“ಈ ಪಟ್ಟಣಕ್ಕೆ ಏನಾಗಿದೆ’ ಎಂಬ ಚಿತ್ರವೊಂದು ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ, ಬಿಡುಗಡೆಯ ಹಂತಕ್ಕೆ ಬಂದಿದ್ದು, ಚಿತ್ರ ಆಗಸ್ಟ್ 4ರಂದು ತೆರೆಕಾಣುತ್ತಿದೆ. ಇತ್ತೀಚೆಗೆ ಚಿತ್ರತಂಡ ಮಾಧ್ಯಮ ಮುಂದೆ ಬಂದು ಚಿತ್ರದ ಟೀಸರ್ ಹಾಗೂ ಕೆಲವು ಹಾಡುಗಳನ್ನು ಪ್ರದರ್ಶಿಸಿತು.
ಸಿಕ್ಕಾಪಟ್ಟೆ ಹಸಿಬಿಸಿ ದೃಶ್ಯಗಳಿಂದ ಕೂಡಿದ ಈ ಸಿನಿಮಾವನ್ನು ಕರ್ನಾಟಕ ಪ್ರಾದೇಶಿಕ ಸೆನ್ಸಾರ್ ಮಂಡಳಿ “ಇದು ಪ್ರದರ್ಶನಕ್ಕೆ ಅನರ್ಹ’ ಸಿನಿಮಾ ಎಂದು ರಿಜೆಕ್ಟ್ ಮಾಡಿದೆ. ಕೊನೆಗೆ ನಿರ್ಮಾಪಕ ಕಂ ನಿರ್ದೇಶಕ ರವಿ ಸುಬ್ಬರಾವ್ ಒಂದಷ್ಟು ದೃಶ್ಯಗಳಿಗೆ ಕತ್ತರಿ ಹಾಕಿ, ಹೈದರಾಬಾದ್‌ನಲ್ಲಿ ಸೆನ್ಸಾರ್ ಮಾಡಿಸಿದ್ದಾರೆ. ಹಾಗಂತ ರವಿ ಸುಬ್ಬರಾವ್ ಅವರಿಗೆ ಯಾವುದೇ ಬೇಸರವಿಲ್ಲ. ಇವತ್ತು ಸಮಾಜದಲ್ಲಿ ನಡೆಯುವ ದೃಶ್ಯಗಳನ್ನು ನೈಜವಾಗಿ ತೋರಿಸಿದ್ದೇನೆ.
ಇವತ್ತಿನ ಯೂತ್ಸ್ ಇಷ್ಟಪಡುತ್ತಾರೆ’ ಎಂದು ಧೈರ್ಯವಾಗಿ ಹೇಳುತ್ತಾರೆ. ಇಷ್ಟೊಂದು ಎಕ್ಸ್‌ಪೋಸ್, ಗ್ಲಾಮರ್ ಗೆರೆ ದಾಟಿದ ದೃಶ್ಯಗಳಿರುವ ಸಿನಿಮಾವನ್ನು ನಿಮ್ಮ ಕುಟುಂಬದವರಿಗೆ ತೋರಿಸಿದ್ರಾ, ನೋಡಿ ಏನಂದ್ರು ಎಂಬ ಪ್ರಶ್ನೆಯೂ ಪತ್ರಿಕಾಗೋಷ್ಠಿಯಲ್ಲಿ ರವಿ ಅವರಿಗೆ ಎದುರಾಯಿತು. “ಈ ಸಿನಿಮಾವನ್ನು ನನ್ನ ಹೆಂಡತಿಗೆ ತೋರಿಸಿದೆ. ಸಿನಿಮಾ ನೋಡಿದ ನಂತರ ಡೈವೋರ್ಸ್ ಕೇಳಿದ್ದಾಳೆ’ ಎಂದು ಬೋಲ್ಡ್ ಆಗಿ ಉತ್ತರಿಸುತ್ತಾರೆ ರವಿ ಸುಬ್ಬರಾವ್.
“ಜೂಜು ಮತ್ತು ಬೆಟ್ಟಿಂಗ್ ಮಾಫಿಯಾದ ಸುತ್ತ ಹೆಣೆಯಲಾಗಿರುವ ಕಥೆ ಇದು. ನಾಯಕ ಈ ಮಾಫಿಯ ಮೂಲಕ ಯುವಜನತೆಯನ್ನು ಮೋಸದ ಜಾಲಕ್ಕೆ ಬೀಳಿಸುತ್ತಾನೆ. ಈಗಿನ ಕಾಲದ ಯುವಕರು ಮನೆಯಲ್ಲಿರುವ ರೀತಿಯೆ ಬೇರೆ. ಆಚೆ ಕಡೆಯಿರುವ ರೀತಿಯೇ ಬೇರೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ಚಿತ್ರದ ಕೊನೆಗೆ ಇವೆಲ್ಲಾ ಮಾಡುವುದು ತಪ್ಪು ಎಂಬ ಸಂದೇಶ ಕೂಡ ಇದೆ. ಹಲವು ಸನ್ನಿವೇಶಗಳನ್ನು ನೈಜವಾಗಿ ತೋರಿಸಿರುವುದರಿಂದ ಕರ್ನಾಟಕದಲ್ಲಿ ನಮ್ಮ ಚಿತ್ರ ಸೆನ್ಸಾರ್ ಆಗಲಿಲ್ಲ’ ಎನ್ನುವುದು ರವಿ ಸುಬ್ಬರಾವ್ ಮಾತು.
ರಾಧಿಕಾ ರಾಮ್ ಈ ಚಿತ್ರದ ನಾಯಕಿ. ಈ ಚಿತ್ರದಲ್ಲಿ ನನ್ನದು ಬೋಲ್ಡ್ ಹುಡುಗಿ ಪಾತ್ರ ಎನ್ನುತ್ತಾ ಪಾತ್ರದ ಬಗ್ಗೆ ವಿವರಿಸಿದರು. ಸಂಗೀತ ನಿರ್ದೇಶಕ ಅನಿಲ್ ಸಿ.ಜೆ, ಹಾಡುಗಳನ್ನು ಬರೆದವರ ಹಾಗೂ ಹಾಡಿದವರ ಹೆಸರುಗಳನ್ನು ಪರಿಚಯಿಸಿದರು.