Advertisement

ಎಲೆಕ್ಟ್ರಾನಿಕ್‌ ವಾಹನ ಆಯಿತು ಇನ್ನು ಇ-ಪ್ಲೇನ್‌ ಸದ್ದು

11:41 PM Jan 04, 2021 | Team Udayavani |

ಜಗತ್ತು ಪರ್ಯಾಯ ಇಂಧನ ಬಳಕೆಯ ಕುರಿತಂತೆ ಗಂಭೀರವಾಗಿ ಚಿಂತಿಸುತ್ತಿದೆ. ಇಂಧನದ ಬದಲು ವಿದ್ಯುತ್ ‌ಚಾಲಿತ ವಿಮಾನಗಳನ್ನು ಬಳಕೆಗೆ ತರುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಇದು ಯಶಸ್ವಿಯಾದಲ್ಲಿ ವಾಯುಮಾಲಿನ್ಯ ಪ್ರಮಾಣ ಕಡಿಮೆಯಾಗಿ ಬಾನಂಗಳದಲ್ಲಿ ಪರಿಸರ ಸ್ನೇಹಿ ವಿಮಾನಗಳು ಹಾರಾಡಲಿವೆ.

Advertisement

ಜಗತ್ತಿನ ಅನೇಕ ದೇಶಗಳಲ್ಲಿ ಬ್ಯಾಟರಿ ಚಾಲಿತ ವಿಮಾನಗಳ ತಯಾರಿ ಕಾರ್ಯ ಪ್ರಾರಂಭವಾಗಿದೆ. ಇವುಗಳ ಆರಂಭಿಕ ಮಾದರಿಗಳು ಸಹ ಕಾಣಿಸಿಕೊಂಡಿವೆ. ಈ ಹೈಬ್ರಿಡ್‌ ವಿಮಾನಗಳು ಸಂಪೂರ್ಣ ವಿದ್ಯುತ್‌ ಚಾಲಿತವಾಗಿರಲಿದ್ದು ಮುಂದಿನ 10-12 ವರ್ಷಗಳಲ್ಲಿ ಹಾರಾಟ ನಡೆಸುವ ಸಾಧ್ಯತೆಗಳಿವೆ. ಹೀಗಾದಲ್ಲಿ ಸದ್ಯ ಹಾರಾಟ ನಡೆಸುತ್ತಿರುವ ಇಂಧನ ಚಾಲಿತ ವಿಮಾನಗಳ ಇಂಗಾಲದ ಹೊರಸೂಸುವಿಕೆ ಸಮಸ್ಯೆ ಸಂಪೂರ್ಣವಾಗಿ ನಿವಾರಣೆ ಯಾಗಲಿದೆ.

ಟಿಕೆಟ್‌ಗಳು ಅಗ್ಗ!: ಅಸ್ತಿತ್ವದಲ್ಲಿರುವ ವಿಮಾನಗಳಿಗೆ ಹೋಲಿಸಿದರೆ ಇ-ಪ್ಲೇನ್‌ನಲ್ಲಿನ ಇಂಧನ ವೆಚ್ಚ ಕಡಿಮೆಯಾಗಲಿದೆ. ಈಗ ಪ್ರಯೋಗ ಹಂತದಲ್ಲಿರುವ ಎಲೆಕ್ಟ್ರಿಕ್‌ ವಿಮಾನಗಳಲ್ಲಿ 100 ಕಿ.ಮೀ. ಪ್ರಯಾಣಕ್ಕೆ 222 ರೂ. ವೆಚ್ಚ ತಗಲಿದೆ. ಹೀಗಾಗಿ ನಿಸ್ಸಂಶಯವಾಗಿಯೂ ಇ-ಪ್ಲೇನ್‌ಗಳು ಅಗ್ಗದ ದರದಲ್ಲಿ ಸೇವೆ ನೀಡಲಿವೆ. ಇ-ಪ್ಲೇನ್‌ ಎಂಜಿನ್‌ಗಳು ಕಡಿಮೆ ಭಾಗಗಳನ್ನು ಹೊಂದಿರುತ್ತವೆ. ಇದು ಅದರ ನಿರ್ವಹಣ ವೆಚ್ಚವನ್ನು ಕಡಿಮೆ ಮಾಡುತ್ತದೆ.

ಟೇಕ್‌-ಆಫ್ ಸುಲಭ: ಇ-ಪ್ಲೇನ್‌ನ ಟೇಕ್‌- ಆಫ್ ಗೆ ಸಣ್ಣ ರನ್‌ವೇಯನ್ನು ಬಳಸಿಕೊಳ್ಳಬಹುದಾಗಿದೆ. ಇದು ವಿಮಾನ ನಿಲ್ದಾಣದ ವೆಚ್ಚವನ್ನು ಕಡಿಮೆ ಮಾಡಲಿದೆ. ಇ-ಪ್ಲೇನ್‌ನ ರೆಕ್ಕೆಗಳು ಚಿಕ್ಕದಾಗಿರುತ್ತವೆ. ಇದು ಸಹಜವಾಗಿ ಬ್ಯಾಟರಿಯ ಸುದೀರ್ಘ‌ ಬಾಳಿಕೆಗೆ ನೆರವಾಗಲಿದೆ. ಸಾಮಾನ್ಯ ಬೋಯಿಂಗ್‌ ಪ್ರಯಾಣಿಕರ ವಿಮಾನದ ರೆಕ್ಕೆಗಳ ಅಗಲವು 35ರಿಂದ 50 ಮೀ. ವರೆಗೆ ಇದ್ದರೆ ಏವಿಯೇಷನ್‌ನ ಇ-ಪ್ಲೇನ್‌ನ “ಎಲ್ಲಿಸ್‌’ ರೆಕ್ಕೆಗಳು 17 ಮೀ.ಗಿಂತ ಕಡಿಮೆ ಅಗಲ ಹೊಂದಿವೆ.

ಪ್ರಯೋಗಾರ್ಥ ಹಾರಾಟ: ಜಗತ್ತಿನ ಹಲವಾರು ಕಂಪೆನಿಗಳು ಇ-ಪ್ಲೇನ್‌ ತಯಾರಿ ಕಾರ್ಯದಲ್ಲಿ ತಲ್ಲೀನವಾಗಿವೆ. ಏವಿಯೇಷನ್‌ ಕಂಪೆನಿ ತಯಾರಿಸಿದ ಎಲ್ಲಿಸ್‌ ಇದಕ್ಕೆ ಉದಾಹರಣೆ. ಪ್ರಸ್ತುತ ಇ-ವಿಮಾನಗಳ ಪ್ರಯಾಣಿಕರ ಸಾಮರ್ಥ್ಯ ಕಡಿಮೆಯಾಗಿದ್ದು, ತಂತ್ರಜ್ಞಾನದ ನೆರವಿನಿಂದ ಅದನ್ನು ಹೆಚ್ಚಿಸಬಹುದಾಗಿದೆ.

Advertisement

ಪ್ರಯೋಜನ ಏನು?: ಬ್ಯಾಟರಿ ಸಾಮರ್ಥ್ಯದಿಂದ ಇ-ಪ್ಲೇನ್‌ಗಳು ಹಾರಾಟ ನಡೆಸುವುದರಿಂದ ಅತೀ ದೂರದ ಪ್ರಯಾಣ ಕಷ್ಟಸಾಧ್ಯ ಎಂದು ಮೂಗುಮುರಿಯುತ್ತಿರುವವರೇ ಹೆಚ್ಚು. ಆದರೆ ಸದ್ಯ ವಿಶ್ವಾದ್ಯಂತ ಚಲಿಸುವ ಒಟ್ಟು ವಿಮಾನಗಳಲ್ಲಿ ಶೇ. 45ರಷ್ಟು ವಿಮಾನಗಳು 800 ಕಿ.ಮೀ.ಗಿಂತಲೂ ಕಡಿಮೆ ದೂರವನ್ನು ಕ್ರಮಿಸುವ ಸಾಮರ್ಥ್ಯವನ್ನು ಮಾತ್ರವೇ ಹೊಂದಿವೆ. ಹೀಗಾಗಿ ಇ-ಪ್ಲೇನ್‌ ಸಹಾಯದಿಂದ ಈ ದೂರವನ್ನು ಸುಲಭವಾಗಿ ಪೂರ್ಣಗೊಳಿಸಬಹುದಾಗಿದೆ. ಪ್ರಸ್ತುತ ಬ್ಯಾಟರಿ ಚಾಲಿತ ಇ-ಪ್ಲೇನ್‌ ಯಾವುದೇ ತೊಂದರೆ ಇಲ್ಲದೆ 400 ಕಿ.ಮೀ.ವರೆಗೆ ಹಾರಲು ಶಕ್ತವಾಗಿದೆ. ಮುಂಬರುವ ದಿನಗಳಲ್ಲಿ ಈ ಸಾಮರ್ಥ್ಯವನ್ನು ಹೆಚ್ಚಿಸಬಹುದು.

ಭಾರತದಲ್ಲಿಯೂ ಪ್ರಯತ್ನ: ಪ್ರಸ್ತುತ ವಿಶ್ವಾದ್ಯಂತ ಸುಮಾರು 170 ಇ-ಪ್ಲೇನ್‌ಗಳ ಯೋಜನೆಗಳು ಕಾರ್ಯರೂಪದಲ್ಲಿವೆ. ಏರ್‌ಬಸ್‌, ಎಂಪೆರ್‌, ಮ್ಯಾಗ್ನಿಎಕ್ಸ್‌ ಮತ್ತು ಏವಿಯೇಷನ್‌ ಇವುಗಳಲ್ಲಿ ಸೇರಿವೆ. ಭಾರತದ ವಿಟಿಒಎಲ್‌ ಏವಿಯೇಷನ್‌ ಇಂಡಿಯಾ ಮತ್ತು ಯುಬಿಫ್ಲೈ ಈ ದಿಕ್ಕಿನಲ್ಲಿ ಪ್ರಯತ್ನಗಳನ್ನು ಮಾಡುತ್ತಿವೆ. ವಿಟಿಒಎಲ್‌ ಏವಿಯೇಷನ್‌ ಇಂಡಿಯಾ “ಅಭಿಗ್ಯಾನ್‌ ಎನ್‌ಎಕ್ಸ್‌’ ಹೆಸರಿನ ಎರಡು ಆಸನಗಳ ವಿಮಾನವನ್ನು ವಿನ್ಯಾಸಗೊಳಿಸಿದೆ. ಫೆಬ್ರವರಿ -2020ರ ಡಿಫೆನ್ಸ್‌ ಎಕ್ಸ್‌ಪೋದಲ್ಲಿ ಇದನ್ನು ಪರಿಚಯಿಸಲಾಗಿತ್ತು.

ಜಾಗತಿಕ ತಾಪಮಾನ ಏರಿಕೆ ಕಾರಣ: ಇಂಟರ್‌ನ್ಯಾಶನಲ್‌ ಕೌನ್ಸಿಲ್‌ ಆನ್‌ ಕ್ಲೀನ್‌ ಟ್ರಾನ್ಸ್‌ಪೊàಟೇìಶನ್‌ನ ಪ್ರಕಾರ, ವಿಮಾನಗಳಿಂದ ವಿಶ್ವದ ಒಟ್ಟು ಇಂಗಾಲದ ಹೊರಸೂಸುವಿಕೆಯು ಈಗ 2.4ರಷ್ಟು ಇದೆ. ವಾಯುಯಾನದ ಭವಿಷ್ಯದ ಬಗ್ಗೆ ಸಂಶೋಧನೆ ನಡೆಸುವ ಸಂಸ್ಥೆಯಾದ ದಿ ಇಂಟರ್‌ನ್ಯಾಶನಲ್‌ ಸಿವಿಲ್‌ ಏವಿಯೇಷನ್‌ ಪ್ರಕಾರ, ವಿಮಾನದಿಂದ ಇಂಗಾಲದ ಹೊರಸೂಸುವಿಕೆಯು 2050ರ ವೇಳೆಗೆ ಮೂರು ಪಟ್ಟು ಹೆಚ್ಚಾಗುತ್ತದೆ ಎಂದಿದೆ. ಇದಕ್ಕೆ ಕಡಿವಾಣ ಹಾಕಲು ಇ-ಪ್ಲೇನ್‌ಗಳು ನೆರವಾಗಬಹುದು.

1800ರ ಯೋಜನೆ ಇದು: ಇ ಪ್ಲೇನ್‌ ಕನಸು 200 ವರ್ಷಗಳ ಹಿಂದೆ ಪ್ರಾರಂಭವಾಗಿತ್ತು. ಏರ್‌ ಅಂಡ್‌ ಸ್ಪೇಸ್‌ ನಿಯತಕಾಲಿಕೆಯ ಪ್ರಕಾರ, 1800ರಲ್ಲಿ ಫ್ರಾನ್ಸ್‌ನ ಮಿಲಿಟರಿ ಎಂಜಿನಿಯರ್‌ಗಳು ಬ್ಯಾಟರಿಗಳ ಸಹಾಯದಿಂದ ವಿಮಾನ ಹಾರಾಟಕ್ಕೆ ಪ್ರಯತ್ನಿಸಿದ್ದರು. 1970ರ ದಶಕದಲ್ಲಿ ಪುನರಾರಂಭವಾಯಿತು. ಆದರೆ ಈ ಪ್ರಯತ್ನವು ಕಡಿಮೆ ದೂರದವರೆಗೆ ತುಂಬಾ ಹಗುರವಾದ ವಿಮಾನಗಳನ್ನು ಹಾರಿಸುವುದಕ್ಕೆ ಸೀಮಿತವಾಗಿತ್ತು. ಸೌರ ವಿಮಾನವನ್ನು ಸಹ ನಿರ್ಮಿಸಲಾಯಿತು. ಆದರೆ ಪ್ರಯಾಣಿಕ ವಿಮಾನಗಳ ಹಾರಾಟ ಪ್ರಯತ್ನ ಮಾತ್ರ ವಿಫ‌ಲವಾಯಿತು.

2021ರಲ್ಲಿ ಪ್ಲೇನ್‌?
ಅತೀದೊಡ್ಡ ವಾಯುಯಾನ ವಲಯದ ಕಂಪೆನಿಗಳು 2021ರಲ್ಲಿ ತನ್ನ ಇ-ಫ್ಯಾನ್‌ ಪ್ಯಾಸೆಂಜರ್‌ ಜೆಟ್‌ನೊಂದಿಗೆ ಮೊದಲ ಹಾರಾಟವನ್ನು ಘೋಷಿಸಿದೆ. ಈ ಹೈಬ್ರಿಡ್‌ ವಿಮಾನಗಳು ಎಟಿಎಫ್ ಬಳಕೆಯನ್ನು ಶೇ. 55ರಷ್ಟು ಕಡಿಮೆ ಮಾಡಬಹುದು. ಇದರಿಂದ ಸಹಜವಾಗಿ ಇಂಧನ ವೆಚ್ಚವನ್ನು ಶೇ. 50ರ ವರೆಗೆ ಕಡಿಮೆ ಮಾಡಬಹುದು. ವಿಮಾನ ಪ್ರಯಾಣ ಅಗ್ಗವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next