Advertisement

ಕರ್ನಾಟಕ ಮೊಬೈಲ್‌ ಒನ್‌ಗೆ ಚುರುಕು ಮುಟ್ಟಿಸಲು ಇ-ಆಡಳಿತ ಸಜ್ಜು

09:23 AM Sep 23, 2017 | Team Udayavani |

ಬೆಂಗಳೂರು: ಸದ್ಯ “ಸೈಲೆಂಟ್‌ ಮೊಡ್‌’ನಲ್ಲಿರುವ ಕರ್ನಾಟಕ ಮೊಬೈಲ್‌ ಒನ್‌ ಯೋಜನೆಯನ್ನು “ಆ್ಯಕ್ಟಿವ್‌ ಮೊಡ್‌’ಗೆ ತರಲು ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಮೂರು ತಿಂಗಳು ಕಾಲಮಿತಿ ಇಟ್ಟುಕೊಂಡು ಇ-ಆಡಳಿತ ಇಲಾಖೆ ಕಾರ್ಯೋನ್ಮುಖವಾಗಿದೆ.

Advertisement

ಈಗಿರುವ ಕರ್ನಾಟಕ ಮೊಬೈಲ್‌ ಒನ್‌ ಆ್ಯಪ್‌ನ್ನು ಮರುವಿನ್ಯಾಸಗೊಳಿಸುವುದು, ಅನಗತ್ಯ ಅಥವಾ ಹೆಚ್ಚು ಬಳಕೆಗೆ ಬಾರದ ಸೇವೆಗಳನ್ನು ತೆಗೆದುಹಾಕುವುದು, ಅದರ ಬದಲಿಗೆ ಉಪಯುಕ್ತ ಸೇವೆಗಳನ್ನು ಸೇರಿಸುವುದು, ಸೇವಾ ಶುಲ್ಕಗಳನ್ನು ಮರುಪರಿಶೀಲಿಸುವುದು ಸೇರಿ ಇಡೀ ಕರ್ನಾಟಕ ಮೊಬೈಲ್‌ ಒನ್‌ ಯೋಜನೆಯನ್ನು ಹೆಚ್ಚು ಸಕ್ರಿಯ, ಸಕಾಲಿಕ ಮತ್ತು ಸಾರ್ವಜನಿಕ ಸ್ನೇಹಿಯನ್ನಾಗಿ ಮಾಡಲು ಇ-ಆಡಳಿತ ಇಲಾಖೆ ಸಮಗ್ರ ಕಾರ್ಯಕ್ರಮವೊಂದನ್ನು ರೂಪಿಸಿದ್ದು, ಈಗಾಗಲೇ ಅದಕ್ಕೆ ಚಾಲನೆ ನೀಡಿದೆ.

ಉದಯವಾಣಿ ವರದಿ ನಂತರ ಸಭೆ: ಕರ್ನಾಟಕ ಮೊಬೈಲ್‌ ಒನ್‌ ಯೋಜನೆಯ ಮಂದಗತಿ ಪ್ರಗತಿ, ತಾಂತ್ರಿಕ ಸಮಸ್ಯೆಗಳು ಮತ್ತು ಆಗಬೇಕಾಗಿರುವ ಸುಧಾರಣೆಗಳ ಬಗ್ಗೆ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಇತ್ತೀಚೆಗೆ ಸಮೀಕ್ಷಾ ವರದಿಯೊಂದನ್ನು ಸಲ್ಲಿಸಿತ್ತು. ಈ ಸಮೀಕ್ಷಾ ವರದಿ ಆಧಾರದಲ್ಲಿ “ಡಿಜಿಟಲ್‌ ಇಂಡಿಯಾದಲ್ಲಿ ಮೊಬೈಲ್‌ ಒನ್‌ ಸೈಲೆಂಟ್‌’ ಎಂಬ ಶೀರ್ಷಿಕೆಯಡಿ “ಉದಯವಾಣಿ’ಯಲ್ಲಿ ಸೆ.11ರಂದು ವಿಶೇಷ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಸೆ.17ರಂದು ಖುದ್ದು ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎಲ್‌.ಕೆ. ಅತೀಕ್‌ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿ ಕರ್ನಾಟಕ ಮೊಬೈಲ್‌ ಒನ್‌ ಯೋಜನೆಗೆ ಮರುಜೀವ ನೀಡುವಂತೆ ಇ-ಆಡಳಿತ ಇಲಾಖೆಗೆ ತಾಕೀತು ಮಾಡಿದ್ದಾರೆ.

ಪ್ರಚಾರ ಅಭಿಯಾನ: ಮೌಲ್ಯಮಾಪನ ಪ್ರಾಧಿಕಾರದ ವರದಿಯಲ್ಲಿ ಬಳಕೆದಾರರು ಮತ್ತು ಸಾರ್ವಜನಿಕರಿಂದ ಕೇಳಿ ಬಂದ ಅಭಿಪ್ರಾಯಗಳು, ಸಲಹೆಗಳು ಮತ್ತು ಪ್ರಾಧಿಕಾರದ ಶಿಫಾರಸುಗಳನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಮೊಬೈಲ್‌ ಒನ್‌ ಯೋಜನೆಗೆ ಹೊಸ ರೂಪ ನೀಡಲಾಗುವುದು. ಯೋಜನೆ ಬಗ್ಗೆ ವ್ಯಾಪಕ ಪ್ರಚಾರದ ಅಗತ್ಯವಿದೆ ಎಂದು ಪ್ರಾಧಿಕಾರ ಹೇಳಿರುವುದರಿಂದ ಪ್ರಚಾರ ಅಭಿಯಾನ ಹಮ್ಮಿಕೊಳ್ಳಲಾಗುವುದು. ಇದಕ್ಕಾಗಿ ಖಾಸಗಿ ಸಂಸ್ಥೆಯೊಂದನ್ನು ನೇಮಕ ಮಾಡಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸ ಲಾಗಿದೆ ಎಂದು ಇ-ಆಡಳಿತ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ಶೇ.33ರಷ್ಟು ಮಂದಿಗೆ ಮಾಹಿತಿ: ವಿವಿಧ ಇಲಾಖೆಗಳ ಸುಮಾರು 4,302 ಸೇವೆಗಳನ್ನು ಮೊಬೈಲ್‌ ಆ್ಯಪ್‌ ಮೂಲಕ ಒದಗಿಸಲು 2014ರಲ್ಲಿ ರಾಜ್ಯ ಸರ್ಕಾರ ಕರ್ನಾಟಕ ಮೊಬೈಲ್‌ ಒನ್‌ ಯೋಜನೆ ಜಾರಿಗೆ ತಂದಿತ್ತು. ಆದರೆ, 658 ಸೇವೆಗಳನ್ನು ಮಾತ್ರ ನೀಡಲಾಗುತ್ತಿತ್ತು. ರಾಜ್ಯದಲ್ಲಿ ಸದ್ಯ ಅಂದಾಜು 6.60 ಕೋಟಿ ಜನಸಂಖ್ಯೆ ಇದ್ದು, ಈ ಪೈಕಿ 6.57 ಕೋಟಿ ಮೊಬೈಲ್‌ ಬಳಕೆದಾರರು ಇದ್ದಾರೆ. ಅಂದರೆ, ಒಟ್ಟು ಜನಸಂಖ್ಯೆಯ ಶೇ.95ರಷ್ಟು ಮಂದಿ ಮೊಬೈಲ್‌ ಹೊಂದಿದ್ದಾರೆ. ಅಂದರೆ ಪ್ರತಿ 100 ಜನರಲ್ಲಿ 99 ಜನ
ಮೊಬೈಲ್‌ ಇಟ್ಟುಕೊಂಡಿದ್ದಾರೆ. ಆದರೆ, ಇದರಲ್ಲಿ  ಕರ್ನಾಟಕ ಮೊಬೈಲ್‌ ಒನ್‌ ಯೋಜನೆಗೆ ನೋಂದಣಿ ಮಾಡಿಸಿಕೊಂಡವರು ಬರೀ 2.53 ಲಕ್ಷ ಮೊಬೈಲ್‌ ಬಳಕೆದಾರರು ಮಾತ್ರ. ಶೇ.0.4ರಷ್ಟು ಮಾತ್ರ ಜನ ಈ ಯೋಜನೆಗೆ ನೋಂದಣಿ ಆಗಿದ್ದಾರೆ. ಪ್ರತಿ 250 ಮೊಬೈಲ್‌ ಬಳಕೆದಾರರಲ್ಲಿ ಒಬ್ಬರು ಮಾತ್ರ ಕರ್ನಾಟಕ ಮೊಬೈಲ್‌ ಒನ್‌ ಯೋಜನೆಯ ಬಳಕೆದಾರರು ಆಗಿದ್ದಾರೆ. ಈ ಯೋಜನೆಯ ಬಗ್ಗೆ ಕೇವಲ ಶೇ.33ರಷ್ಟು ಮಂದಿಗೆ ಮಾತ್ರ ಗೊತ್ತಿದ್ದು, ಶೇ.60ಕ್ಕೂ ಹೆಚ್ಚು ಜನರಿಗೆ ಯೋಜನೆ ಇದೇ ಅನ್ನುವುದೇ ತಿಳಿದಿಲ್ಲ ಎಂದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ವರದಿ ಹೇಳಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next