ನವದೆಹಲಿ: ಜಾರಿ ನಿರ್ದೇಶನಾಲಯ (ಇ.ಡಿ.) ಪಡೆದುಕೊಂಡ ಹೇಳಿಕೆಯ ಪ್ರತಿ ನೀಡುವಂತೆ ನಿರ್ದೇಶಿಸಬೇಕೆಂದು ಕೋರಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸೆ.26ಕ್ಕೆ ನಡೆಯಲಿದೆ. ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ಬೃಜೇಶ್ ಸೇಠಿ ಅವರನ್ನೊಳಗೊಂಡ ನ್ಯಾಯಪೀಠ ಈ ದಿನಾಂಕ ನಿಗದಿ ಮಾಡಿದೆ.
ಕರ್ನಾಟಕದ ಕಾಂಗ್ರೆಸ್ ನಾಯಕನ ಪರ ವಾದಿಸಲು ಆಗಮಿಸಬೇಕಾಗಿದ್ದ ಹಿರಿಯ ನ್ಯಾಯವಾದಿ ಗೈರು ಹಾಜರಾದ ಹಿನ್ನೆಲೆಯಲ್ಲಿ ದಿನಾಂಕದಲ್ಲಿ ಬದಲಾವಣೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಜಾರಿ ನಿರ್ದೇಶನಾಯಕ್ಕೆ ಅಕ್ರಮ ಹಣ ವರ್ಗಾವಣೆಯ ಕಾಯ್ದೆಯ ಅನ್ವಯ ತಮ್ಮನ್ನು ಬಂಧಿಸುವ ಅಧಿಕಾರ ವ್ಯಾಪ್ತಿಯೇ ಇಲ್ಲವೆಂದು ಡಿ.ಕೆ.ಶಿವಕುಮಾರ್ ವಾದಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಕಾಯ್ದೆಯ ಸೆಕ್ಷನ್ 50ರ ಪ್ರಕಾರ ಜಾರಿ ನಿರ್ದೇಶನಾಲಯದ ನಿರ್ದೇಶಕರೇ ಹೇಳಿಕೆ ದಾಖಲು ಮಾಡಲು ಅವಕಾಶ ಇದೆ. ಆದರೆ ಇತರ ಅಧಿಕಾರಿಗಳು ತಮ್ಮಿಂದ ಪಡೆದುಕೊಂಡ ಹೇಳಿಕೆಗಳನ್ನು ತನಿಖಾ ಸಂಸ್ಥೆಗಳ ದಾಖಲೆಗಳಿಂದ ತೆಗೆಯಲಾಗಿದೆ ಎಂದು ಅರಿಕೆ ಮಾಡಿಕೊಂಡಿದ್ದಾರೆ. ಯಾವುದೇ ಹಂತದಲ್ಲಿಯೂ ತಮ್ಮ ವಿರುದ್ಧ ಅಕ್ರಮ ಹಣ ವರ್ಗಾವಣೆಯ ಅನ್ವಯ ಮೊಕದ್ದಮೆ ದಾಖಲಿಸಲು ಸಾಧ್ಯವಿಲ್ಲ ಎಂದು ವಕೀಲರ ಮೂಲಕ ಹೇಳಿಕೊಂಡಿದ್ದಾರೆ.
ಮಲ್ಯ ಸಾಲ ವಿವಾದ: ಮರು ಪರಿಶೀಲನಾ ಅರ್ಜಿ ವಜಾ
ಬೆಂಗಳೂರು: ಎಸ್‌ಬಿಐ ಸೇರಿ 15 ಬ್ಯಾಂಕುಗಳ ಹಾಗೂ ಇತರ ಹಣಕಾಸು ಸಂಸ್ಥೆಗಳಿಂದ ಪಡೆದಿದ್ದ ಒಟ್ಟು ಸಾಲದ ಮೊತ್ತದ ಪೈಕಿ 3,101 ಕೋಟಿ ರೂ. ಠೇವಣಿ ಇಡುವಂತೆ ಸೂಚಿಸಿ “ಸಾಲ ವಸೂಲಾತಿ ಮೇಲ್ಮನವಿ ಪ್ರಾಧಿಕಾರ’ (ಡಿಆರ್‌ಎಟಿ) ನೀಡಿದ್ದ ಆದೇಶ ರದ್ದುಪಡಿಸಲು ನಿರಾಕರಿಸಿದ್ದ ಆದೇಶ ಮರು ಪರಿಶೀಲನೆಗೆ ಕೋರಿ ಉದ್ಯಮಿ ಡಾ. ವಿಜಯ್ ಮಲ್ಯ ಸಲ್ಲಿಸಿದ್ದ ಪುನರ್‌ಪರಿಶೀಲನಾ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯ್ ಮಲ್ಯ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಮುಖ್ಯ ನ್ಯಾ. ಎ.ಎಸ್.ಓಕಾ ಹಾಗೂ ನ್ಯಾ. ಕೃಷ್ಣ ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಡಿಆರ್‌ಎಟಿ ಆದೇಶ ಹಾಗೂ ಅದಕ್ಕೆ ಪೂರಕವಾದ ತಕರಾರು ಅರ್ಜಿಗಳ ಸಂಬಂಧ 2018ರ ಅ.5ರಂದು ಹೈಕೋರ್ಟ್ ಹೊರಡಿಸಿದ ಆದೇಶದಲ್ಲಿ ಮಧ್ಯಪ್ರವೇಶಿಸುವ ಅಥವಾ ಮರು ಪರಿಶೀಲಿಸುವ ಸಮರ್ಪಕ ಕಾರಣಗಳಿಲ್ಲ ಎಂದು ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿತು.