Advertisement

ಎಲ್ಲಾ ಇಲಾಖೆಗಳಲ್ಲೂ ಇ-ಆಫೀಸ್‌ ಬಳಕೆ ಕಡ್ಡಾಯ

09:06 PM Dec 17, 2019 | Lakshmi GovindaRaj |

ಚಾಮರಾಜನಗರ: ಡಿಜಿಟಲೀಕರಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇ-ಆಫೀಸ್‌ ಅನ್ನು ಕಡ್ಡಾಯಗೊಳಿಸಲಾಗುತ್ತಿದೆ. ಇನ್ನು ಮುಂದೆ ಎಲ್ಲಾ ಇಲಾಖೆಗಳ ಕೆಲಸ-ಕಾರ್ಯಗಳು ಇ-ಆಫೀಸ್‌ ನಲ್ಲಿಯೇ ನಿರ್ವಹಣೆಯಾಗಬೇಕು ಎಂದು ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಠಾರಿಯಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿದರು.

Advertisement

ಕಾರ್ಯಾಗಾರ ಆಯೋಜಿಸಿ: ಸರ್ಕಾರದ ಸೂಚನೆಯಂತೆ ಸರ್ಕಾರಿ ಕಚೇರಿಗಳ ಎಲ್ಲಾ ಇಲಾಖೆಗಳು ಇ-ಆಫೀಸ್‌ ಅಡಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಇದರಿಂದ ಸಮಯ ಉಳಿಯುವುದಲ್ಲದೇ, ಕೆಲಸಗಳು ಶೀಘ್ರವಾಗಿ ಪೂರ್ಣಗೊಳ್ಳಲಿವೆ. ಹೀಗಾಗಿ ಕಾರ್ಯಾಗಾರ ಆಯೋಜಿಸಿ, ಎಲ್ಲಾ ಅಧಿಕಾರಿಗಳಿಗೆ ಇ-ಆಫೀಸ್‌ ನಿರ್ವಹಿಸುವ ಬಗೆಗೆ ತರಬೇತಿ ನೀಡಬೇಕು. ಅಲ್ಲದೆ, ಪ್ರತಿಯೊಂದು ಇಲಾಖೆಗಳಲ್ಲೂ ಇ-ಆಫೀಸ್‌ ತ್ವರಿತ ಜಾರಿಯಾಗಬೇಕು ಎಂದು ಹೇಳಿದರು.

ಆಧಾರ್‌ ಜೋಡಣೆ ಪ್ರಕ್ರಿಯೆ ಪೂರ್ಣಗೊಳಿಸಿ: ಕೃಷಿ ಇಲಾಖೆಯ ಯೋಜನೆಗಳ ಅನುಷ್ಠಾನ ಕುರಿತು ಪರಿಶೀಲಿಸಿದ ಕಠಾರಿಯಾ ಅವರು, ರೈತರಿಗೆ ಸರ್ಕಾರಿ ಯೋಜನೆಗಳ ಸೌಲಭ್ಯ ದೊರೆಯುವಂತಾಗಲು, ಬ್ಯಾಂಕ್‌ ಅಕೌಂಟ್‌ಗೆ ಆಧಾರ್‌ ಲಿಂಕ್‌ ಆಗಿರುವುದು ಅವಶ್ಯ. ಹೀಗಾಗಿ ಜಿಲ್ಲೆಯ ಪ್ರತಿಯೊಬ್ಬ ರೈತರು ತಮ್ಮ ಖಾತೆಗೆ ಆಧಾರ್‌ ಜೋಡಣೆ ಮಾಡಿರುವ ಕುರಿತು ಪರಿಶೀಲನೆ ನಡೆಸಬೇಕು. ಮಾರ್ಗದರ್ಶಿ ಬ್ಯಾಂಕ್‌ ವ್ಯವಸ್ಥಾಪಕರು ವಿಶೇಷ ಗಮನ ತೆಗೆದುಕೊಂಡು ಆಧಾರ್‌ ಜೋಡಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಯೋಜನೆ ಪ್ರಯೋಜನ ಪ್ರಚಾರ ಮಾಡಿ: ಪ್ರಧಾನಮಂತ್ರಿ ಕಿಸಾನ್‌ ಯೋಜನೆಯಡಿ ಇನ್ನೂ ನೋಂದಣಿಯಾಗದ ಜಿಲ್ಲೆಯ ರೈತರನ್ನು ಗುರುತಿಸಿ, ಅವರನ್ನು ಯೋಜನೆಯಡಿ ಸೇರುವಂತೆ ಮಾಡಬೇಕು. ಜತೆಗೆ ಯೋಜನೆಯಲ್ಲಿ ತಿರಸ್ಕೃತವಾದ ಅರ್ಜಿದಾರರಿಗೆ ಅಗತ್ಯ ಮಾರ್ಗದರ್ಶನ ನೀಡಿ ಮತ್ತೂಮ್ಮೆ ನೋಂದಣಿಯಾಗುವಂತೆ ನೋಡಿಕೊಳ್ಳಬೇಕು. ಅಲ್ಲದೆ, ಗ್ರಾಮ ಮಟ್ಟದಿಂದ ಕಿಸಾನ್‌ ಯೋಜನೆಯ ಪ್ರಯೋಜನೆಗಳ ಕುರಿತು ಪ್ರಚಾರ ನೀಡಬೇಕು ಎಂದು ಹೇಳಿದರು.

ಶೇ.100ರಷ್ಟು ಗುರಿ ತಲುಪಲು ನಿರ್ದೇಶನ ನೀಡಿ: ವಿಶೇಷ ಘಟಕ, ಗಿರಿಜನ ಉಪಯೋಜನೆಯಡಿ ಪ್ರತಿ ಇಲಾಖೆಗಳು ನಿಗದಿಪಡಿಸಲಾಗಿರುವ ಗುರಿ ಅನ್ವಯ ಸಾಧನೆ ಮಾಡಬೇಕು. ನಿಗದಿತ ಗುರಿಗಿಂತ ಕಡಿಮೆ ಸಾಧನೆ ಮಾಡಿರುವ ಇಲಾಖೆಗಳ ಬಗ್ಗೆ ವಿಶೇಷ ಒತ್ತು ನೀಡಿ ಕಾರ್ಯಕ್ರಮಗಳ ಪರಾಮರ್ಶೆ ಮಾಡಬೇಕು. ಶೇ.100ರಷ್ಟು ಗುರಿ ತಲುಪಲು ಸೂಕ್ತ ನಿರ್ದೇಶನ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಬೀಜದ ದಾಸ್ತಾನು, ವಿತರಣೆ ಹಾಗೂ ರಸಗೊಬ್ಬರ ಲಭ್ಯತೆ, ಕುಡಿಯುವ ನೀರಿನ ವ್ಯವಸ್ಥೆ, ಅಂತರ್ಜಲ ಮಟ್ಟ, ಕೆರೆ ತುಂಬುವ ಯೋಜನೆಯಡಿ ಜಿಲ್ಲೆಯಲ್ಲಿ ಕೈಗೊಂಡಿರುವ ಪ್ರಗತಿ ಇತರೆ ಇಲಾಖೆಗಳ ಕಾರ್ಯಕ್ರಮಗಳ ಪರಾಮರ್ಶೆ ನಡೆಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಅನಿತಾ ಹದ್ದಣ್ಣನವರ ಮತ್ತು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

* ಡಿಜಿಟಲೀಕರಣ ಉತ್ತೇಜಿಸಲು ಎಲ್ಲಾ ಕೆಲಸ, ಕಾರ್ಯ ಇ-ಆಫೀಸ್‌ನಲ್ಲಿಯೇ ನಿರ್ವಹಿಸಿ.
* ಇ-ಆಫೀಸ್‌ನಿಂದ ಸಮಯ ಉಳಿತಾಯ, ಶೀಘ್ರವಾಗಿ ಪೂರ್ಣಗೊಳ್ಳಲಿವೆ ಕೆಲಸಗಳು.
* ಎಲ್ಲಾ ಅಧಿಕಾರಿಗಳಿಗೆ ಕಾರ್ಯಾಗಾರ ಆಯೋಜಿಸಿ, ಇ-ಆಫೀಸ್‌ ನಿರ್ವಹಣೆಗೆ ತರಬೇತಿ ನೀಡಿ.
* ರೈತರಿಗೆ ಸರ್ಕಾರಿ ಸೌಲಭ್ಯ ಕಲ್ಪಿಸಲು ಬ್ಯಾಂಕ್‌ ಅಕೌಂಟ್‌ಗೆ ಆಧಾರ್‌ ಲಿಂಕ್‌ ಅವಶ್ಯ.
* ಪ್ರತಿಯೊಬ್ಬ ರೈತರು ತಮ್ಮ ಖಾತೆಗೆ ಆಧಾರ್‌ ಜೋಡಣೆ ಮಾಡಿರುವ ಕುರಿತು ಪರಿಶೀಲಿಸಿ.
* ಪ್ರಧಾನಮಂತ್ರಿ ಕಿಸಾನ್‌ ಯೋಜನೆಯಡಿ ನೋಂದಣಿಯಾಗದ ಜಿಲ್ಲೆಯ ರೈತರನ್ನು ಗುರುತಿಸಿ.
* ಗ್ರಾಮ ಮಟ್ಟದಿಂದ ಕಿಸಾನ್‌ ಯೋಜನೆ ಪ್ರಯೋಜನೆಗಳ ಕುರಿತು ಪ್ರಚಾರ ನಡೆಸಿ.
* ನಿಗದಿತ ಗುರಿಗಿಂತ ಕಡಿಮೆ ಸಾಧನೆ ಮಾಡಿರುವ ಇಲಾಖೆಗಳತ್ತ ವಿಶೇಷ ಆದ್ಯತೆ ನೀಡಿ.

Advertisement

Udayavani is now on Telegram. Click here to join our channel and stay updated with the latest news.

Next