Advertisement

ಇ ಫೀಡರ್‌ ಬಸ್‌: ಬಿಎಂಟಿಸಿಗೆ ಮೆಟ್ರೋ ನೆರವು

02:46 PM Dec 07, 2020 | Suhan S |

ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ಆದರೆ, “ನಮ್ಮ ಮೆಟ್ರೋ’ಗೆ ಸಂಪರ್ಕ ಸೇವೆ ರೂಪದಲ್ಲಿ ಬಿಎಂಟಿಸಿ ಪರಿಚಯಿಸಲು ಉದ್ದೇಶಿಸಿರುವ ವಿದ್ಯುತ್‌ ಚಾಲಿತ “ಫೀಡರ್‌ ಬಸ್‌’ಗಳಕಾರ್ಯಾಚರಣೆಯಿಂದ ಸಂಸ್ಥೆಗೆ ಆಗಬಹುದಾದ ಖರ್ಚು-ಆದಾಯದ ನಡುವಿನ ಅಂತರ (ವಯಾಬಿಲಿಟಿ ಗ್ಯಾಪ್‌) ನಿಧಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಭರಿಸಲಿದೆ. ಇದರೊಂದಿಗೆ ನಗರದ ಎರಡು ಪ್ರಮುಖ ಸಮೂಹ ಸಾರಿಗೆ ಸಂಸ್ಥೆಗಳು ಒಟ್ಟಿಗೆಕಾರ್ಯನಿರ್ವಹಿಸಲಿವೆ.

Advertisement

ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಸುಮಾರು 90 ಎಲೆಕ್ಟ್ರಿಕ್‌ ಬಸ್‌ಗಳನ್ನು ಮೆಟ್ರೋ ಸಂಪರ್ಕಕ್ಕಾಗಿ ಬಳಸಲು ಸರ್ಕಾರ ಉದ್ದೇಶಿಸಿದೆ. ಈ ಸಂಬಂಧಟೆಂಡರ್‌ ಕೂಡ ಕರೆಯಲಾಗಿದ್ದು, ಅಂತಿಮ ಹಂತದಲ್ಲಿದ್ದು, ಲಾಸ್ಟ್‌ ಮೈಲ್‌ ಕನೆಕ್ಟಿವಿಟಿ ರೀತಿಯಲ್ಲಿಇವು ಪ್ರಯಾಣಿಕರಿಗೆ ಸೇವೆ ನೀಡಲಿವೆ. ಅದರಂತೆನಗರದ ಮೆಟ್ರೋ ನಿಲ್ದಾಣಗಳಿಂದ ಸುತ್ತಲಿನ ವಿವಿಧ ಭಾಗಗಳಿಗೆ ಸಂಚರಿಸಲಿವೆ. ಆದರೆ, ಪ್ರತಿ ಕಿ.ಮೀ.ಕಾರ್ಯಾಚರಣೆಗೆ ಆಗಲಿರುವ ಖರ್ಚು ಮತ್ತು ಆದಾಯದ ನಡುವೆ ತುಸು ಅಂತರ ಕಂಡುಬರುವ ನಿರೀಕ್ಷೆ ಇದೆ. ಇದು ಬಿಎಂಟಿಸಿಗೆ ಹೊರೆಯಾಗಿ ಪರಿಣಮಿಸಲಿದ್ದು, ಇದನ್ನು ಬಿಎಂಆರ್‌ಸಿಎಲ್‌ ಮೂಲಕ ಭರಿಸಲು ಚಿಂತನೆ ನಡೆದಿದೆ.

ಈ ಸಂಬಂಧ ಬಿಎಂಟಿಸಿ ಮತ್ತು ಬಿಎಂಆರ್‌ಸಿಎಲ್‌ ನಡುವೆ ಮಾತುಕತೆ ನಡೆದಿದ್ದು, ಒಡಂಬಡಿಕೆ ಏರ್ಪಡುವ ಸಾಧ್ಯತೆ ಇದೆ. 90 ಎಲೆಕ್ಟ್ರಿಕ್‌ ಬಸ್‌ಗಳನ್ನು ವಿಶೇಷವಾಗಿ ಮೆಟ್ರೋಗೆ ಪ್ರಯಾಣಿಕರನ್ನು ಕರೆತರುವುದಕ್ಕಾಗಿಯೇ ಮೀಸಲಾಗಿರುತ್ತವೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಯಿಂದ ಆಗಬಹುದಾದ “ವಯಾಬಿಲಿಟಿ ಗ್ಯಾಪ್‌’ ನಿಧಿಯನ್ನು ಬಿಎಂಆರ್‌ಸಿಎಲ್‌ನಿಂದ ಪಡೆಯುವ ಪ್ರಸ್ತಾವನೆ ಮುಂದಿಡಲಾಗಿದೆ. ಇದಕ್ಕೆ ಮೌಖಿಕ ಒಪ್ಪಿಗೆ ಕೂಡ ದೊರಕಿದ್ದು, ಶೀಘ್ರ ಅಧಿಕೃತ ಅನುಮೋದನೆ ದೊರೆಯುವ ವಿಶ್ವಾಸ ಇದೆ ಎಂದು ಬಿಎಂಟಿಸಿಯ ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲಖನೌ ಮಾದರಿ?: ಲಖನೌನಲ್ಲಿ ಹೆಚ್ಚು-ಕಡಿಮೆ ಇದೇ ಮಾದರಿ ಅನುಸರಿಸಲಾಗುತ್ತಿದೆ. ಅಲ್ಲಿನ ಮೆಟ್ರೋ ಫೀಡರ್‌ ಸೇವೆಗಳನ್ನು ಸ್ಥಳೀಯ ನಗರ ಸಂಸ್ಥೆ ನಿರ್ವಹಣೆ ಮಾಡುತ್ತಿದ್ದು, ಕಾರ್ಯಾಚರಣೆ ವೆಚ್ಚ ಮತ್ತು ಆದಾಯದ ನಡುವಿನ ಅಂತರ “ವಯಾಬಲಿಟಿ ಗ್ಯಾಪ್‌’ ಅನ್ನು ಮೆಟ್ರೋ ಸಂಸ್ಥೆ ಭರಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ 110 ನಮ್ಮ ಮೆಟ್ರೋ ಫೀಡರ್‌ ಸೇವೆಗಳಿದ್ದು, ಪ್ರತಿಕಿ.ಮೀ. ಕಾರ್ಯಾಚರಣೆಗೆ 60 ರೂ. ಖರ್ಚಾದರೆ, ಆದಾಯ ಕೇವಲ 30-40 ರೂ. ಬರುತ್ತಿದೆ. ಇದೇ ಕಾರಣಕ್ಕೆ ಬಿಎಂಟಿಸಿಗೂ ಇದರ ಬಗ್ಗೆ ನಿರಾಸಕ್ತಿ ಎನ್ನಲಾಗಿದೆ.

ಅಷ್ಟಕ್ಕೂ ಈ ಹಿಂದೆ ಹಲವು ಆ್ಯಪ್‌ ಆಧಾರಿತ ಖಾಸಗಿ ಅಗ್ರಿ ಗೇಟರ್‌ಗಳೊಂದಿಗೆ ಬಿಎಂಆರ್‌ಸಿಎಲ್‌ ಒಪ್ಪಂದ ಮಾಡಿಕೊಂಡಿತ್ತು.ಈಗ ಮತ್ತೂಂದು ಸಮೂಹ ಸಾರಿಗೆ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡರೆ ಇನ್ನಷ್ಟು ಪರಿಣಾಮಕಾರಿಯಾಗಿ ಸೇವೆ ನೀಡಬಹುದು ಎಂಬ ಉದ್ದೇಶ ಇದರ ಹಿಂದಿದೆ. ಆದರೆ, ಯಾವ್ಯಾವ ಮಾರ್ಗಗಳಲ್ಲಿ ಇವು ಕಾರ್ಯಾಚರಣೆ ಮಾಡಬೇಕು ಎನ್ನುವುದನ್ನು ಸ್ವತಃ ಬಿಎಂಆರ್‌ಸಿಎಲ್‌ ಸೂಚಿಸಲಿದೆ. ಅದರಂತೆ ಬಿಎಂಟಿಸಿ ಸೇವೆ ನೀಡಲಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.

Advertisement

90 ಬಸ್‌ಗಳ ಟೆಂಡರ್‌ ಪ್ರಕ್ರಿಯೆ ಪೂರ್ಣ : ಈ ಮಧ್ಯೆ90 ಎಲೆಕ್ಟ್ರಿಕ್‌ ಬಸ್‌ಗಳ ಟೆಂಡರ್‌ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಜೆಬಿಎಂ ಗ್ರೂಪ್‌ (ಎನ್‌ಟಿಪಿಸಿ ಸಹಭಾಗಿತ್ವ ಇದೆ) ಅತಿ ಕಡಿಮೆ ಅಂದರೆ ಪ್ರತಿ ಕಿ.ಮೀ.ಗೆ 51.65 ರೂ. ಕೋಟ್‌ ಮಾಡಿದೆ.

ಆರ್ಥಿಕ ವರ್ಷದ ಆರಂಭದಲ್ಲಿ ಕರೆದಿದ್ದ ಎಲೆಕ್ಟ್ರಿಕ್‌ ಬಸ್‌ಗಳ ಟೆಂಡರ್‌ನಲ್ಲಿ ಜೆಬಿಎಂ ಗ್ರೂಪ್‌ ಮತ್ತು ಒಲೆಕ್ಟ್ರಾ ಗ್ರೀನ್‌ ಟೆಕ್‌ (ಈವೆ ಟ್ರಾನ್ಸ್‌ ಪ್ರೈ.ಲಿ.,) ಎಂಬ ಎರಡು ಕಂಪನಿಗಳು ಭಾಗವಹಿಸಿದ್ದವು. ಈ ಪೈಕಿ ಮೊದಲ ಕಂಪನಿಯು ನಿರ್ವಹಣೆ, ಚಾರ್ಜಿಂಗ್‌ಗೆ ತಗಲುವ ವಿದ್ಯುತ್‌, ಚಾಲಕ ಸೇರಿದಂತೆ ಕಿ.ಮೀ.ಗೆ 51.65 ರೂ.ಗಳಲ್ಲಿ ಎಲೆಕ್ಟ್ರಿಕ್‌ ಬಸ್‌ಗಳ ಪೂರೈಕೆ ಮತ್ತು ಕಾರ್ಯಾಚರಣೆಗೆ ಮುಂದಾಗಿದ್ದರೆ, ಇದೇ ಸೇವೆಯನ್ನು ಒಲೆಕ್ಟ್ರಾ ಗ್ರೀನ್‌ ಟೆಕ್‌ ಸುಮಾರು 61 ರೂ.ಗಳಲ್ಲಿ ನೀಡುವುದಾಗಿ ಹೇಳಿದೆ. ಈ ಹಿನ್ನೆಲೆಯಲ್ಲಿ ಕಡಿಮೆ ಬಿಡ್‌ದಾರ ಜೆಬಿಎಂ ಗ್ರೂಪ್‌ಗೆ ಟೆಂಡರ್‌ ಒಲಿಯಲಿದ್ದು, ಕಾರ್ಯಾದೇಶ ನೀಡುವುದು ಬಾಕಿ ಇದೆ ಎಂದು ಬಿಎಂಟಿಸಿ ಮೂಲಗಳು “ಉದಯವಾಣಿ’ಗೆ ಸ್ಪಷ್ಟಪಡಿಸಿವೆ.

ಸ್ಮಾರ್ಟ್‌ ಸಿಟಿ ಯೋಜನೆ ಅಡಿ ವಿದ್ಯುತ್‌ ಚಾಲಿತ ಬಸ್‌ಗಳ ಗುತ್ತಿಗೆ ಸೇವೆಗೆ ಸಂಬಂಧಿಸಿದಂತೆ ಸತತ ಎರಡನೇ ಬಾರಿ ಕರೆದ ಟೆಂಡರ್‌ ಇದಾಗಿದ್ದು, ಈ ಹಿಂದೆ ಕೇವಲ ಒಂದೇಕಂಪನಿ ಭಾಗವಹಿಸಿತ್ತು. ಪ್ರತಿ ಕಿ.ಮೀ.ಗೆ ಬಿಡ್‌ದಾರರು ಸುಮಾರು 90 ರೂ. ಕೋಟ್‌ ಮಾಡಿದ್ದರು. ಇದಕ್ಕೂ ಮುನ್ನ ಕೇಂದ್ರದ ಫೇಮ್‌-1 ಯೋಜನೆಯಲ್ಲಿ ಇದೇ ಗುತ್ತಿಗೆಆಧಾರದಲ್ಲಿ ವಿದ್ಯುತ್‌ಚಾಲಿತ 12 ಮೀ. ಉದ್ದದ ಬಸ್‌ಗಳಿಗೆ ಟೆಂಡರ್‌ ಕರೆದಾಗ, ಏಳು ಕಂಪನಿಗಳುಭಾಗವಹಿಸಿದ್ದವು ಹಾಗೂ ಕಿ.ಮೀ.ಗೆ ಸುಮಾರು55-60 ರೂ. ಬಿಡ್‌ ಮಾಡಿದ್ದವು.

ಹೊಸವರ್ಷಕ್ಕೆ ರಸ್ತೆಗೆ :  ಪ್ರಸ್ತುತ 90 ಇ-ಬಸ್‌ಗಳ ಉದ್ದ 9 ಮೀ.ಆಗಿದ್ದು, 31 ಆಸನಗಳ ಸಾಮರ್ಥ್ಯ ಹೊಂದಿವೆ. ಹೊಸ ವರ್ಷದ ವೇಳೆಗೆ ಈ ಬಸ್‌ಗಳನ್ನು ರಸ್ತೆಗಿಳಿಸುವ ಗುರಿಯನ್ನು ಬಿಎಂಟಿಸಿ ಹೊಂದಿದೆ. ಇದಕ್ಕಾಗಿ ಬೆಂಗಳೂರು ಸ್ಮಾರ್ಟ್‌ ಸಿಟಿ ಪ್ರೈ.ಲಿ., 50 ಕೋಟಿ ರೂ. ನೀಡುತ್ತಿದೆ. ಇದರ ಬೆನ್ನಲ್ಲೇ ಇನ್ನೂ 300 ಇ-ಬಸ್‌ಗಳನ್ನು ರಸ್ತೆಗಿಳಿಸುವ ಗುರಿ ಇದೆ.

ಈ ರೀತಿಯ ಪ್ರಸ್ತಾವನೆ ಸದ್ಯಕ್ಕೆ ನಮ್ಮ ಮುಂದಿಲ್ಲ. ವಯಾಬಿಲಿಟಿ ಗ್ಯಾಪ್‌ ಫ‌ಂಡ್‌(ವಿಜಿಎಫ್) ಅನ್ನು ಭರಿಸಲು ಬಿಎಂಆರ್‌ಸಿಎಲ್‌ಗೆ ಸದ್ಯದ ಸ್ಥಿತಿಯಲ್ಲಿ ಸಾಧ್ಯವಿಲ್ಲ. ಅಜಯ್‌ ಸೇಠ್, ವ್ಯವಸ್ಥಾಪಕ ನಿರ್ದೇಶಕರು, ಬಿಎಂಆರ್‌ಸಿಎಲ್‌

 

ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next