Advertisement

ಕೈಮಗ್ಗ ಉತ್ಪನ್ನಕ್ಕೆ ಇ-ಮಾರುಕಟ್ಟೆ ಸೌಲಭ್ಯ

12:59 AM Aug 08, 2019 | Lakshmi GovindaRaj |

ಬೆಂಗಳೂರು: ಮಧ್ಯವರ್ತಿಗಳ ಹಾವಳಿಯಿಂದ ಕೈಮಗ್ಗ ಉತ್ಪನ್ನಕ್ಕೆ ಸರಿಯಾದ ಬೆಲೆ ಸಿಗುತ್ತಿಲ್ಲ. ಆದ್ದರಿಂದ ಇ-ಮಾರುಕಟ್ಟೆ ಸೌಲಭ್ಯ ಒದಗಿಸಿ ನೇಕಾರರಿಗೆ ಉತ್ತೇಜನ ನೀಡಲಾಗುವುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ನಿರ್ದೇಶಕ ಡಾ.ಎಂ.ಆರ್‌.ರವಿ ಹೇಳಿದ್ದಾರೆ.

Advertisement

ರಾಜ್ಯ ಕೈಮಗ್ಗ ಮತ್ತು ಜವಳಿ ಇಲಾಖೆ ಬುಧವಾರ ಕಾಸಿಯಾ ಸಭಾಂಗಣದಲ್ಲಿ ಏರ್ಪಡಿಸಿದ್ದ 5ನೇ ವರ್ಷದ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಮಾತನಾಡಿದ ಅವರು, ನೇಕಾರರು ತಿಂಗಳುಗಳ ಕಾಲ ಶ್ರಮಪಟ್ಟು ಹೊಸ ವಿನ್ಯಾಸದ ಸೀರೆ ಸಿದ್ಧªಪಡಿಸುತ್ತಾರೆ. ಆದರೆ, ಅವರ ಶ್ರಮಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಬೆಲೆ ಸಿಗುವುದಿಲ್ಲ. ಪರಿಣಾಮ, ನೇಕಾರರು ಉದ್ಯಮದಿಂದ ವಿಮುಖರಾಗುತ್ತಿದ್ದಾರೆ. ಆದ್ದರಿಂದ ಇ-ಮಾರುಕಟ್ಟೆ ಸೌಲಭ್ಯ ಒದಗಿಸಲು ನಿರ್ಧರಿಸಲಾಗಿದೆ. ಆನ್‌ಲೈನ್‌ ವ್ಯವಹಾರಗಳು ನಡೆದರೆ, ಉತ್ಪನ್ನಕ್ಕೆ ಗರಿಷ್ಠ ಬೆಲೆ ಸಿಗಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ 27 ಸಾವಿರಕ್ಕೂ ಅಧಿಕ ಕಾರ್ಮಿಕರು ಕೈಮಗ್ಗ ನೇಯ್ಗೆ ಚಟುವಟಿಕೆಯಲ್ಲಿ ನಿರತರಾಗಿದ್ದು, ಸೀರೆ, ಧೋತಿ, ಲುಂಗಿ, ಟವಲ್‌, ಬೆಡ್‌ಶೀಟ್‌, ಹೋಮ್‌ ಫ‌ರ್ನಿಶಿಂಗ್‌, ಟೇಬಲ್‌ ಚಾಪೆ, ಅಡುಗೆ ಮನೆ ಸಾಮಗ್ರಿ, ಉಡುಗೆ ಸಾಮಗ್ರಿ, ಕರವಸ್ತ್ರ ಮುಂತಾದ ಬಟ್ಟೆಗಳನ್ನು ಉತ್ಪಾದಿಸುತ್ತಿದ್ದಾರೆ. ರಾಜ್ಯ ಸರ್ಕಾರ ನೇಕಾರರನ್ನು ಪ್ರೋತ್ಸಾಹಿಸಲು ಒಂದು ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡಿದೆ. ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ದೇಶಿಯ ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ ನೈಸರ್ಗಿಕ ಬಣ್ಣ ಹಾಕಿದ ಸಿದ್ಧ ಉಡುಪುಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನೈಸರ್ಗಿಕ ಬಣ್ಣಗಾರಿಕೆಯ ತಂತ್ರಜ್ಞಾನ ಅಳವಡಿಸಿಕೊಂಡು ಕೈಮಗ್ಗ ಉತ್ಪನ್ನಗಳನ್ನು ನೇಯಬೇಕಿದೆ. ಹೊಸ ವಿನ್ಯಾಸಕ್ಕೆ ಉತ್ತಮ ಬೆಲೆ ಇದೆ. ಬೇರೆ ರಾಜ್ಯಗಳಲ್ಲಿ ಕೈಮಗ್ಗದ ವಸ್ತುಗಳು ಬಹಳ ಪ್ರಚಲಿತವಾಗಿವೆ. ಅದೇ ರೀತಿ ರಾಜ್ಯದಲ್ಲೂ ಜನರಿಗೆ ಕೈಮಗ್ಗದ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.

ರಾಜ್ಯ ವಾಣಿಜ್ಯ ಮತ್ತು ಕೈಗಾರಿಕೆ ಕಾರ್ಯದರ್ಶಿ ಎಂ.ಮಹೇಶ್ವರ ರಾವ್‌ ಮಾತನಾಡಿ, ರಾಜ್ಯದಲ್ಲಿ ನಾಲ್ಕು ಕುಟುಂಬಗಳು ಮಾತ್ರ ಉಡುಪಿ ಸೀರೆ ನೇಯ್ಗೆ ಚಟುವಟಿಕೆ ಮಾಡುತ್ತಿವೆ. ಈ ಸೀರೆ ಉದ್ದಿಮೆ ಹಂತ- ಹಂತವಾಗಿ ಅವನತಿಯತ್ತ ಸಾಗುತ್ತಿದ್ದು, ಕೈಮಗ್ಗದ ಉತ್ಪನ್ನಗಳ ಬಗ್ಗೆ ಪ್ರಚಾರ ಮಾಡಬೇಕಾಗಿದೆ ಎಂದು ಹೇಳಿದರು.

Advertisement

ಇದೇ ವೇಳೆ ಹತ್ತು ಮಂದಿ ನೇಕಾರರಿಗೆ ಗುರುತಿನ ಚೀಟಿ ವಿತರಣೆ, ಕೈಮಗ್ಗ ಮತ್ತು ಜವಳಿ ಇಲಾಖೆಯ ಕಾರ್ಯಕ್ರಮಗಳ ಕೈಪಿಡಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜವಳಿ ಮಂತ್ರಾಲಯ ನೇಕಾರರ ಸೇವಾ ಕೇಂದ್ರದ ಉಪ ನಿರ್ದೇಶಕ ಜವಾಹರ್‌ ಕುನ್‌ಸೋತ್‌, ಜವಳಿ ಇಲಾಖೆ ಜಂಟಿ ನಿರ್ದೇಶಕ ಎಸ್‌.ಪ್ರಕಾಶ್‌, ಇಲಾಖೆ ಅಧಿಕಾರಿ ಮುದ್ದಯ್ಯ ಸೇರಿ ಹಲವರು ಉಪಸ್ಥಿತರಿದ್ದರು.

ನೇಕಾರರಿಗೆ ಸೌಕರ್ಯ ನೀಡದೆ ವಂಚನೆ
ಬೆಂಗಳೂರು: ಕೈಮಗ್ಗ ಮತ್ತು ಜವಳಿ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ಮಿತಿಮೀರಿದೆ. ಇವರೊಂದಿಗೆ ಇಲಾಖೆಯ ಕೆಲವು ಅಧಿಕಾರಿಗಳು ಶಾಮೀಲಾಗಿ ಬಡ ನೇಕಾರರಿಗೆ ಸಿಗಬೇಕಾದ ಸೌಕರ್ಯಗಳನ್ನು ನೀಡದೆ ವಂಚನೆ ಮಾಡಲಾಗುತ್ತಿದೆ. ಇಲಾಖೆಯ ಈ ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಕರ್ನಾಟಕ ನೇಕಾರರ ರಕ್ಷಣಾ ವೇದಿಕೆ ಒತ್ತಾಯಿದೆ.

ನೇಕಾರರಿಗೆ ಸೌಕರ್ಯಗಳನ್ನು ನೀಡದಿರುವುದು ಮತ್ತು ಅಕ್ರಮದ ಬಗ್ಗೆ ಕ್ರಮ ಕೈಗೊಳ್ಳುವಂತೆ ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ನೇಕಾರ ಕುಟುಂಬದ ಸದಸ್ಯರ ಸೇವೆಯನ್ನು ಕಾಯಂ ಮಾಡಿ ಸರ್ಕಾರಿ ನೌಕರರ ಸ್ಥಾನಮಾನ ನೀಡಬೇಕು ಎಂದು ವೇದಿಕೆಯ ಉಪಾಧ್ಯಕ್ಷ ಕೆ.ಟಿ.ನರಸಿಂಹಮೂರ್ತಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next