ಬೆಂಗಳೂರು: ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬರುವ ರೋಗಿಗಳ ವೈದ್ಯಕೀಯ ಮಾಹಿತಿಯನ್ನು ಡಿಜಿಟಲೀಕರಿಸಿ, ಇ- ಆಸ್ಪತ್ರೆಗಳಾಗಿ ಪರಿವರ್ತಿಸುವ ವ್ಯವಸ್ಥೆಯಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ.
ದೇಶದಲ್ಲಿ ಇದುವರೆಗೆ 631 ಸರಕಾರಿ ಆಸ್ಪತ್ರೆಗಳನ್ನು ಇ-ಆಸ್ಪತ್ರೆಗಳಾಗಿ ಪರಿವರ್ತಿಸಲಾಗಿದ್ದು ಕರ್ನಾಟಕ ವೊಂದರಲ್ಲೇ 318 ಆಸ್ಪತ್ರೆಗಳನ್ನು ಇ- ಆಸ್ಪತ್ರೆ ಗಳನ್ನಾಗಿಸಿ ಪರಿವರ್ತಿಸಲಾಗಿದೆ.
ಇದುವರೆಗೆ 6.45 ಕೋಟಿ ರೋಗಿಗಳ ವೈದ್ಯಕೀಯ ದಾಖ ಲಾತಿ ವಿವರ ಆನ್‌ಲೈನ್‌ಗೊಳಿಸಲಾಗಿದೆ. ಜತೆಗೆ 66 ಸರಕಾರಿ ಆಸ್ಪತ್ರೆಗಳಲ್ಲಿ ಆನ್‌ಲೈನ್ ಮೂಲಕ ವೈದ್ಯರ ಸಂದರ್ಶನ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಿದೆ.
ಸರಕಾರಿ ಆಸ್ಪತ್ರೆಗಳಲ್ಲಿ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಚಿಕಿತ್ಸೆಗೆ ಬರುವವರಿಗೆ ವೈದ್ಯಕೀಯ ದಾಖಲಾತಿ ಯನ್ನು ಕಾಗದ ರೂಪದಲ್ಲಿ ನೀಡುತ್ತಿದ್ದರು. ಈಗ ಇ- ಆಸ್ಪತ್ರೆಯಲ್ಲಿ ಮಾಹಿತಿ ದಾಖಲಾದರೆ, ಯಾವುದೇ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗುವಾಗ ದಾಖಲೆ ಬೇಕಾಗಿಲ್ಲ. ಯೂನಿಕ್ ಸಂಖ್ಯೆ ಇದ್ದರೆ ಸಾಕು. ವೈದ್ಯರು ತಮ್ಮದೇ ಆದ ಐಡಿಯಲ್ಲಿ ಲಾಗ್ ಇನ್ ಆಗಿ ಚಿಕಿತ್ಸೆ ನೀಡಲಿದ್ದಾರೆ.
ರೋಗಿಯು ಒಂದು ವೇಳೆ ನಿರ್ಲಕ್ಷ್ಯದಿಂದ ಮೃತಪಟ್ಟಲ್ಲಿ ಯಾವ ವೈದ್ಯರು ಯಾವ ರೀತಿಯ ಚಿಕಿತ್ಸೆ ನೀಡಿದ್ದರು, ಎಲ್ಲಿ ಲೋಪವಾಗಿತ್ತು ಎನ್ನುವುದನ್ನು ತಿಳಿಯಲೂ ಸಾಧ್ಯವಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.