಸೇರಿ 700ಕ್ಕೂ ವೈದ್ಯರು ಟೆಲಿಮೆಡಿಸಿನ್ ಸೇವೆಗೆ ಲಭ್ಯವಿದ್ದಾರೆ. ಉಪ ಕೇಂದ್ರಗಳಲ್ಲೂ ಸೇವೆ ಪಡೆಯಬಹುದಾಗಿದೆ.
–ಡಾ.ಅರುಣ್ ಕುಮಾರ್, ಇ-ಆರೋಗ್ಯ ಉಪನಿರ್ದೇಶಕರು
ಆರೋಗ್ಯ ಉಪ ಕೇಂದ್ರಗಳ ಮೂಲಕ ಇ ಸಂಜೀವಿನಿ ಸೇವೆ ಬಳಕೆಯಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಸದ್ಯ ಇ ಸಂಜೀವಿನಿ ಒಪಿಡಿ ಸೇವೆಯೂ ಆರಂಭವಾಗಿದ್ದು, ಅಗತ್ಯ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ಟೆಲಿಮೆಡಿಸಿನ್ ಸೇವೆ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರುವ ವಿಶ್ವಾಸವಿದೆ.
–ಸುರೇಶ್ ಜಂಬಗಿ, ತಾಂತ್ರಿಕ ಅಧಿಕಾರಿ, ಸಿ-ಡಿಎಸಿ, ಚಂಡೀಗಡ
–ಜಯಪ್ರಕಾಶ್ ಬಿರಾದಾರ್