ಬಾಗಲಕೋಟೆ: ಸಾರ್ವಜನಿಕ ಗ್ರಂಥಾಲಯ ಕೈಗೊಂಡ ಇ-ನೋಂದಣಿ ಪ್ರಕ್ರಿಯೆಗೆ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದ್ದು, ರಾಜ್ಯದ 30 ಜಿಲ್ಲೆಗಳಲ್ಲಿ ಬೆಂಗಳೂರು ನಗರ ಹೊರತುಪಡಿಸಿ ಅತೀ ಹೆಚ್ಚು ಜನರು ನೋಂದಣಿ ಮಾಡಿಕೊಂಡು ಪುಸ್ತಕ ಓದಿದವರಲ್ಲಿ ಬಾಗಲಕೋಟೆ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ.
ಹೌದು. ಕಳೆದ ಮಾರ್ಚ್ 24ರಿಂದ ಲಾಕ್‌ಡೌನ್ ಮುಂದುವರಿದಿದ್ದು, ಈ ವೇಳೆ ಗ್ರಂಥಾಲಯಗಳು ಬಾಗಿಲು ಮುಚ್ಚಿವೆ. ಸಾರ್ವಜನಿಕ ಗ್ರಂಥಾಲಯ ಇಲಾಖೆ ಓದುಗರಿಗೆ ಮನೆಯಿಂದಲೇ ಸೌಲಭ್ಯ ಕಲ್ಪಿಸಿದ್ದು, ಇಲಾಖೆ ಆರಂಭಿಸಿದ ಆನ್‌ಲೈನ್ ನೋಂದಣಿ ಮೂಲಕ ಪುಸ್ತಕ ಓದು ಪ್ರಕ್ರಿಯೆ ಯಶಸ್ವಿಯಾಗಿದೆ.
ಮಾರ್ಚ್ 24ರಿಂದ ಇಲ್ಲಿಯವರೆಗೆ ರಾಜ್ಯದ 30 ಜಿಲ್ಲೆಗಳಿಂದ ಒಟ್ಟು 1.38 ಲಕ್ಷ ಜನರು ಆನ್‌ಲೈನ್ ನೋಂದಣಿ ಮಾಡಿಕೊಂಡು ಪುಸ್ತಕ ಓದಿದ್ದಾರೆ. ಲಾಕ್ ಡೌನ್ ವೇಳೆ ಜನರು ಮನೆಯಲ್ಲೇ ಕುಳಿತು ತಮ್ಮ ಮೊಬೈಲ್ ಇಲ್ಲವೇ ಕಂಪ್ಯೂಟರ್‌ನಲ್ಲಿ ನಾಡಿನ ಹೆಸರಾಂತ ಸಾಹಿತಿಗಳ ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಕ, ಕಥೆ, ಕಾದಂಬರಿ ಸಹಿತ ಹಲವಾರು ಪುಸ್ತಕ ಓದಲು ಗ್ರಂಥಾಲಯ ಇಲಾಖೆಯ ಇ-ಗ್ರಂಥಾಲಯ ಸಹಕಾರಿಯಾಗಿದೆ.
ಲಾಕ್‌ಡೌನ್ ಸಂದರ್ಭ ಲಾಕ್ ಫ್ರೀ : ಪುಸ್ತಕ-ಬೆರಳ ತುದಿಯಲ್ಲಿ ಗ್ರಂಥಾಲಯ ಎಂಬ ಸರ್ಕಾರದ ಹೊಸ ಪ್ರಕ್ರಿಯೆಗೆ ಜಿಲ್ಲೆಯ 11 ಸಾವಿರಕ್ಕೂ ಹೆಚ್ಚು ಓದುಗರು, ಮನೆಯಿಂದಲೇ ಇ ಸಾರ್ವಜನಿಕ ಗ್ರಂಥಾಲಯ, ಉಚಿತ ಆ್ಯಪ್ ಮೂಲಕ ನೋಂದಣಿ ಮಾಡಿಕೊಂಡು, ಡಿಜಿಟಲ್ ಗ್ರಂಥಾಲಯ ಉಪಯೋಗಪಡಿಸಿಕೊಂಡು, ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ.
-ಮಲ್ಲಿಕಾರ್ಜುನ ರೆಬಿನಾಳ, ಜಿಲ್ಲಾ ಸಾರ್ವಜನಿಕ ಗ್ರಂಥಾಲಯ ಅಧಿಕಾರಿ.
–ಶ್ರೀಶೈಲ ಕೆ. ಬಿರಾದಾರ