Advertisement

9/11 ಸಿಗದೆ ಜನರ ಪರದಾಟ; ಇ ಸ್ವತ್ತು ತಂತ್ರಾಂಶಕ್ಕೆ ಸರ್ವರ್‌ ಬಾಧೆ

01:41 AM Feb 03, 2022 | Team Udayavani |

ಪುತ್ತೂರು: ದಕ್ಷಿಣ ಕನ್ನಡ, ಉಡುಪಿ ಸಹಿತ ರಾಜ್ಯದ ಹೆಚ್ಚಿನ ಜಿಲ್ಲೆಗಳ ಗ್ರಾಮ ಪಂಚಾಯತ್‌ಗಳಲ್ಲಿ ಇ-ಸ್ವತ್ತು ತಂತ್ರಾಂಶವು ನಾಲ್ಕು ತಿಂಗಳುಗಳಿಂದ ನಿರಂತರವಾಗಿ ಸರ್ವರ್‌ ಡೌನ್‌ ಸಮಸ್ಯೆಗೆ ತುತ್ತಾಗಿ ನಮೂನೆ 9/11 “ಎ’ ಪಡೆಯಲಾಗದೆ ಜನರು ಸಂಕಷ್ಟ ಅನುಭವಿಸುವಂತಾಗಿದೆ. ಇದರ ಪರಿಹಾರಕ್ಕೆ ಗ್ರಾ.ಪಂ. ನಿಂದ ಮೇಲಿನ ಇಲಾಖೆಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

Advertisement

ಲಾಗ್‌ ಇನ್‌ ಆದ ತತ್‌ಕ್ಷಣ ಲಾಗ್‌ ಔಟ್‌!
9/11 ಎಗೆ ಸಂಬಂಧಿಸಿ ಪಂಚಾಯತ್‌ ಸಿಬಂದಿ ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ ದರೂ ಅಪ್ರೂವಲ್‌ ಆಗುತ್ತಿಲ್ಲ. ಲಾಗ್‌ಇನ್‌ ಆದ ಕೂಡಲೇ ಲಾಗ್‌ಔಟ್‌ ಆಗುತ್ತಿದೆ. ಜನರಿಗೆ ಉತ್ತರ ಕೊಡ ಲಾಗುತ್ತಿಲ್ಲ ಎನ್ನುತ್ತಾರೆ ಜನಪ್ರತಿನಿಧಿಗಳು ಹಾಗೂ ಪಿಡಿಒಗಳು. ಅರ್ಜಿ ಸಲ್ಲಿಸಿದ ನಿಗದಿತ ದಿನಗಳಲ್ಲಿ 9/11 ಎ ಹಾಗೂ 9/11 ಬಿ ನೀಡಬೇಕೆಂಬ ನಿಯಮ ಇದ್ದರೂ ಈಗಿನ ಸಮಸ್ಯೆಯಿಂದಾಗಿ ಅದು ಸಾಧ್ಯವಾಗುತ್ತಿಲ್ಲ.

ಏನಿದು ನಮೂನೆ 9 ಮತ್ತು 11?
ಕರ್ನಾಟಕ ಪಂ.ರಾಜ್‌ ಕಾಯ್ದೆ ಪ್ರಕಾರ ಕೃಷಿ ಯೇತರ ಭೂಮಿ ಮತ್ತು ಕಟ್ಟಡಕ್ಕೆ ತೆರಿಗೆ ನಮೂನೆ 9 ಅನ್ನು ಪಿಡಿಒ ನೀಡಬೇಕಾಗುತ್ತದೆ.

ಇದರಲ್ಲಿ ಮಾಲಕನ ಹೆಸರು, ಭಾವಚಿತ್ರ, ಜಾಗದ ಸರ್ವೇ ನಂಬರ್‌, ಆಸ್ತಿಯ ವಿಸ್ತೀರ್ಣ ಇನ್ನಿತರ ವಿವರಗಳು, ಆಸ್ತಿಯ ಚಿತ್ರ, ಯಾವ ವಿವಿಧ ಆಸ್ತಿ, ಛಾಯಾಚಿತ್ರ ಇತರ ಮಾಹಿತಿಯನ್ನು ಭರ್ತಿ ಮಾಡಬೇಕಾಗುತ್ತದೆ. ನಮೂನೆ 11ರಲ್ಲಿ ಕಟ್ಟಡ ತೆರಿಗೆಗಳ ಬೇಡಿಕೆ, ತೆರಿಗೆ ಪಾವತಿಯ ವಿವರ, ಆಸ್ತಿಯ ವಿವರ, ಆಸ್ತಿಯ ಛಾಯಾಚಿತ್ರ, ಮಾಲಕರ ಭಾವಚಿತ್ರ ಸಹಿತ ಇತರ ಮಾಹಿತಿಯನ್ನು ಪಿಡಿಒ ಭರ್ತಿ ಮಾಡಿ, ಡಿಜಿಟಲ್‌ ಸಹಿ ಮಾಡಬೇಕು. 9/11 ಎ ಅನ್ನು ಆ ಫಲಾನುಭವಿಗೆ ನೀಡಬೇಕು.

ಪಿಡಿಒ ಕದಲುವಂತಿಲ್ಲ
ಸರ್ವರ್‌ ಸಮರ್ಪಕವಾಗಿದ್ದಲ್ಲಿ ಒಂದು 9/11 ಎ ಅರ್ಜಿ ಅಪ್‌ಲೋಡ್‌ ಮಾಡಲು 20 ನಿಮಿಷ ಬೇಕಾಗುತ್ತದೆ. ಸರ್ವರ್‌ ಸಮಸ್ಯೆಯಿಂದ 24 ಗಂಟೆ ದಾಟುವುದುಂಟು. ಪ್ರಸ್ತುತ ಸಮಸ್ಯೆ ಏನೆಂದರೆ ಇ-ಸ್ವತ್ತು ತಂತ್ರಾಂಶದಲ್ಲಿ ಹತ್ತಾರು ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಅಪ್‌ಲೋಡ್‌ ಮಾಡುತ್ತಿರುವ ವೇಳೆಯಲ್ಲೇ ಏಕಾಏಕಿ ಲಾಗ್‌ಔಟ್‌ ಆಗುತ್ತಿದೆ. ಇದರಿಂದ ಪುನಃ ಲಾಗ್‌ ಇನ್‌ ಆಗಿ ದಾಖಲೆಪತ್ರ ಸ್ಕ್ಯಾನ್‌ ಮಾಡಿ ಅಪ್‌ಲೋಡ್‌ ಮಾಡಬೇಕು. ಈ ಪ್ರಕ್ರಿಯೆ ಪೂರ್ಣಗೊಳ್ಳುವ ತನಕ ಪಿಡಿಒ ಅಲ್ಲೇ ಇರಬೇಕು. ಏಕೆಂದರೆ ಪಿಡಿಒ ತಂಬಿಂಗ್‌ ಇದ್ದರೆ ಮಾತ್ರ ಇ-ಸ್ವತ್ತು ತಂತ್ರಾಂಶ ಲಾಗ್‌ಇನ್‌ ಆಗುತ್ತದೆ.

Advertisement

ಇದನ್ನೂ ಓದಿ:ನಾಯ್ಸ್ ಕಲರ್‌ಫಿಟ್‌ ಸ್ಮಾರ್ಟ್‌ವಾಚ್‌ ಬಿಡುಗಡೆ; ನಾಲ್ಕು ಬಣ್ಣಗಳಲ್ಲಿ ಲಭ್ಯ

ಪರವಾನಿಗೆ ಪತ್ರ ಸಿಗದು
9/11 “ಎ’ ಇಲ್ಲದೆ ಪಂಚಾಯತ್‌ಗಳಿಂದ ಕಟ್ಟಡ ಪರವಾನಿಗೆ ಪತ್ರಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಕಟ್ಟಡ ಪರವಾನಿಗೆ, 9/11 ಇಲ್ಲದೆ ಸಾಲಕ್ಕೆ ಅರ್ಜಿ ಸಲ್ಲಿಸಲಾಗದು. ಪರವಾನಿಗೆ ಪತ್ರ ಇಲ್ಲದೆ ಸರಕಾರದ ಸಹಾಯಧನದಲ್ಲಿ ನಿರ್ಮಿಸಲಾಗುವ ಮನೆ ಸಹಿತ ಹಲವು ಕಟ್ಟಡ ನಿರ್ಮಾಣ ಆರಂಭಿಸಲಾಗುತ್ತಿಲ್ಲ. ದಿನಂಪ್ರತಿ ಕೆಲವು ಗಂಟೆಗಳವರೆಗೆ ಸರ್ವರ್‌ ಇದ್ದು ಬಳಿಕ ಕೈ ಕೊಡುತ್ತಿದೆ. ದಿನಕ್ಕೆ ಕನಿಷ್ಠ 25 ದಾಖಲೆ ನೀಡುವ ಸಾಮರ್ಥ್ಯ ಇದ್ದರೂ ಈಗ ಮೂರು ನಾಲ್ಕು ದಾಖಲೆ ನೀಡಲಾಗದ ಸ್ಥಿತಿ ಗ್ರಾ.ಪಂ.ಗಳದ್ದು. ನೆಟ್‌ವರ್ಕ್‌ ಇಲ್ಲದ ಕಡೆಗಳಲ್ಲಿ ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.

ಏನಿದು ಸಮಸ್ಯೆ?
ಗ್ರಾ.ಪಂ. ವ್ಯಾಪ್ತಿಯಲ್ಲಿ ವಾಣಿಜ್ಯ ಅಥವಾ ವಾಸ್ತವ್ಯ ಆಧಾರಿತ ಕಟ್ಟಡ ನಿರ್ಮಿಸಲು ಆ ಸ್ಥಳ ಕನ್ವರ್ಷನ್‌ ಆಗಿರಬೇಕು. ಕನ್ವರ್ಷನ್‌ ಆದ ಬಳಿಕ ಗ್ರಾ.ಪಂ.ನಲ್ಲಿ 9/11ಎಗೆ ಅರ್ಜಿ ಸಲ್ಲಿಸಬೇಕು. ಕನ್ವರ್ಷನ್‌ ನಕ್ಷೆ, ಆದೇಶ ಸಹಿತ ಇತರ ದಾಖಲೆಯೊಂದಿಗೆ ಫಲಾನುಭವಿಯು ಪಂಚಾಯತ್‌ಗೆ ಅರ್ಜಿ ಸಲ್ಲಿಸಿದ ಬಳಿಕ “ಇ ಸ್ವತ್ತು’ ಸಾಫ್ಟ್ವೇರ್‌ ಮೂಲಕ ಗ್ರಾ.ಪಂ. ಸಿಬಂದಿ ಅಪ್‌ಲೋಡ್‌ ಮಾಡಬೇಕು. ಅಪ್‌ಲೋಡ್‌ ಸಾಫ್ಟ್ವೇರ್‌ ಸರ್ವರ್‌ ಸಮಸ್ಯೆಗೆ ಈಡಾದ ಪರಿಣಾಮ ಜನರಿಗೆ 9/11 “ಎ’ ಸಿಗಲು ವಿಳಂಬವಾಗಿದೆ. ನಾಲ್ಕು ತಿಂಗಳ ಹಿಂದೆಯೇ ಸಾಫ್ಟ್ವೇರ್‌ ಅಪ್‌ಡೇಟ್‌ ಪ್ರಕ್ರಿಯೆ ಆರಂಭಗೊಂಡಿದ್ದು ಪೂರ್ಣಗೊಳ್ಳದ ಕಾರಣ ಸಮಸ್ಯೆ ಪರಿಹಾರ ಕಂಡಿಲ್ಲ ಎನ್ನುತ್ತಾರೆ ಗ್ರಾ.ಪಂ. ಸಿಬಂದಿ.

ಪರಿಶೀಲಿಸಿ ಕ್ರಮ
ಎರಡು ತಿಂಗಳ ಹಿಂದೆ ಸರ್ವರ್‌ ಸಮಸ್ಯೆ ಕಂಡು ಬಂದಿತ್ತು. ಅದನ್ನು ಸರಿಪಡಿಸಲಾಗಿದೆ. ಪ್ರಸ್ತುತ ರಾಜ್ಯಮಟ್ಟದಲ್ಲಿ ಸಮಸ್ಯೆ ಇರುವ ಬಗ್ಗೆ ದೂರು ಬಂದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ವರ್‌ ಸ್ಥಿತಿಗತಿ ಬಗ್ಗೆ ಪರಿಶೀಲಿಸಲಾಗುವುದು.
-ಶಿಲ್ಪಾ ನಾಗ್‌, ಕಮಿಷನರ್‌, ರೂರಲ್‌ ಡೆವಲಪ್‌ಮೆಂಟ್‌ ಆ್ಯಂಡ್‌ ಡೈರೆಕ್ಟರ್‌ ಇ-ಗವರ್ನೆನ್ಸ್‌ ಬೆಂಗಳೂರು

- ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next