Advertisement

ಇ-ರೂಪಾಯಿಯಿಂದ ಡಿಜಿಟಲ್‌ ವ್ಯವಹಾರಕ್ಕೆ ಉತ್ತೇಜನ

11:36 PM Oct 07, 2022 | Team Udayavani |

ಬಲು ನಿರೀಕ್ಷಿತ ಡಿಜಿಟಲ್‌ ಕರೆನ್ಸಿಗೆ ಶೀಘ್ರದಲ್ಲಿಯೇ ಚಾಲನೆ ನೀಡುವುದಾಗಿ ಶುಕ್ರವಾರ ಭಾರತೀಯ ರಿಸರ್ವ್‌ ಬ್ಯಾಂಕ್‌ ತಿಳಿಸಿದೆ. ಕೇಂದ್ರ ಸರಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಡಿಜಿಟಲ್‌ ಇಂಡಿಯಾ ಪರಿಕಲ್ಪನೆಯಡಿ ಮುಂದಿನ ಕೆಲವೇ ದಿನಗಳಲ್ಲಿ ಇ-ರೂಪಾಯಿಯನ್ನು ಪರಿಚಯಿಸುವುದಾಗಿ ಅದು ಹೇಳಿದೆ. ಸೆಂಟ್ರಲ್‌ ಬ್ಯಾಂಕ್‌ ಡಿಜಿಟಲ್‌ ಕರೆನ್ಸಿ(ಸಿಬಿಡಿಸಿ) ಕುರಿತಂತೆ ಟಿಪ್ಪಣಿಯನ್ನು ಬಿಡುಗಡೆ ಮಾಡಿರುವ ಆರ್‌ಬಿಐ, ಮೊದಲ ಹಂತದಲ್ಲಿ ಪ್ರಾಯೋಗಿಕ ನೆಲೆಯಲ್ಲಿ ಕೆಲವೊಂದು ನಿರ್ದಿಷ್ಟ ಬಳಕೆಯ ಪ್ರಕರಣಗಳಲ್ಲಿ ಮಾತ್ರವೇ ಇ-ರೂಪಾಯಿಯನ್ನು ಪರಿಚಯಿಸುತ್ತಿರುವುದಾಗಿ ಸ್ಪಷ್ಟಪಡಿಸಿದೆ.

Advertisement

ಆರ್‌ಬಿಐನ ಈ ನಿರ್ಧಾರದಿಂದ ದೇಶದ ಡಿಜಿಟಲ್‌ ಆರ್ಥಿಕತೆಗೆ ಇನ್ನಷ್ಟು ವೇಗ ಮತ್ತು ಪುಷ್ಟಿ ಲಭಿಸಲಿದೆ. ಇ-ರೂಪಾಯಿಯು ಸದ್ಯ ದೇಶದಲ್ಲಿ ಚಲಾವಣೆಯಲ್ಲಿರುವ ಹಣದ ರೂಪಗಳಿಗೆ ಹೆಚ್ಚುವರಿ ಆಯ್ಕೆಯನ್ನು ಒದಗಿಸಲಿದೆ. ಇದರಿಂದಾಗಿ ಸಹಜವಾಗಿಯೇ ಡಿಜಿಟಲ್‌ ವ್ಯವಹಾರ ಮತ್ತು ವಹಿವಾಟು ವೃದ್ಧಿಯಾಗುವ ನಿರೀಕ್ಷೆ ಇದೆ.

ಈ ಬಾರಿಯ ಕೇಂದ್ರ ಬಜೆಟ್‌ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆರ್‌ಬಿಐ ಅಧಿಕೃತ ಡಿಜಿಟಲ್‌ ಕರೆನ್ಸಿಯನ್ನು ಚಲಾವಣೆಗೆ ತರಲಿದೆ ಎಂದು ಘೋಷಿಸಿದ್ದರು. ಅದರಂತೆ ಈಗ ಆರ್‌ಬಿಐ ಇ-ರೂಪಾಯಿಯನ್ನು ಚಲಾವಣೆಗೆ ತರಲು ಸನ್ನದ್ಧವಾಗಿದೆ. ಸದ್ಯ ವಿಶ್ವಾದ್ಯಂತ ಖಾಸಗಿ ಡಿಜಿಟಲ್‌ ಕರೆನ್ಸಿಗಳು ಚಲಾವಣೆಯಲ್ಲಿದ್ದು ಭಾರೀ ಸದ್ದು ಮಾಡುತ್ತಿವೆ. ಆದರೆ ಇಂಥ ವ್ಯವಹಾರಗಳಲ್ಲಿ ಸುರಕ್ಷತೆಯ ಖಾತರಿ ಇರುವುದಿಲ್ಲ ಮಾತ್ರವಲ್ಲದೆ ಇಂಥ ಕರೆನ್ಸಿಗಳನ್ನು ಬಳಸಿ ಮಾಡುವ ವ್ಯವಹಾರಕ್ಕೆ ಪ್ರತ್ಯೇಕ ಶುಲ್ಕವನ್ನು ಕಂಪೆನಿಗಳು ವಿಧಿಸುತ್ತಿವೆ. ಇವೆಲ್ಲದರಿಂದಾಗಿ ಭಾರತದಲ್ಲಿ ಡಿಜಿಟಲ್‌ ಕರೆನ್ಸಿಯ ಬಗೆಗೆ ಜನರಲ್ಲಿ ಅಷ್ಟೊಂದು ವಿಶ್ವಾಸ ಇರಲಿಲ್ಲ. ಈಗ ಭಾರತೀಯ ರಿಸರ್ವ್‌ ಬ್ಯಾಂಕ್‌ ಬಿಡುಗಡೆ ಮಾಡಲಿರುವ ಡಿಜಿಟಲ್‌ ಕರೆನ್ಸಿಗೆ ದೇಶದ ಅಧಿಕೃತ ಕರೆನ್ಸಿಯ ಮಾನ್ಯತೆ ಇರುವುದರಿಂದ ಹೆಚ್ಚು ವಿಶ್ವಾಸಪೂರ್ಣವಾಗಿರುತ್ತದೆ.

ಆರ್‌ಬಿಐ ಬಿಡುಗಡೆ ಮಾಡಿರುವ ಸಿಬಿಡಿಸಿಯ ಟಿಪ್ಪಣಿಯ ಪ್ರಕಾರ ಜನರು ಮೊಬೈಲ್‌ ಫೋನ್‌ನಲ್ಲಿಯೇ ಡಿಜಿಟಲ್‌ ಕರೆನ್ಸಿಯನ್ನು ಹೊಂದ ಬಹುದಾಗಿದೆ. ಇದಕ್ಕೆ ಸರಕಾರದಿಂದ ಸಂಪೂರ್ಣ ಖಾತರಿ ಇರಲಿದೆ ಮಾತ್ರವಲ್ಲದೆ, ಪ್ರತೀ ವ್ಯವಹಾರವೂ ಆರ್‌ಬಿಐನ ಕಣ್ಗಾವಲಿನಲ್ಲಿಯೇ ನಡೆಯಲಿದೆ. ದೇಶದ ಅಧಿಕೃತ ಡಿಜಿಟಲ್‌ ಕರೆನ್ಸಿ ಇ-ರೂಪಾಯಿಯನ್ನು ಪ್ರಾಯೋಗಿಕ ನೆಲೆಯಲ್ಲಿ ಪರಿಚಯಿಸಲಾಗುತ್ತಿದ್ದು ಅನುಷ್ಠಾನ ಹಂತದಲ್ಲಿನ ಲೋಪದೋಷಗಳು, ಚಲಾವಣೆ ಸಂದರ್ಭದಲ್ಲಿನ ತಾಂತ್ರಿಕ ಸಮಸ್ಯೆ, ಗೊಂದಲ, ಸುರಕ್ಷೆ, ಗ್ರಾಹಕನ ಗೌಪ್ಯತೆ ರಕ್ಷಣೆ ಮತ್ತಿತರ ವಿಷಯಗಳನ್ನು ವಿಸ್ತೃತವಾಗಿ ಅಧ್ಯಯನ ನಡೆಸಲು ತೀರ್ಮಾನಿಸಿದೆ. ಇದೇ ವೇಳೆ ವಿಶ್ವದ ಕೆಲವು ರಾಷ್ಟ್ರಗಳಲ್ಲಿ ಮಾತ್ರವೇ ಸರಕಾರದ ಅಧಿಕೃತ ಇ-ಕರೆನ್ಸಿ ಚಲಾವಣೆಯಲ್ಲಿದ್ದು ನಿರೀಕ್ಷಿತ ಯಶಸ್ಸನ್ನು ಕಂಡಿಲ್ಲ ಎಂಬುದನ್ನು ಕೂಡ ಆರ್‌ಬಿಐ, ಸಿಬಿಡಿಸಿ ಕುರಿತಾಗಿನ ಟಿಪ್ಪಣಿಯಲ್ಲಿ ಬೆಟ್ಟು ಮಾಡಿದ್ದು ಇವೆಲ್ಲವನ್ನೂ ಕೂಲಂಕಷವಾಗಿ ಪರಾಮರ್ಶಿಸಿ ಯಾವುದೇ ಗೊಂದಲ, ಅಕ್ರಮಗಳಿಗೆ ಆಸ್ಪದವಾಗದಂತೆ ಇ-ರೂಪಾಯಿಯನ್ನು ಹಂತಹಂತವಾಗಿ ದೇಶದಲ್ಲಿ ಚಲಾವಣೆಗೆ ತರಲಾಗುವುದು ಎಂದು ಭರವಸೆ ನೀಡಿದೆ. ಈ ಮೂಲಕ ಜನರ ಗೊಂದಲ ಬಗೆಹರಿಸಲು ಮುಂದಾಗಿರುವುದು ಸ್ವಾಗತಾರ್ಹ.

Advertisement

Udayavani is now on Telegram. Click here to join our channel and stay updated with the latest news.

Next